
ಶಿರಸಿ: ತಾಲ್ಲೂಕಿನ ಸೋಂದಾ ಗ್ರಾಮದಲ್ಲಿರುವ ಪುರಾತನ ನೀರಿನ ಮೂಲಗಳು ಕಾಲ ಕಳೆದಂತೆಲ್ಲ ಹೂಳು, ಗಿಡಗಂಟಿಗಳಿಂದ ತುಂಬಿ ವಿನಾಶದತ್ತ ಸಾಗುತ್ತಿದ್ದು, ಇಂತಹ ಕುರುಹುಗಳಿಗೆ ಮರುಜೀವ ನೀಡಲು ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಕೈಜೋಡಿಸಿದೆ. ಪರಿಣಾಮ ಹಳೆಯೂರಿನ ಕಲ್ಯಾಣಿ ಮರುಜೀವ ಪಡೆದಿದೆ.
ಸೋಂದಾ ಅರಸರ ಕಾಲದಲ್ಲಿ ನಿರ್ಮಿಸಿದ್ದ ಹಳೆಯೂರು ಮಜರೆಯಲ್ಲಿರುವ ಶಂಕರ ನಾರಾಯಣ ದೇವಳದ ಬಳಿಯ ಕಲ್ಯಾಣಿ ಇದ್ದೂ ಇಲ್ಲದಂತಹ ಪರಿಸ್ಥಿತಿಯಲ್ಲಿತ್ತು. ಇದನ್ನು ಪರಿಶೀಲಿಸಿ ನರೇಗಾ ಯೋಜನೆಯಡಿ 2024-25ನೇ ಸಾಲಿನಡಿ ಅಂದಾಜು ₹7.23 ಲಕ್ಷ ವೆಚ್ಚದಲ್ಲಿ 589 ಮಾನವ ದಿನಗಳ ಸೃಜನೆಯೊಂದಿಗೆ ಕಲ್ಯಾಣಿ ಪುನಶ್ಚೇತನ ಮಾಡಲಾಗಿದ್ದು, ಕಲ್ಯಾಣಿಯ ಸ್ವರೂಪವೇ ಬದಲಾಗಿದೆ.
‘ಈವರೆಗೆ 2.11 ಲಕ್ಷ ಕೂಲಿ, 3.40 ಲಕ್ಷ ಸಾಮಗ್ರಿ ವೆಚ್ಚ ವ್ಯಯಿಸಿ 13 ಮೀಟರ್ ಉದ್ದ, 11 ಮೀಟರ್ ಅಗಲ ಹಾಗೂ 4.5 ಮೀಟರ್ ಆಳ ವಿಸ್ತರಿಸಿ, ಚಿರೆ ಕಲ್ಲಿನಿಂದ ಆಯತಾಕಾರದ ಆಕೃತಿಯಲ್ಲಿ ರೂಪ ನೀಡಿ ಕಲ್ಯಾಣಿಯ ಸೌಂದರ್ಯವನ್ನೇ ದ್ವಿಗುಣಗೊಳಿಸಲಾಗಿದೆ. ಆರಂಭದಲ್ಲಿ 12 ಸಾವಿರ ಲೀಟರ್ ಸಾಮರ್ಥ್ಯ ಹೊಂದಿದ್ದ ಕಲ್ಯಾಣಿ, ಕಾಮಗಾರಿ ನಂತರ ಅಂದಾಜು 2.37 ಲಕ್ಷ ಲೀಟರ್ ನೀರನ್ನು ಹಿಡಿದಿಡುವ ಸಾಮರ್ಥ್ಯ ಹೊಂದಿದೆ. ಪಾಳುಬಿದ್ದಿದ್ದ ಕಲ್ಯಾಣಿಯನ್ನು ಸ್ವಚ್ಛಗೊಳಿಸಿ, ಹೂಳೆತ್ತಿ ಅದಕ್ಕೆ ಸುತ್ತಲೂ ಕಲ್ಲಿನ ಪಿಚ್ ಆಯತಾಕೃತಿಯಲ್ಲಿ ನಿರ್ಮಿಸಿ ನೀರಿನ ಬಳಕೆಗೆ ಅನುಕೂಲ ಆಗುವಂತೆ ಮೆಟ್ಟಿಲುಗಳನ್ನು ನಿರ್ಮಿಸಲಾಗಿದೆ. ಸುತ್ತಲೂ ಕುಳಿತು ವಿಶ್ರಮಿಸಲು ಹಾಗೂ ಕುಳಿತುಕೊಳ್ಳಲು ಕಟ್ಟೆಯನ್ನು ನಿರ್ಮಿಸಿ ಅನುಕೂಲ ಕಲ್ಪಿಸಲಾಗಿದೆ’ ಎನ್ನುತ್ತಾರೆ ತಾಲ್ಲೂಕು ಪಂಚಾಯಿತಿ ಇಒ ಚನ್ನಬಸಪ್ಪ ಹಾವಣಗಿ.
ದೇವಳಕ್ಕೆ ಸಂಬಂಧಿಸಿದ ಕಲ್ಯಾಣಿ ಗಿಡಗಂಟಿಗಳಿಂದ ಆವೃತವಾಗಿ ಜನಮಾನಸದಿಂದ ದೂರವಾಗಿತ್ತು. ಈಗ ಕಲ್ಯಾಣಿಯ ಸಂಪೂರ್ಣ ಅಭಿವೃದ್ಧಿ ಆಗಿರುವುದು ಮಾದರಿ ಹಾಗೂ ಶ್ಲಾಘನೀಯ ಕಾರ್ಯವಾಗಿದೆರತ್ನಾಕರ ಹೆಗಡೆ ಕಾರ್ಯಾಧ್ಯಕ್ಷ ಜಾಗ್ರತ ವೇದಿಕೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.