ADVERTISEMENT

ಶಾಲಾ, ಕಾಲೇಜುಗಳಲ್ಲಿ ಕೋವ್ಯಾಕ್ಸಿನ್ ಅಭಿಯಾನ- 66 ಸಾವಿರ ಮಕ್ಕಳಿಗೆ ಲಸಿಕೆ ಗುರಿ

​ಪ್ರಜಾವಾಣಿ ವಾರ್ತೆ
Published 2 ಜನವರಿ 2022, 13:46 IST
Last Updated 2 ಜನವರಿ 2022, 13:46 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಕಾರವಾರ: ಕೇಂದ್ರ ಸರ್ಕಾರದ ಸೂಚನೆಯಂತೆ, 15ರಿಂದ 18 ವರ್ಷದ ಒಳಗಿನ ಮಕ್ಕಳಿಗೆ ಕೋವಿಡ್ ಲಸಿಕೆ ನೀಡುವ ಅಭಿಯಾನಕ್ಕೆ ಜ.3ರಂದು ಜಿಲ್ಲೆಯಲ್ಲಿ ಚಾಲನೆ ಸಿಗಲಿದೆ. 66,001 ಮಕ್ಕಳನ್ನು ಫಲಾನುಭವಿಗಳು ಎಂದು ಗುರುತಿಸಲಾಗಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಜಿಲ್ಲಾಧಿಕಾರಿ ಮುಲ್ಲೈ ಮಗಿಲನ್, ‘2007ನೇ ಇಸವಿ ಅಥವಾ ಅದಕ್ಕೂ ಮೊದಲೇ ಜನಿಸಿದ ಮಕ್ಕಳಿಗೆ ಮೊದಲನೇ ಡೋಸ್ ಕೋವ್ಯಾಕ್ಸಿನ್ ಲಸಿಕೆಯನ್ನು ನೀಡಲಾಗುತ್ತದೆ. ಮೊದಲನೇ ಡೋಸ್ ಪಡೆಯುವ ಎಲ್ಲ ಫಲಾನುಭವಿಗಳಿಗೆ, 28 ದಿನಗಳ ನಂತರದಲ್ಲಿ ಎರಡನೇ ಡೋಸ್ ಲಸಿಕೆ ನೀಡಲಾಗುವುದು. ಆಯಾ ಶಾಲಾ– ಕಾಲೇಜುಗಳಲ್ಲೇ ಲಸಿಕೆ ನೀಡಲಾಗುತ್ತದೆ’ ಎಂದು ತಿಳಿಸಿದ್ದಾರೆ.

‘ಕೋವ್ಯಾಕ್ಸಿನ್ ಲಸಿಕೆಯು ಯಾವುದೇ ಅಡ್ಡ ಪರಿಣಾಮಗಳಿಂದ ಕೂಡಿಲ್ಲ. ಲಸಿಕೆಯು ಅತ್ಯಂತ ಸುರಕ್ಷಿತವಾಗಿದೆ. ಜಿಲ್ಲೆಯ 15ರಿಂದ 18 ವರ್ಷದ ಮಕ್ಕಳ ಪೋಷಕರು, ಮಕ್ಕಳಿಗೆ ಲಸಿಕೆ ಹಾಕಿಸಿ ತಮ್ಮ ಮಕ್ಕಳನ್ನು ಕೋವಿಡ್– 19 ಸಾಂಕ್ರಾಮಿಕ ಸೋಂಕಿನಿಂದ ಆಗಬಹುದಾದ ತೊಂದರೆಗಳಿಂದ ರಕ್ಷಿಸಿಕೊಳ್ಳಬೇಕು’ ಎಂದು ಮನವಿ ಮಾಡಿದ್ದಾರೆ.

ADVERTISEMENT

‘ಉತ್ತರ ಕನ್ನಡದಲ್ಲಿ ಇದುವರೆಗೆ, 18 ವರ್ಷಕ್ಕಿಂತ ಮೇಲಿನ ಒಟ್ಟು 10.44 ಲಕ್ಷ ಫಲಾನುಭವಿಗಳಿಗೆ ಮೊದಲನೇ ಡೋಸ್ ಲಸಿಕೆ ನೀಡಲಾಗಿದೆ. ಈ ಪೈಕಿ 8.83 ಲಕ್ಷ ಫಲಾನುಭವಿಗಳು ಎರಡನೇ ಡೋಸ್ ಲಸಿಕೆಯನ್ನು ಪಡೆದಿದ್ದಾರೆ’ ಎಂದು ಮಾಹಿತಿ ನೀಡಿದ್ದಾರೆ.

170 ತಂಡಗಳು:

ಜಿಲ್ಲೆಯಲ್ಲಿ ಜ.3ರಂದು 37 ಸಾವಿರ ಕೋವ್ಯಾಕ್ಸಿನ್ ಡೋಸ್‌ಗಳು ಲಭ್ಯ ಇರಲಿವೆ. ಸುಮಾರು 160 ಶಾಲೆಗಳು ಮತ್ತು ಕಾಲೇಜುಗಳಲ್ಲಿ ಅಭಿಯಾನ ನಡೆಯಲಿದೆ. ವೈದ್ಯರು, ಲಸಿಕಾಕಾರರು ಸೇರಿದಂತೆ ವಿವಿಧ ಸಿಬ್ಬಂದಿಯನ್ನು ಒಳಗೊಂಡ 170 ತಂಡಗಳು ಕಾರ್ಯ ನಿರ್ವಹಿಸಲಿವೆ.

ಮೊದಲ ದಿನ ಜಿಲ್ಲೆಯಲ್ಲಿ 15 ಸಾವಿರ ಲಸಿಕೆ ನೀಡುವ ಗುರಿ ಹೊಂದಲಾಗಿದೆ. ಲಸಿಕೆಯ ಲಭ್ಯತೆ ಆಧರಿಸಿ ಮೂರು ನಾಲ್ಕು ದಿನಗಳಲ್ಲಿ ಶೇ 100ರಷ್ಟು ಪೂರ್ಣಗೊಳಿಸುವ ಉದ್ದೇಶವಿದೆ ಎಂದು ಆರ್.ಸಿ.ಎಚ್.ಒ ಡಾ. ಕ್ಯಾಪ್ಟನ್ ರಮೇಶ ರಾವ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.