
ಶಿರಸಿ: ತಾಲ್ಲೂಕಿನ ದಟ್ಟಡವಿಯಲ್ಲಿರುವ ಪ್ರಸಿದ್ಧ ಪ್ರವಾಸಿ ಕ್ಷೇತ್ರ ಸಹಸ್ರಲಿಂಗದಲ್ಲಿ ಮೊಬೈಲ್ ನೆಟ್ವರ್ಕ್ ಇಲ್ಲದೇ ಜನ ಒದ್ದಾಡಬೇಕಿತ್ತು. ಇದನ್ನು ಗಮನಿಸಿ ಸಾರ್ವಜನಿಕ ವೈಫೈ 7 ಸೌಲಭ್ಯ ಒದಗಿಸಲಾಗಿದ್ದು, ಪ್ರವಾಸಿಗರಿಗೆ ಹಾಗೂ ಅಂಗಡಿಕಾರರಿಗೆ ಸಂಪರ್ಕದ ಜತೆಗೆ ಡಿಜಿಟಲ್ ಪಾವತಿಗೂ ಅನುಕೂಲವಾಗಿದೆ.
ತಾಲ್ಲೂಕಿನಲ್ಲಿ ನಗರದಿಂದ ಅಲ್ಪ ದೂರ ಹೋದರೂ ಮೊಬೈಲ್ ನೆಟ್ವರ್ಕ್ ಸಿಗುವುದೇ ದುಸ್ತರ. ಹೀಗಿರುವಾಗ ಪ್ರವಾಸಿ ಸ್ಥಳಗಳಲ್ಲಿ ಪ್ರವಾಸಿಗರು ಸಹ ಪಡಬಾರದ ಪಾಡು ಪಡಬೇಕು. ಇನ್ನು ಸಹಸ್ರಲಿಂಗದಂಥ ಪ್ರದೇಶದಲ್ಲಿ ಸಹ ನೆಟ್ಟರ್ಕ್ ಸಮಸ್ಯೆ ದೊಡ್ಡ ತಲೆನೋವಾಗಿದ್ದು, ಸಂಪರ್ಕ ಸಿಗದೇ ಪ್ರವಾಸಿಗರು ದಾರಿ ತಪ್ಪಿದ್ದ ಘಟನೆ ಸಹ ನಡೆದಿತ್ತು. ಇಂಥ ಅವಘಡ ತಪ್ಪಿಸಲು ಬಿಎಸ್‌ಎನ್‌ಎಲ್, ಭಾರತ ವೈಫೈ ಹಾಗೂ ಜಿಎನ್‌ಎ ಕಂಪನಿಗಳ ಸಹಯೋಗದೊಂದಿಗೆ ಸಹಸ್ರಲಿಂಗದ ವಾಹನ ನಿಲುಗಡೆ ಸ್ಥಳದಲ್ಲಿ ವೈಫೈ ಸೌಲಭ್ಯ ಕಲ್ಪಿಸಲಾಗಿದೆ.
ಸೋಮವಾರ ಜಿಎನ್ಎ ಕಂಪನಿಯ ನಿರ್ದೇಶಕ ಎಂ.ನಾಗರಾಜ ವೈಫೈ ಸೇವೆಗೆ ಚಾಲನೆ ನೀಡಿ ಮಾತನಾಡಿ, ‘ದುರ್ಗಮ ಹಾಗೂ ಮೊಬೈಲ್ ನೆಟ್ವರ್ಕ್ ಇಲ್ಲದ ಪ್ರದೇಶದಲ್ಲಿನ ಪ್ರವಾಸಿ ತಾಣಗಳಲ್ಲಿ ಪ್ರವಾಸಿಸ್ನೇಹಿ ವ್ಯವಸ್ಥೆ ಕಲ್ಪಿಸಲು ವೈಫೈ ಸೇವೆ ಆರಂಭಿಸಲಾಗಿದೆ. ಈ ಹಿಂದೆ ಯಾಣದಲ್ಲಿ ಕೂಡ ಇದೇ ರೀತಿಯ ವ್ಯವಸ್ಥೆ ಆರಂಭಿಸಲಾಗಿದ್ದು, ಜನರಿಗೆ ಸಾಕಷ್ಟು ಅನುಕೂಲ ಆಗಿದೆ’ ಎಂದರು.
ಸಾಮಾಜಿಕ ಕಾರ್ಯಕರ್ತೆ ರೇಖಾ ಹೆಗಡೆ ಮಾತನಾಡಿ,‘ಜಿಲ್ಲೆಯಲ್ಲಿ ಮೊಬೈಲ್ ನೆಟ್ವರ್ಕ್ ಸಿಗಬೇಕು ಎಂದರೆ ಅದು ದೊಡ್ಡ ಸಾಹಸ. ಇಂಥ ಸನ್ನಿವೇಶದಲ್ಲಿ ಪ್ರವಾಸಿ ಸ್ಥಳದಲ್ಲಿ ಪ್ರವಾಸಿಗರ ಸುರಕ್ಷತೆ, ಸೌಲಭ್ಯಕ್ಕೆ ವೈಫೈ ಕಲ್ಪಿಸಿರುವುದು ಉತ್ತಮವಾದ ಬೆಳವಣಿಗೆಯಾಗಿದೆ. ಮಾಜಿ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಆಸಕ್ತಿಯ ಮೇರೆಗೆ ಕಾಡಿನ ನಡುವೆಯೂ ಡಿಜಿಟಲ್ ಪಾವತಿಗೆ ಅನುಕೂಲಕರ ವಾತಾವರಣ ನಿರ್ಮಾಣವಾಗಿದೆ’ ಎಂದರು.
ಭೈರುಂಬೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅಜಿತಾ ಗೌಡ, ಸೋಂದಾ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಮಚಂದ್ರ ಭಟ್, ಎಪಿಎಂಸಿ ಸದಸ್ಯೆ ಸವಿತಾ ಹೆಗಡೆ, ಪ್ರಮುಖರಾದ ರವೀಂದ್ರ ಭಟ್, ವಿ.ಎನ್.ಹೆಗಡೆ, ಕೃಷ್ಣ ಎಸಳೆ, ಪ್ರಕಾಶ ಹೆಗಡೆ, ಕಿರಣ ಭಟ್, ಚಂದ್ರು ಎಸಳೆ, ರಮೇಶ ದುಭಾಶಿ ಇತರರಿದ್ದರು.
ಸಹಸ್ರಾರು ಪ್ರವಾಸಿಗರು ಬರುವ ಸ್ಥಳದಲ್ಲಿ ಏನಾದರೂ ಅವಘಡ ನಡೆದ ವೇಳೆ ತುರ್ತು ಕಾರ್ಯಾಚರಣೆಗೆ ಮೊಬೈಲ್ ನೆಟ್ವರ್ಕ್ ಇರುತ್ತಿರಲಿಲ್ಲ. ವೈಫೈ ಆರಂಭದಿಂದ ಅಂಥ ಸಂದಿಗ್ದತೆ ದೂರವಾದಂತಾಗಿದೆ.
–ವಿ.ಎನ್.ಹೆಗಡೆ ಸ್ವರ್ಣವಲ್ಲೀ ಸಂಸ್ಥಾನದ ಅಧ್ಯಕ್ಷ
ವೇಗದ ನೆಟ್ವರ್ಕ್ ಲಭ್ಯ
‘ವೈಫೈ-7ನ್ನು ಬಳಸಲು ಶುಲ್ಕ ವಿಧಿಸಲಾಗುತ್ತದೆ. ಸಾಧನವಿರುವ 200 ರಿಂದ 250 ಮೀಟರ್ ವ್ಯಾಪ್ತಿಯಲ್ಲಿ ನೆಟ್ವರ್ಕ್ ಕವರ್ ಆಗಲಿದೆ. ಈ ವ್ಯಾಪ್ತಿಯಲ್ಲಿ ಇರುವ ಗ್ರಾಹಕ ಮೊಬೈಲ್‌ನಲ್ಲಿ ವೈಫೈ ಹುಡುಕಿದಾಗ ನೆಟ್ವರ್ಕ್ ಹೆಸರು ತೋರಿಸುತ್ತದೆ. ಇದನ್ನು ಆ್ಯಕ್ಟಿವ್ ಮಾಡಲು ಮೊಬೈಲ್ ನಂಬರ್ ಹಾಕಬೇಕು. ಸ್ವಲ್ಪ ಹೊತ್ತು ಉಚಿತವಾಗಿ ಇಂಟರ್ನೆಟ್ ಲಭ್ಯವಿರುತ್ತದೆ. ನಂತರಕ್ಕೂ ನೆಟ್ ಬೇಕೆಂದರೆ ಇಂತಿಷ್ಟು ಹಣವನ್ನು ನೀಡಿ ಪ್ಯಾಕೇಜ್ ಖರೀದಿಸಿ ಡಾಟಾ ಪಡೆಯಬಹುದು. ಅತಿ ವೇಗ ಹಾಗೂ ಹೆಚ್ಚು ದೂರ ನೆಟ್ವರ್ಕ್ ಕವರೇಜ್ ಸಿಗಲಿದೆ. ಮಾಮೂಲಿ ವೈಫೈಗಿಂತ ದುಪ್ಪಟ್ಟು ವೇಗ ಹೊಂದಿದೆ. ಡೌನ್‌ಲೋಡ್ ವೇಗ ಸಹ ಹೆಚ್ಚಾಗಿದೆ’ ಎಂದು ಜಿಎನ್ಎ ಕಂಪನಿಯ ಅಧಿಕಾರಿಗಳು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.