ADVERTISEMENT

ಬಿಜೆಪಿ ದುರಾಡಳಿತದ ವಿರುದ್ಧ ಪ್ರಬಲ ಹೋರಾಟ: ಆರ್.ವಿ.ದೇಶಪಾಂಡೆ

ನವಸಂಕಲ್ಪ ಚಿಂತನಾ ಶಿಬಿರದಲ್ಲಿ ಶಾಸಕ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 15 ಜೂನ್ 2022, 13:27 IST
Last Updated 15 ಜೂನ್ 2022, 13:27 IST
ಶಿರಸಿಯ ತೋಟಗಾರ ಕಲ್ಯಾಣ ಮಂಟಪದಲ್ಲಿ ಬುಧವಾರ ನಡೆದ ಕಾಂಗ್ರೆಸ್ ಪಕ್ಷದ ಜಿಲ್ಲಾಮಟ್ಟದ ನವಸಂಕಲ್ಪ ಚಿಂತನಾ ಶಿಬಿರವನ್ನು ಹಳಿಯಾಳ ಶಾಸಕ ಆರ್.ವಿ.ದೇಶಪಾಂಡೆ, ಕೆಪಿಸಿಸ ಉಪಾಧ್ಯಕ್ಷ ಐವಾನ್ ಡಿಸೋಜಾ ಉದ್ಘಾಟಿಸಿದರು. ಡಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್.ಕೆ.ಭಾಗವತ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ನಿವೇದಿತ್ ಆಳ್ವಾ, ಕಾಂಗ್ರೆಸ್ ಜಿಲ್ಲಾ ಘಟಕದ ಅದ್ಯಕ್ಷ ಭೀಮಣ್ಣ ನಾಯ್ಕ, ಹಿಂದುಳಿದ ವರ್ಗಗಳ ವಿಭಗದ ಜಿಲ್ಲಾಧ್ಯಕ್ಷ ನಾಗರಾಜ ನಾರ್ವೇಕರ, ಮಾಜಿ ಶಾಸಕಿ ಶಾರದಾ ಶೆಟ್ಟಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ರತ್ನಾಕರ, ಸುಷ್ಮಾ ರಾಜಗೋಪಾಲ ಇದ್ದರು.
ಶಿರಸಿಯ ತೋಟಗಾರ ಕಲ್ಯಾಣ ಮಂಟಪದಲ್ಲಿ ಬುಧವಾರ ನಡೆದ ಕಾಂಗ್ರೆಸ್ ಪಕ್ಷದ ಜಿಲ್ಲಾಮಟ್ಟದ ನವಸಂಕಲ್ಪ ಚಿಂತನಾ ಶಿಬಿರವನ್ನು ಹಳಿಯಾಳ ಶಾಸಕ ಆರ್.ವಿ.ದೇಶಪಾಂಡೆ, ಕೆಪಿಸಿಸ ಉಪಾಧ್ಯಕ್ಷ ಐವಾನ್ ಡಿಸೋಜಾ ಉದ್ಘಾಟಿಸಿದರು. ಡಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್.ಕೆ.ಭಾಗವತ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ನಿವೇದಿತ್ ಆಳ್ವಾ, ಕಾಂಗ್ರೆಸ್ ಜಿಲ್ಲಾ ಘಟಕದ ಅದ್ಯಕ್ಷ ಭೀಮಣ್ಣ ನಾಯ್ಕ, ಹಿಂದುಳಿದ ವರ್ಗಗಳ ವಿಭಗದ ಜಿಲ್ಲಾಧ್ಯಕ್ಷ ನಾಗರಾಜ ನಾರ್ವೇಕರ, ಮಾಜಿ ಶಾಸಕಿ ಶಾರದಾ ಶೆಟ್ಟಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ರತ್ನಾಕರ, ಸುಷ್ಮಾ ರಾಜಗೋಪಾಲ ಇದ್ದರು.   

ಶಿರಸಿ: ದೇಶಕ್ಕೆ ಸ್ವಾತಂತ್ರ್ಯ ತಂದುಕೊಡಲು ಅಂದಿನ ರಾಷ್ಟ್ರನಾಯಕರು ಹೋರಾಟ ನಡೆಸಿದಂತೆ ಈಗ ಬಿಜೆಪಿ ದುರಾಡಳಿತದ ವಿರುದ್ಧ ಹೋರಾಟ ನಡೆಸುತ್ತೇವೆ ಎಂದು ಹಳಿಯಾಳ ಶಾಸಕ ಆರ್.ವಿ.ದೇಶಪಾಂಡೆ ಹೇಳಿದರು.

ಇಲ್ಲಿನ ತೋಟಗಾರ ಕಲ್ಯಾಣ ಮಂಟಪದಲ್ಲಿ ಬುಧವಾರ ಕಾಂಗ್ರೆಸ್ ಪಕ್ಷದ ಜಿಲ್ಲಾಮಟ್ಟದ ನವಸಂಕಲ್ಪ ಚಿಂತನಾ ಶಿಬಿರದ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಬೆಲೆ ಏರಿಕೆ, ನಿರುದ್ಯೋಗ, ಅಶಾಂತಿಯಿಂದ ಜನರು ಕಂಗೆಟ್ಟಿದ್ದಾರೆ. ವಿದ್ಯಾವಂತ ಯುವಕರಿಗೂ ಕೆಲಸ ಸಿಗದ ಕೆಟ್ಟ ಸ್ಥಿತಿ ದೇಶದಲ್ಲಿ ಇದೇ ಮೊದಲ ಬಾರಿಗೆ ನಿರ್ಮಾಣವಾಗಿದೆ’ ಎಂದರು.

ADVERTISEMENT

‘ಯುವಕರು, ಮಹಿಳೆಯರನ್ನು ಪಕ್ಷಕ್ಕೆ ಸೆಳೆಯುವ ನಿಟ್ಟಿನಲ್ಲಿ ಕಾರ್ಯತಂತ್ರ ರೂಪಿಸಲಾಗುವುದು. ಬೂತ್ ಕಮಿಟಿಯಿಂದ ರಾಜ್ಯಮಟ್ಟದವರೆಗೆ ಪಕ್ಷದ ಹುದ್ದೆಯಲ್ಲಿ 50 ವರ್ಷ ವಯೋಮಿತಿ ಒಳಗಿನವರಿಗೆ ಶೇ.50ರಷ್ಟು ಪ್ರಾಧಾನ್ಯತೆ ನೀಡಲಾಗುವುದು’ ಎಂದರು.

‘ಆ.9 ರಿಂದ 15ರವರೆಗೆ ಅಮೃತ ವರ್ಷಾಚರಣೆ ಅಂಗವಾಗಿ 75 ವಿಚಾರಗಳನ್ನು ಮುಂದಿಟ್ಟು, ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿಫಲತೆ ವಿರುದ್ಧ ಹೋರಾಟ ನಡೆಸಲಾಗುವುದು’ ಎಂದರು.

‘ಅರಣ್ಯ ಅತಿಕ್ರಮಣ, ಇಸ್ವತ್ತು ಸೇರಿದಂತೆ ಜಿಲ್ಲೆಯ ಜ್ವಲಂತ ಸಮಸ್ಯೆ ಪರಿಹಾರಕ್ಕೆ ಅಧಿಕಾರದಲ್ಲಿದ್ದಾಗ ಪ್ರಾಮಾಣಿಕ ಪ್ರಯತ್ನ ಮಾಡಿದ್ದೆ‌. ಈಗಿನ ಸರ್ಕಾರ ಕನಿಷ್ಠ ಒಂದು ಸಭೆಯನ್ನೂ ನಡೆಸುತ್ತಿಲ್ಲ. ಅಭಿವೃದ್ಧಿ ಯೋಜನೆಗಳು ನಿಂತ ನೀರಾಗಿವೆ’ ಎಂದು ಟೀಕಿಸಿದರು.

‘ಜಿಲ್ಲೆಯಲ್ಲಿ ಉಗಮವಾದ ನದಿಗಳ ನೀರು ಇಲ್ಲಿನ ಜನರಿಗೆ ಬಳಕೆಯಾಗಲು ಪ್ರಾಧಾನ್ಯತೆ ನೀಡಬೇಕು’ ಎಂದು ನದಿ ಜೋಡಣೆ ಯೋಜನೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ಕೆಪಿಸಿಸಿ ಉಪಾಧ್ಯಕ್ಷ ಐವಾನ್ ಡಿಸೋಜಾಮಾತನಾಡಿ,‘ಜಿಲ್ಲಾಮಟ್ಟದ ಶಿಬಿರ ಯಶಸ್ವಿಯಾಗಿದೆ. ಪ್ರಮುಖ ನಾಯಕರು ಪಾಲ್ಗೊಂಡು ಸಮಸ್ಯೆ ಚರ್ಚಿಸಿದ್ದಾರೆ. ಮುಂದಿನ ವಿಧಾನಸಭೆ ಚುನಾವಣೆಗೆ ಪಕ್ಷವನ್ನು ಸನ್ನದ್ದಗೊಳಿಸುವ ಕೆಲಸ ಆರಂಭವಾಗಿದೆ. ಚುನಾವಣಾ ಪ್ರಣಾಳಿಕೆಯ ಬಗ್ಗೆಯೂ ಸಲಹೆ ಪಡೆಯಲಾಗಿದೆ‌‌’ ಎಂದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ರತ್ನಾಕರ, ಸುಷ್ಮಾ ರಾಜಗೋಪಾಲ, ಮುಖಂಡರಾದ ಸತೀಶ್ ಸೈಲ್, ಶಾರದಾ ಶೆಟ್ಟಿ, ಜೆ.ಡಿ.ನಾಯ್ಕ, ಪ್ರಶಾಂತ ದೇಶಪಾಂಡೆ, ಎಸ್.ಕೆ.ಭಾಗವತ, ನಿವೇದಿತ್ ಆಳ್ವಾ, ದೀಪಕ ದೊಡ್ಡೂರು, ರಮಾನಂದ ನಾಯಕ, ನಾಗರಾಜ ನಾರ್ವೇಕರ, ರಮೇಶ ದುಬಾಶಿ, ಸಂತೋಷ ಶೆಟ್ಟಿ, ಸಿ.ಎಫ್‌.ನಾಯ್ಕ ಇದ್ದರು.

ಐದು ಸಮಿತಿ ರಚನೆ: ‘ಕಾಂಗ್ರೆಸ್ ಬಲವರ್ಧನೆ ಸಲುವಾಗಿ ಐದು ಪ್ರಮುಖ ಸಮಿತಿ ರಚಿಸಲಾಗಿದೆ. ಪ್ರತಿ ಸಮಿತಿಗೆ ಐದಾರು ಜನ ಮುಖಂಡರಿಗೆ ಜವಾಬ್ದಾರಿ ನೀಡಲಾಗಿದೆ’ ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಭೀಮಣ್ಣ ನಾಯ್ಕ ಹೇಳಿದರು.

‘ರಮೇಶ ದುಬಾಶಿ ನೇತೃತ್ವದ ಜಿಲ್ಲಾಮಟ್ಟದ ಚಿಂತನಾ ಶಿಬಿರ ಆಯೋಜನಾ ಸಮಿತಿ, ರಮಾನಂದ ನಾಯಕ ನೇತೃತ್ವದ ರಾಜಕೀಯ ಮತ್ತು ಆರ್ಥಿಕ ಸಮಿತಿ, ಶಿವಾನಂದ ಹೆಗಡೆ ಕಡತೋಕಾ ನೇತೃತ್ವದ ಬೂತ್ ಮಟ್ಟದಿಂದ ಜಿಲ್ಲಾಮಟ್ಟದವರೆಗೆ ಸಮಿತಿ ರಚನೆಗೆ ಪ್ರತ್ಯೇಕ ಸಮಿತಿ, ಸುಜಾತಾ ಗಾಂವಕರ ನೇತೃತ್ವದ ಮಹಿಳಾ ಸಬಲೀಕರಣ ಸಮಿತಿ, ದೀಪಕ ದೊಡ್ಡೂರು ನೇತೃತ್ವದ ಯುವ ಸಬಲೀಕರಣ ಸಮಿತಿ, ಕೆ.ಶಂಭು ಶೆಟ್ಟಿ ನೇತೃತ್ವದ ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಣಾ ಸಮಿತಿ ರಚನೆಯಾಗಿದೆ’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.