
ದಾಂಡೇಲಿ: ಉತ್ತರ ಕನ್ನಡ ಜಿಲ್ಲಾ ಬಾಡಿ ಬಿಲ್ಡಿಂಗ್ ಮತ್ತು ಫಿಟ್ನೆಸ್ ಅಸೋಸಿಯೇಷನ್ ಹಾಗೂ ನಗರದ ರೋಟರಿ ಕ್ಲಬ್ ಸಹಯೋಗದೊಂದಿಗೆ ರಾಜ್ಯ ಮಟ್ಟದ ಮಿಸ್ಟರ್ ದಾಂಡೇಲಿ ಸೀಸನ್– 2 ದೇಹಧಾರ್ಡ್ಯ ಸ್ಪರ್ಧೆಯನ್ನು ಫೆ.8ರಂದು ಸಂಜೆ 5 ಗಂಟೆಗೆ ದಾಂಡೇಲಿಯ ಹಳೆ ನಗರಸಭೆಯ ಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ದಾಂಡೇಲಿಯ ರೋಟರಿ ಕ್ಲಬ್ ಅಧ್ಯಕ್ಷ ಅಶುತೋಷ್ ಕುಮಾರ್ ರಾಯ್ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿ, ಮಾತನಾಡಿ, ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶಾಸಕ ಆರ್.ವಿ.ದೇಶಪಾಂಡೆ ಹಾಗೂ ರಾಷ್ಟ್ರಮಟ್ಟದ ದೇಹಧಾರ್ಡ್ಯ ಪಟು ಗೋವಾದ ನಿವೇದ್ ಭಾಗವಹಿಸಲಿದ್ದಾರೆ.
ಯುವಜನತೆಯಲ್ಲಿ ಆರೋಗ್ಯ ಜಾಗೃತಿಯನ್ನು ಮೂಡಿಸುವ ಉದ್ದೇಶದಡಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ದಾಂಡೇಲಿ ಹಾಗೂ ದಾಂಡೇಲಿಯ ಸುತ್ತಮುತ್ತಲ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದ್ದಾರೆ.
ರೋಟರಿ ಕ್ಲಬ್‌ನ ಪ್ರಮುಖರಾದ ಎಸ್.ಜಿ.ಬಿರಾದಾರ ಹಾಗೂ ಉಸ್ಮಾನ್ ಮುನ್ನಾ ವಹಾಬ್ ಮಾತನಾಡಿ, ಅತ್ಯಂತ ವಿಶಿಷ್ಟ ಹಾಗೂ ಶಿಸ್ತುಬದ್ಧವಾಗಿ ನಡೆಯಲಿರುವ ಈ ಸ್ಪರ್ಧೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಬೇಕು. ಸದೃಢ ಆರೋಗ್ಯ ನಿರ್ಮಾಣದ ಕುರಿತಂತೆ ಜನ ಜಾಗೃತಿಯನ್ನು ಮೂಡಿಸುವ ಉದ್ದೇಶದಿಂದ ಈ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು, ಸಾರ್ವಜನಿಕರು ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದರು.
ರೋಟರಿ ಕ್ಲಬ್ ನ ಖಜಾಂಚಿ ಲಿಯೋ ಪಿಂಟೋ, ಆರ್.ಪಿ.ನಾಯ್ಕ, ದೇಹಧಾರ್ಡ್ಯ ಪಟುಗಳಾದ ಯೂಸುಪ್ ಶೇಖ, ಮೆಹಬೂಬು ಪೊಲೀಸ್ ಮತ್ತು ಬಿಲಾಲ್ ಎಚ್.ಜಮದಾರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.