ADVERTISEMENT

ಕೊರೊನಾ ಜಾಗೃತಿ: 23 ಕಿ.ಮೀ. ಸ್ಕೇಟಿಂಗ್ ಮಾಡಿದ ವಿದ್ಯಾರ್ಥಿಗಳು

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2021, 6:40 IST
Last Updated 14 ಏಪ್ರಿಲ್ 2021, 6:40 IST
ಕೊರೊನಾ ನಿಯಂತ್ರಣ ಮತ್ತು ಲಸಿಕೆ ಪಡೆಯುವಂತೆ ಜನರಲ್ಲಿ ಜಾಗೃತಿ
ಕೊರೊನಾ ನಿಯಂತ್ರಣ ಮತ್ತು ಲಸಿಕೆ ಪಡೆಯುವಂತೆ ಜನರಲ್ಲಿ ಜಾಗೃತಿ   

ಶಿರಸಿ: ಕೊರೊನಾ ನಿಯಂತ್ರಣ ಮತ್ತು ಲಸಿಕೆ ಪಡೆಯುವಂತೆ ಜನರಲ್ಲಿ ಜಾಗೃತಿ ಮೂಡಿಸಲು ಶಿರಸಿಯ 17 ವಿದ್ಯಾರ್ಥಿಗಳು ಬುಧವಾರ ಬನವಾಸಿಯಿಂದ ಶಿರಸಿವರೆಗೆ ಸ್ಕೇಟಿಂಗ್ ಮಾಡಿದರು.

ಬನವಾಸಿಯ ಕದಂಬ ವೃತ್ತದಿಂದ ಸ್ಕೇಟಿಂಗ್ ಆರಂಭಿಸಿದ ವಿದ್ಯಾರ್ಥಿಗಳು ಮುಖ್ಯ ರಸ್ತೆಯಲ್ಲಿ ಸಾಗಿದರು. ಗುಡ್ನಾಪುರ, ಉಂಚಳ್ಳಿ, ಅರೆಕೊಪ್ಪ ಸೇರಿದಂತೆ ಹಲವು ಗ್ರಾಮಗಳಲ್ಲಿ ಜನರಿಗೆ ಕೊರೊನಾ ಲಸಿಕೆ ಕುರಿತು ಅರಿವು ಮೂಡಿಸುವ ಕರಪತ್ರ ಹಂಚಿದರು.

ರಸ್ತೆಯ ಒಂದು ಬದಿಯಲ್ಲಿ ಶಿಸ್ತುಬದ್ಧವಾಗಿ ವಿದ್ಯಾರ್ಥಿಗಳು ಸ್ಕೇಟಿಂಗ್ ಮಾಡುತ್ತಿದ್ದರೆ, ಅವರ ಪಕ್ಕದಲ್ಲಿ ಪೊಲೀಸರು, ಪಾಲಕರು ಸುರಕ್ಷತೆ ಸಲುವಾಗಿ ಸಾಲಾಗಿ ವಾಹನ ಚಲಾಯಿಸುತ್ತ ಸಾಗಿದರು.

ADVERTISEMENT

ಎರಡೂವರೆ ಗಂಟೆ ಬಳಿಕ ಶಿರಸಿ ನಗರಕ್ಕೆ ತಲುಪಿದ ವಿದ್ಯಾರ್ಥಿಗಳು ಇಲ್ಲಿನ ಹಳೆ ಬಸ್ ನಿಲ್ದಾಣ ವೃತ್ತದಲ್ಲಿ ಸೇರಿ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಿದರು.

'ಏ.11 ರಿಂದ 14ರವರೆಗೆ ದೇಶವ್ಯಾಪಿ ಕೊರೊನಾ ಲಸಿಕೋತ್ಸವಕ್ಕೆ ಪ್ರಧಾನಿ ನೀಡಿದ ಕರೆಯಂತೆ ವಿಶಿಷ್ಟ ರೀತಿ ಜಾಗೃತಿ ಮೂಡಿಸಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು' ಎಂದು ಕಾರ್ಯಕ್ರಮ ಆಯೋಜಕ ಅದ್ವೈತ ಸ್ಕೇಟಿಂಗ್ ಆ್ಯಂಡ್ ಸ್ಪೋರ್ಟ್ಸ್ ಕ್ಲಬ್ ನ ಕಿರಣಕುಮಾರ್ ತಿಳಿಸಿದರು.

'ಮೊದಲ ಬಾರಿಗೆ ಇಷ್ಟು ದೂರ ಸ್ಕೇಟಿಂಗ್ ಮಾಡುತ್ತ ಸಂಚರಿಸಿದ್ದು ಅವಿಸ್ಮರಣೀಯ ಅನುಭವ. ನಾವು ಮಾಡಿದ ಜಾಗೃತಿ ಜನರನ್ನು ತಲುಪಿದರೆ ಸಾರ್ಥಕ ಎನಿಸುತ್ತದೆ' ಎಂದು ವಿದ್ಯಾರ್ಥಿನಿ ಅನಘ ಪ್ರತಿಕ್ರಿಯಿಸಿದರು.

ಸ್ಕೇಟಿಂಗ್ ಮೂಲಕ ನಡೆಸಿದ ಜಾಗೃತಿ ಅಭಿಯಾನಕ್ಕೆ ಬನವಾಸಿಯಲ್ಲಿ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಶ್ರೀಲತಾ ಕಾಳೇರಮನೆ ಚಾಲನೆ ನೀಡಿದ್ದರು. ಸಿಪಿಐ ಬಿ.ಯು.ಪ್ರದೀಪ ನೇತೃತ್ವದಲ್ಲಿ ಸುರಕ್ಷತೆ ವಹಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.