ಶಿರಸಿ: ‘ನಗರಸಭೆ ಮಾಲಿಕತ್ವದ ಪೈಪ್ ಕಳವು ರಾಜಾರೋಷವಾಗಿ ನಡೆದಿದೆ. ಆದ್ದರಿಂದ ನಗರಸಭೆ ಆಡಳಿತ ಪಕ್ಷ ಬಿಜೆಪಿಯ ಅಧ್ಯಕ್ಷ, ಉಪಾಧ್ಯಕ್ಷರು, ಎಲ್ಲ ಸದಸ್ಯರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಲಿ’ ಎಂದು ನಗರಸಭೆ ವಿರೋಧ ಪಕ್ಷದ ನಾಯಕ ಪ್ರದೀಪ ಶೆಟ್ಟಿ ಆಗ್ರಹಿಸಿದರು.
ನಗರದ ಪತ್ರಿಕಾಭವದನಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿದ ಅವರು, ‘ಶಿರಸಿ ನಗರಸಭೆಯ ಇತಿಹಾಸದಲ್ಲಿ ಬಿಜೆಪಿ ಆಡಳಿತದಲ್ಲಿ ಈ ರೀತಿ ಅಕ್ರಮಕ್ಕೆ ಸಾಕ್ಷಿ ಆಯಿತು. ಇಬ್ಬರು ಬಿಜೆಪಿ ಸದಸ್ಯರು, ಕಾಂಗ್ರೆಸ್ ಸದಸ್ಯರೊಬ್ಬರನ್ನು ಭಾಗಿ ಮಾಡಿಕೊಂಡು ಅವ್ಯವಹಾರ ನಡೆಸಿದರು. ಇದನ್ನು ಖಂಡಿಸುತ್ತೇವೆ’ ಎಂದರು.
‘ಇಂತಹ ಇನ್ನಷ್ಟು ಪ್ರಕರಣ ಬಿಜೆಪಿ ಅವಧಿಯಲ್ಲಿ ನಡೆದಿರುವುದು ಕಂಡು ಬಂದಿದೆ. ಕಾಂಗ್ರೆಸ್ ಸದಸ್ಯರು ಈ ಬಗ್ಗೆ ತನಿಖೆ ನಡೆಸುತ್ತಿದ್ದು, ಪೂರ್ಣ ಪ್ರಮಾಣದ ದಾಖಲೆ ಲಭ್ಯವಾದ ಬಳಿಕ ಬಿಡುಗಡೆ ಮಾಡಲಾಗುತ್ತದೆ’ ಎಂದರು.
‘ಪೈಪ್ ಕಳವುನ ಆರೋಪ ಕೇಳಿಬಂದ ಬಳಿಕ ಶಾಸಕ ಭೀಮಣ್ಣ ನಾಯ್ಕ ಅವರು ಪೌರಾಯುಕ್ತ ಕಾಂತರಾಜು ಅವರಿಗೆ ಅಧಿಕಾರ ನೀಡದಂತೆ ತಡೆದಿರುವುದು ಪಾರದರ್ಶಕತೆಗೆ ಸಾಕ್ಷಿಯಾಗಿದೆ’ ಎಂದರು.
ನಗರಸಭೆ ಸದಸ್ಯರಾದ ಶಮಿಮ್ ಬಾನು, ರುಬೆಕಾ ಫರ್ನಾಂಡೀಸ್, ಶಿಲೂ ವಾಜ್, ವನಿತಾ ಶೆಟ್ಟಿ, ಪ್ರಾನ್ಸಿಸ್ ನೊರೊನ್ಹಾ, ತಾರಾ ನಾಯ್ಕ, ಶ್ರೀಧರ ನಾಯ್ಕ, ದಯಾನಂದ ನಾಯಕ, ಮಧುಕರ ಬಿಲ್ಲವ, ಶೈಲೇಶ್ ಗಾಂಧಿ, ಖಾದರ್ ಆನವಟ್ಟಿ ಇದ್ದರು.
‘ಪಕ್ಷದಿಂದ ಉಚ್ಛಾಟಿಸಿ’
‘ಪೈಪ್ ಕಳವು ಪ್ರಕರಣದಲ್ಲಿ ಭಾಗಿಯಾದ ಕಾಂಗ್ರೆಸ್ ಸದಸ್ಯ ಯಶವಂತ ಮರಾಠೆ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಶಿರಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಶ ಗೌಡ ಅವರು ಜಿಲ್ಲಾ ಘಟಕದ ಅಧ್ಯಕ್ಷ ಸಾಯಿನಾಥ ಗಾಂವಕರ್ ಅವರಿಗೆ ಈಗಾಗಲೇ ಪತ್ರ ಬರೆದಿದ್ದಾರೆ’ ಎಂದು ಪ್ರದೀಪ ಶೆಟ್ಟಿ ಮಾಹಿತಿ ನೀಡಿದರು.
‘ಬಿಜೆಪಿ ಸದಸ್ಯರನ್ನೂ ಉಚ್ಚಾಟನೆ ಮಾಡಬೇಕು. ಅಂತಹ ಸದಸ್ಯರ ಮೇಲೆ ಕ್ರಮ ಕೈಗೊಳ್ಳಲು ಇಲಾಖೆ ವರದಿ ನೀಡಬೇಕಾಗಿದ್ದು ಆ ವರದಿಯ ಮೇಲೆ ಜಿಲ್ಲಾಧಿಕಾರಿಗಳು ಕ್ರಮ ಜರುಗಿಸಲಿದ್ದಾರೆ. ಆದರೆ ಅಂತಹ ಸದಸ್ಯರನ್ನು ನಮ್ಮ ಪಕ್ಷದ ಕಾರ್ಯಕ್ರಮಗಳಿಂದ ದೂರ ಇಡಲಾಗುತ್ತದೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.