ADVERTISEMENT

ಕುಮಟಾ | ರಿಯಾಯತಿ ದರದಲ್ಲಿ ವಿದ್ಯಾರ್ಥಿಗಳಿಗೆ ಊಟದ ಸೌಲಭ್ಯ: ಶಾಸಕ ದಿನಕರ ಶೆಟ್ಟಿ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2025, 4:35 IST
Last Updated 14 ಸೆಪ್ಟೆಂಬರ್ 2025, 4:35 IST
   

ಕುಮಟಾ: `ಪಟ್ಟಣದ ಹನುಮಂತ ಬೆಣ್ಣೆ ನೆಲ್ಲಿಕೇರಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸುಮಾರು ಒಂದು ಸಾವಿರ ವಿದ್ಯಾರ್ಥಿಗಳಿಗೆ ರಿಯಾಯತಿ ದರದಲ್ಲಿ ಊಟ, ಉಪಹಾರ ಒದಗಿಸಲು ಕಾಲೇಜು ಪಕ್ಕದ ಕಷಿ ಇಲಾಖೆಯ ಹಳೆಯ ಕಟ್ಟಡದಲ್ಲಿ ವ್ಯವಸ್ಥೆ ಕಲ್ಪಿಸಲಾಗುವುದು’ ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು.

ಶನಿವಾರ ಸ್ಥಳಕ್ಕೆ ಭೇಟಿ ನೀಡಿದ ಅವರು, ‘ಕಾಲೇಜಿನಲ್ಲಿ ಸುಮಾರು 1,700 ಜನ ವಿದ್ಯಾರ್ಥಿಗಳು ಓದುತ್ತಿದ್ದಾರೆ. ಅಂತಹ ವಿದ್ಯಾರ್ಥಿಗಳಿಗೆ ಅತ್ಯಂತ ಕಡಿಮೆ ದರದಲ್ಲಿ ಮಧ್ಯಾಹ್ನ ಊಟ ಹಾಗೂ ಉಪಹಾರ ಸೌಲಭ್ಯ ಕಲ್ಪಿಸಲು ಕೆಲ ದಾನಿಗಳನ್ನು ಸಂಪರ್ಕಿಸಲಾಗಿದೆ’ ಎಂದರು.

‘ಕಾಲೇಜು ಸಮೀಪ ಇರುವ ಕೃಷಿ ಇಲಾಖೆಯ ಸುಮಾರು ಎರಡು ಸಾವಿರ ಚದರ ಅಡಿ ಅಳತೆಯ ಹಳೆಯ ಕಟ್ಟಡವನ್ನು ಈ ಉದ್ದೇಶಕ್ಕೆ ಗುರುತಿಸಲಾಗಿದೆ. ಕಟ್ಟಡ ತಾತ್ಕಾಲಿಕ ಬಳಕೆಗೆ ಹಾಗೂ ಅಲ್ಲಿರುವ ಕೊಳವೆ ಬಾವಿ ನೀರಿನ ಬಳಕೆಗೆ ಅನುಮತಿ ಪಡೆಯಲಾಗಿದೆ. ಕಟ್ಟಡ ನವೀಕರಿಸಿ, ವಿದ್ಯುತ್ ಸಂಪರ್ಕ ಪಡೆದ ನಂತರ ಕೆಲ ತಿಂಗಳಲ್ಲಿ ಊಟದ ಯೋಜನೆ ಅನುಷ್ಠಾನಗೊಳ್ಳಲಿದೆ’ ಎಂದರು.

ಹೆಚ್ಚಿನ ಮಾಹಿತಿ ನೀಡಿದ ಪ್ರಾಚಾರ್ಯ ಸತೀಶ ನಾಯ್ಕ, ‘ಗ್ರಾಮೀಣ ಪ್ರದೇಶಗಳಿಂದ ಬರುವ ಸುಮಾರು ಒಂದು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಮಧ್ಯಾಹ್ನದ ಊಟವಿಲ್ಲದೆ ತರಗತಿಯಲ್ಲಿ ಪಾಠ ಕೇಳುತ್ತಿದ್ದಾರೆ. ಅಂಥವರಿಗೆ ಈ ಸೌಲಭ್ಯ ಪ್ರಯೋಜನವಾಗಲಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.