
ಶಿರಸಿ: ಎರಡು ವರ್ಷಗಳಿಗೊಮ್ಮೆ ನಡೆಯುವ ಇಲ್ಲಿನ ಮಾರಿಕಾಂಬಾ ದೇವಿ ಜಾತ್ರೆ ವೇಳೆ ದೇವಿಯನ್ನು ಗದ್ದುಗೆಗೆ ಕರೆದೊಯ್ಯುವ ರಥ ನಿರ್ಮಾಣದ ಸಲುವಾಗಿ ಬಳಸಲು ಬೇಕಾದ ತಾರಿಮರಕ್ಕೆ ಕಚ್ಚು ಹಾಕುವ ಧಾರ್ಮಿಕ ಕಾರ್ಯ ಶುಕ್ರವಾರ ನಡೆಯಿತು.
ಬಿಕ್ನಳ್ಳಿ ಗ್ರಾಮದ ಖಾಸಗಿ ಜಮೀನಿನಲ್ಲಿದ್ದ ಮರವನ್ನು ಪಡೆಯಲಾಗುತ್ತಿದ್ದು, ಅದಕ್ಕೆ ಸಾಂಪ್ರದಾಯಿಕ ಪದ್ಧತಿಯಲ್ಲಿ ಪೂಜೆ ಸಲ್ಲಿಸಲಾಯಿತು. ದೇವಸ್ಥಾನದ ಧರ್ಮದರ್ಶಿ ಮಂಡಳದವರು, ಬಾಬುದಾರರು, ಭಕ್ತರ ಸಮ್ಮುಖದಲ್ಲಿ ಪೂಜೆ ನಡೆದ ಬಳಿಕ ಮರದ ಬುಡಕ್ಕೆ ಕಚ್ಚು ಹಾಕಲಾಯಿತು.
ಉತ್ತರ ದಿಕ್ಕಿನ ನಾಲ್ಕನೇ ಹೊರಬೀಡು ನಡೆಯುವ ಗ್ರಾಮದಲ್ಲೇ ತಾರಿಮರ ಕಡಿಯುವ ಸಂಪ್ರದಾಯವಿದೆ. ಈ ಹಿಂದೆ ಎಸಳೆ ಗ್ರಾಮದ ಕಾಯ್ದಿಟ್ಟ ಅರಣ್ಯ ಪ್ರದೇಶದಿಂದ ಮರ ತರಲಾಗುತ್ತಿತ್ತು. ಈ ಕಾರಣಕ್ಕೆ ಆರು ವರ್ಷಗಳ ಹಿಂದೆ ದೇವಸ್ಥಾನದ ಅಂದಿನ ಧರ್ಮದರ್ಶಿ ಮಂಡಳದ ವಿರುದ್ಧ ಪ್ರಕರಣವೂ ದಾಖಲಾಗಿತ್ತು. ಹೀಗಾಗಿ ಮಾಲ್ಕಿ ಜಮೀನಿನಲ್ಲಿರುವ ಮರ ಪಡೆಯುವ ಸಂಪ್ರದಾಯ ಆರಂಭಗೊಂಡಿದೆ.
ಕಚ್ಚು ಹಾಕಲಾದ ತಾರಿಮರದ ತುಂಡುಗಳನ್ನು ಮಂಗಳವಾರ ಭಕ್ತರು, ಬಡಗಿಗಳು ಎತ್ತಿನ ಬಂಡಿಗಳ ಮೂಲಕ ದೇವಸ್ಥನದ ಎದುರು ತಂದು ಪೂಜೆ ಸಲ್ಲಿಸಲಿದ್ದಾರೆ. ಆ ಬಳಿಕ ರಥ ನಿರ್ಮಾಣ ಪ್ರಕ್ರಿಯೆ ಆರಂಭಗೊಳ್ಳುತ್ತದೆ ಎಂದು ದೇವಸ್ಥಾನದ ಧರ್ಮದರ್ಶಿ ಮಂಡಳದ ಅಧ್ಯಕ್ಷ ರವೀಂದ್ರ ಜಿ.ನಾಯ್ಕ ತಿಳಿಸಿದ್ದಾರೆ.
ವೃಕ್ಷ ಪೂಜೆ ಸಂದರ್ಭದಲ್ಲಿ ಶಾಸಕ ಭೀಮಣ್ಣ ನಾಯ್ಕ, ಉಪಾಧ್ಯಕ್ಷ ಸುಧೇಶ ಜೋಗಳೇಕರ, ಸದಸ್ಯರಾದ ಸುಧೀರ ಹಂದ್ರಾಳ, ವತ್ಸಲಾ ಹೆಗಡೆ, ಶಿವಾನಂದ ಶೆಟ್ಟಿ, ಬಾಬುದಾರ ಪ್ರಮುಖ ಜಗದೀಶ ಗೌಡ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.