ADVERTISEMENT

ಕುಮಟಾ | ಭೈರಪ್ಪ ಕೃತಿಯಲ್ಲಿ ತತ್ವಜ್ಞಾನವೇ ಆತ್ಮ: ಪುಟ್ಟು ಕುಲಕರ್ಣಿ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2025, 4:17 IST
Last Updated 28 ಸೆಪ್ಟೆಂಬರ್ 2025, 4:17 IST
ಕ.ಸಾ.ಪ ಕುಮಟಾ ತಾಲ್ಲೂಕು ಘಟಕ ವತಿಯಿಂದ ಆಯೋಜಿಸಿದ್ದ ಸಾಹಿತಿ ಎಸ್.ಎಲ್. ಭೈರಪ್ಪ ನೆನಪು ಕಾರ್ಯಕ್ರಮದಲ್ಲಿ ಹಿರಿಯ ಚಿಂತಕ ಪುಟ್ಟು ಕುಲಕರ್ಣಿ ಮಾತನಾಡಿದರು
ಕ.ಸಾ.ಪ ಕುಮಟಾ ತಾಲ್ಲೂಕು ಘಟಕ ವತಿಯಿಂದ ಆಯೋಜಿಸಿದ್ದ ಸಾಹಿತಿ ಎಸ್.ಎಲ್. ಭೈರಪ್ಪ ನೆನಪು ಕಾರ್ಯಕ್ರಮದಲ್ಲಿ ಹಿರಿಯ ಚಿಂತಕ ಪುಟ್ಟು ಕುಲಕರ್ಣಿ ಮಾತನಾಡಿದರು   

ಕುಮಟಾ: ‘ಪರ್ವ ಕಾದಂಬರಿ ಬರೆಯುವ ಮುನ್ನ ರಥ ಪಯಣದ ಅನುಭವ ಹೊಂದಲು ಎಸ್.ಎಲ್. ಭೈರಪ್ಪ ಶಿರಸಿಯಿಂದ ಕುಮಟಾವರೆಗೆ ಸುಮಾರು 70 ಕಿ.ಮೀ ಆಟೊ ರಿಕ್ಷಾದಲ್ಲಿ ಪ್ರಯಾಣಿಸಿದ್ದರು’ ಎಂದು ಹಿರಿಯ ಚಿಂತಕ ಪುಟ್ಟು ಕುಲಕರ್ಣಿ ಹೇಳಿದರು.

ಕ.ಸಾ.ಪ ಕುಮಟಾ ತಾಲ್ಲೂಕು ಘಟಕದಿಂದ ಶನಿವಾರ ಆಯೋಜಿಸಿದ್ದ ಸಾಹಿತಿ ಎಸ್.ಎಲ್. ಭೈರಪ್ಪ ನೆನಪು ಕಾರ್ಯಕ್ರಮದಲ್ಲಿ ಭೈರಪ್ಪ ಅವರೊಂದಿಗಿನ ಒಡನಾಟ ಹಂಚಿಕೊಂಡರು.

‘ತತ್ವ ಎನ್ನುವುದು ಆತ್ಮ ಹಾಗೂ ಕೃತಿಯು ಶರೀರ ಆಗಿರಬೇಕು ಎನ್ನುವ ನಿಲುವನ್ನು ಭೈರಪ್ಪ ಹೊಂದಿದ್ದರು. ತತ್ವಜ್ಞಾನ ಆತ್ಮವಾಗಿರುವ ಅಂಶಗಳನ್ನು ಭೈರಪ್ಪನವರ ಕೃತಿಯಲ್ಲಿ ಓದಬಹುದು’ ಎಂದರು.

ADVERTISEMENT

ನಿವೃತ್ತ ಪ್ರಾಧ್ಯಾಪಕ, ಕವಿ ಟಿ.ಜಿ. ಭಟ್ಟ ಹಾಸಣಗಿ, ‘ಆಯಾ ಕಾಲಕ್ಕೆ ಸಲ್ಲುವ ಸಂಗತಿಗಳನ್ನು ಓದುಗರಿಗೆ ನೀಡುವ ಉದ್ದೇಶದಿಂದ ಅಧ್ಯಯನ ಮಾಡಿ ಬರೆಯುವ ವಿಶಿಷ್ಟ ಶಕ್ತಿ ಭೈರಪ್ಪನವರಲ್ಲಿತ್ತು. ಆದ್ದರಿಂದ ಅವರು ಬೌದ್ಧಿಕವಾಗಿ ಭೀಮಕಾಯರಾಗಿದ್ದರು. ಭೈರಪ್ಪ ಪ್ರಾಧ್ಯಾಪಕರಾಗಿದ್ದರೂ ಹೆಚ್ಚಾಗಿ ಧ್ಯಾನಸ್ಥ ಸ್ಥಿತಿಯಲ್ಲೇ ಇರುತ್ತಿದ್ದರು. ಅವರೊಬ್ಬ ಭಾರತೀಯ ಹಾಗೂ ಪಾಶ್ಚಿಮಾತ್ಯ ಸಂಸ್ಕೃತಿಯನ್ನು ಮೈಗೂಡಿಸಿಕೊಂಡು ಬರೆದ ಲೇಖಕ’ ಎಂದು ತಿಳಿಸಿದರು.

ಕ.ಸಾ.ಪ ತಾಲ್ಲೂಕು ಘಟಕದ ಅಧ್ಯಕ್ಷ ಪ್ರಮೋದ ನಾಯ್ಕ, ಕಾರ್ಯದರ್ಶಿ ಪ್ರದೀಪ ನಾಯಕ, ಲಕ್ಷ್ಮಿ ನಾಯ್ಕ, ಮೋಹನ ನಾಯ್ಕ ಕೂಜಳ್ಳಿ, ಗಣಪತಿ ಅಡಿಗುಂಡಿ, ಎಂ.ಎಸ್. ದೊಡಮನಿ, ಸಂಧ್ಯಾ ಹೆಗಡೆ, ಸುರೇಶ ಭಟ್ಟ ಪಾಲ್ಗೊಂಡಿದ್ದರು.

‘ಭೈರಪ್ಪ ಕೃತಿಗಳಿಗೆ ಅತಿ ಹೆಚ್ಚಿನ ಓದುಗರಿದ್ದರು’

ಕ.ಸಾ.ಪ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ರೋಹಿದಾಸ ನಾಯಕ ‘ಭೈರಪ್ಪ ಅವರ ಮೊದಲ ಕಾದಂಬರಿ ‘ಭೀಮಕಾಯ’ವನ್ನು ಸುಲಭ ಸಾಹಿತ್ಯ ಪ್ರಕಾಶನದ ಶ್ರೀಪಾದ ಹೆಗಡೆ ಅವರು ಹಿಂದೆ ಪ್ರಕಟಿಸಿದ್ದು ಕುಮಟಾಕ್ಕೆ ಹೆಮ್ಮೆ ತರುವಂಥ ಸಂಗತಿ. ಜನ ಸಾಮಾನ್ಯರ ಬದುಕಿನ ಸಂಕೀರ್ಣತೆಯನ್ನು ಯಥಾವತ್ತಾಗಿ ಚಿತ್ರಿಸುವ ಭೈರಪ್ಪ ಅವರ ಕೃತಿಗಳಿಗೆ ಅತಿ ಹೆಚ್ಚಿನ ಓದುಗರಿದ್ದರು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.