ಶಿರಸಿ: ನವದೆಹಲಿಯ ಭಾರತ ಮಂಟಪಂನಲ್ಲಿ ಇತ್ತೀಚೆಗೆ ಜರುಗಿದ ಟೈ ಸ್ಟಾರ್ಟ್ಅಪ್ ಮಹಾಕುಂಭ- 2025ರಲ್ಲಿ ಓಜಿ ಒಪರೇಶನ್ಸ್ ಈಸಿ ಸಂಸ್ಥೆ ಟಾಪ್ ಟೆನ್‌ನಲ್ಲಿ ಸ್ಥಾನ ಪಡೆದಿದೆ.
ಓಜಿ ಸ್ಪಾರ್ಟ್ಅಪ್ ಸ್ಥಾಪಕ ಎಂಬಿಎ ಪದವೀಧರ ಪ್ರಮಥ್ ಹೆಗಡೆ ನೇತೃತ್ವ ವಹಿಸಿ ಮಹಾಕುಂಭದಲ್ಲಿ ಆರ್.ವಿ.ಮ್ಯಾನೇಜ್ಮೆಂಟ್ ಇನ್‌ಸ್ಟಿಟ್ಯೂಟ್ ಪರವಾಗಿ ವಿಷಯ ಮಂಡನೆ ಮಾಡಿದ್ದರು. 8,000ಕ್ಕೂ ಹೆಚ್ಚು ಸ್ಟಾರ್ಟ್ ಅಪ್‌ಗಳಲ್ಲಿ ಈ ತಂಡವು ಮೊದಲ 100 ಫೈನಲಿಸ್ಟ್‌ಗಳ ಪೈಕಿ ಸ್ಥಾನ ಪಡೆದು, ನಂತರ ಅತ್ಯುತ್ತಮ 10 ಆವಿಷ್ಕಾರಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ.
ಓಜಿಯು ಪ್ರಮಥ್ ಹೆಗಡೆ ಸಹಿತ 10 ಮಂದಿಯಿರುವ ತಂಡವಾಗಿದೆ. ಇವರು ರೂಪಿಸಿರುವ ಈ ಆ್ಯಪ್ ಜನರ ಔಷಧೀಯ ಅಗತ್ಯಗಳ ಬಗ್ಗೆ ಮಾಹಿತಿ ನೀಡುತ್ತದೆ. ವಿಶೇಷವಾಗಿ ಜನೌಷಧಿ ಮತ್ತು ಕಂಪನಿ ಔಷಧಿಗಳ ಬೆಲೆ, ಯಾವುದೇ ಔಷಧಿ ಸ್ಥಳೀಯವಾಗಿ ಎಲ್ಲೆಲ್ಲಿ ಲಭಿಸುತ್ತದೆ ಎಂಬ ಮಾಹಿತಿ, ಚಿಕಿತ್ಸೆಯ ಕುರಿತಾಗಿ ಜನತೆ ಮತ್ತು ವೈದ್ಯರ ನಡುವೆ ಸಂವಹನ, ಸಂಪರ್ಕಕ್ಕೆ ಅನುವು ಮಾಡಿಕೊಡುತ್ತದೆ. ಜತೆ ವೈದ್ಯರು ಬರೆದುಕೊಟ್ಟ ಚೀಟಿಯಲ್ಲಿ ಔಷಧಿ ಹೆಸರು ಸ್ಪಷ್ಟವಾಗಿ ತಿಳಿಯದೆ, ಅಂಗಡಿಯವರು ಬೇರೆ ಔಷಧಿ ನೀಡಿ ಅಪಾಯವಾಗುವ ಹೆಚ್ಚಿನ ಸಾಧ್ಯತೆಗಳನ್ನು ತಡೆಯಲು ಎಐ ತಂತ್ರಜ್ಞಾನ ಬಳಸುವಿಕೆಯಿಂದ ಸರಿಯಾದ ಮಾಹಿತಿ ನೀಡಿ ಔಷಧಿ ಅಂಗಡಿಯವರಿಗೂ ನೆರವಾಗುವುದು ಈ ಆ್ಯಪ್‌ನ ವಿಶೇಷತೆಯಾಗಿದೆ. ಪ್ರಮಥ್ ಹೆಗಡೆ ಸಿದ್ದಾಪುರ ತಾಲ್ಲೂಕು ಕಂಚಿಕೈ ಶಿರಗುಣಿಯ ಜಯಪ್ರದಾ ಹಾಗೂ ಗೋಪಾಲ ಹೆಗಡೆ ಪುತ್ರ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.