ADVERTISEMENT

ಶಿರಸಿ: ಶಾಲಾ ಬಿಸಿಯೂಟಕ್ಕೆ ನೀರಿನ ಕೊರತೆ

​ಪ್ರಜಾವಾಣಿ ವಾರ್ತೆ
Published 29 ಮೇ 2023, 13:45 IST
Last Updated 29 ಮೇ 2023, 13:45 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಶಿರಸಿ: ಶಿರಸಿ ಶೈಕ್ಷಣಿಕ ಜಿಲ್ಲೆಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಆರಂಭ ಕಂಡಿವೆ. ಜೂನ್‌ ತಿಂಗಳು ಸನಿಹದಲ್ಲಿದ್ದರೂ ಮಳೆ ಬಾರದ ಕಾರಣ ಹಲವು ಶಾಲೆಗಳಲ್ಲಿ ಬಿಸಿಯೂಟಕ್ಕೆ ನೀರಿನ ಕೊರತೆ ಎದುರಾಗಿದೆ. 

ಈ ವರ್ಷದ ಮಳೆ ಕೊರತೆ ಶಾಲಾರಂಭಕ್ಕೆ ತೊಂದರೆ ಉಂಟು ಮಾಡಿದೆ. ಸಾಮಾನ್ಯವಾಗಿ ಪ್ರತಿ ವರ್ಷ ಫೆಬ್ರವರಿ, ಮಾರ್ಚ್ ತಿಂಗಳಿನಲ್ಲಿ ಅಕಾಲಿಕ ಮಳೆಯಾಗುತ್ತಿತ್ತು. ಇದರಿಂದಾಗಿ ಬೇಸಿಗೆಯ ಕೊನೆಯಲ್ಲಿ ಬಿಸಿಲ ಝಳವಿದ್ದರೂ ಕುಡಿಯುವ ನೀರಿನ ಕೊರತೆ ಬಾಧಿಸುತ್ತಿರಲಿಲ್ಲ. ಈ ವರ್ಷದ ಮಳೆ ಕೊರತೆಯಿಂದಾಗಿ ಶಾಲಾ ಬಾವಿಗಳು ಬತ್ತಿವೆ. ಕುಡಿಯುವ ನೀರೇ ಇರದಿದ್ದಾಗ ಮಕ್ಕಳ ಬಿಸಿಯೂಟ ತಯಾರಿಕೆಯೂ ಸಾಧ್ಯವಾಗದಂತಾಗಿದೆ. ಇದರ ಜೊತೆ ಶೌಚಾಲಯ ಹಾಗೂ ಮೂತ್ರಾಲಯಗಳಿಗೂ ನೀರಿನ ಕೊರತೆಯ ಸಂಕಷ್ಟ ತಾಗಲಿದೆ.

94 ಶಾಲೆಗಳಲ್ಲಿ ನೀರಿಲ್ಲ

ADVERTISEMENT

ಶಿರಸಿ ಶೈಕ್ಷಣಿಕ ಜಿಲ್ಲೆಯ ಶಾಲೆಗಳ ಕುಡಿಯುವ ನೀರಿನ ಸ್ಥಿತಿ ಗತಿ ಬಗ್ಗೆ ಶಿಕ್ಷಣ ಇಲಾಖೆ ಅಧ್ಯಯನ ನಡೆಸಿದೆ. ಇರದ ಅನ್ವಯ 94 ಶಾಲೆಗಳ ಬಾವಿ ಸಂಪೂರ್ಣ ಬರಿದಾಗಿದೆ‌.  ಉಳಿದ ಹಲವು ಶಾಲೆಗಳ ಬಾವಿಯಲ್ಲಿ ಅಲ್ಪ ಸ್ವಲ್ಪ ನೀರಿದ್ದು, ಮಳೆ ಆರಂಭವಾಗದಿದ್ದರೆ ಕೊರತೆ ಉಂಟಾಗಲಿದೆ. ಶಿರಸಿ 23 ಶಾಲೆಗಳು, ಸಿದ್ದಾಪುರ  25, ಯಲ್ಲಾಪುರ 6, ಮುಂಡಗೋಡ 5, ಹಳಿಯಾಳ ತಾಲ್ಲೂಕಿನ 17 ಹಾಗೂ ಜೊಯಿಡಾ ತಾಲ್ಲೂಕಿನಲ್ಲಿ 18 ಶಾಲೆಗಳಲ್ಲಿ ನೀರು ಸಂಪೂರ್ಣ ಬರಿದಾಗಿದೆ.

ಶಿರಸಿ ತಾಲ್ಲೂಕಿನ ಬನವಾಸಿ ಭಾಗದಲ್ಲಿ 7, ಬಂಡಲ ಭಾಗದಲ್ಲಿ 8 ಶಾಲೆಗಳಲ್ಲಿ ನೀರಿಲ್ಲ. ಉಳಿದ ಪಂಚಾಯ್ತಿಗಳಲ್ಲಿ ತಲಾ ಒಂದೆರಡು ಶಾಲೆಗಳ ಬಾವಿಗಳು ಬತ್ತಿವೆ. ಯಲ್ಲಾಪುರ ತಾಲ್ಲೂಕಿನ ಮಾವಿನಮನೆ, ವಜ್ರಳ್ಳಿ ಭಾಗದ ಶಾಲೆಗಳು, ಮುಂಡಗೋಡ ತಾಲ್ಲೂಕಿನ ಚೌಡಳ್ಳಿ ಭಾಗದ ಶಾಲೆಗಳು, ಜೊಯಿಡಾದ ಅಣಶಿ, ಕುಂಬಾರವಾಡಾ, ಪ್ರಧಾನಿ ಭಾಗದ ಶಾಲೆಗಳಲ್ಲಿ ನೀರಿನ ಸಮಸ್ಯೆ ಗಂಭೀರವಾಗಿದೆ. ಹೀಗಾಗಿ, ಶಿಕ್ಷಣ ಇಲಾಖೆ ಈ ಭಾಗದ ಶಾಲಾರಂಭಕ್ಕೆ ಹಿಂದೇಟು ಹಾಕುತ್ತಿದೆ.

ಕಳೆದ ಮೂರು ದಿನಗಳಿಂದ ಗ್ರಾಮೀಣ ಭಾಗದಲ್ಲಿ ಸಂಚರಿಸುತ್ತಿರುವ ಶಿಕ್ಷಣ ಸಂಯೋಜನಾಧಿಕಾರಿಗಳು ಆ ಭಾಗದ ಪ್ರಮುಖರು, ಗ್ರಾಮ ಪಂಚಾಯಿತಿ ಅಧಿಕಾರಿಗಳು, ಶಾಲಾ ಅಧ್ಯಕ್ಷರು, ಶಿಕ್ಷರೊಂದಿಗೆ  ಚರ್ಚೆ ನಡೆಸಿ ವಿದ್ಯಾರ್ಥಿಗಳಿಗೆ ಅಗತ್ಯ ಪ್ರಮಾಣದ ನೀರು ಪೂರೈಕೆ ಹೇಗೆ ಮಾಡಬಹುದು ಎಂಬ ಬಗ್ಗೆ ಪಟ್ಟಿ ಮಾಡಿಕೊಂಡಿದೆ. ಆದಾಗ್ಯೂ ಹಲವು ಶಾಲೆಗಳಲ್ಲಿ ಮಳೆ ಬಂದರಷ್ಟೇ ನೀರಿನ ಸಮಸ್ಯೆಗೆ ಪರಿಹಾರ ಸಿಗುವ ಭರವಸೆಯಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.