ADVERTISEMENT

ಮುಂಡಗೋಡ: ಶಾಲೆಗೆ ಹೋಗಲು 3 ಕಿ.ಮೀ ಕಾಡಿನ ಹಾದಿ ತುಳಿವ ಮಕ್ಕಳು

ಮುಂಡಗೋಡ ತಾಲ್ಲೂಕಿನ ಬ್ಯಾನಳ್ಳಿಯ ವಿದ್ಯಾರ್ಥಿಗಳಿಗೆ ಸಮಸ್ಯೆ

ಶಾಂತೇಶ ಬೆನಕನಕೊಪ್ಪ
Published 26 ಮಾರ್ಚ್ 2021, 19:30 IST
Last Updated 26 ಮಾರ್ಚ್ 2021, 19:30 IST
ಮುಂಡಗೋಡ ತಾಲ್ಲೂಕಿನ ಚವಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬ್ಯಾನಳ್ಳಿ ಗ್ರಾಮದ ವಿದ್ಯಾರ್ಥಿಗಳು ನಡೆದುಕೊಂಡು ಮನೆಗೆ ಹೋಗುತ್ತಿರುವುದು
ಮುಂಡಗೋಡ ತಾಲ್ಲೂಕಿನ ಚವಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬ್ಯಾನಳ್ಳಿ ಗ್ರಾಮದ ವಿದ್ಯಾರ್ಥಿಗಳು ನಡೆದುಕೊಂಡು ಮನೆಗೆ ಹೋಗುತ್ತಿರುವುದು   

ಮುಂಡಗೋಡ: ನಿತ್ಯವೂ ಮೂರು ಕಿ.ಮೀ ಕಾಡಿನ ಹಾದಿಯನ್ನು ಕ್ರಮಿಸಿ ಶಾಲೆಗೆ ಹೋಗಬೇಕು. ಸಂಜೆಯಾಗುತ್ತಲೇ ಕಾಡಿನ ಪ್ರಾಣಿಗಳು ದಾರಿಯಲ್ಲಿ ಎದುರಾದರೆ ಎಂಬ ಆತಂಕದಲ್ಲಿಯೇ ಮನೆ ಸೇರುತ್ತಾರೆ. ಶಾಲೆಗೆ ಹೋದ ವಿದ್ಯಾರ್ಥಿಗಳು, ಮನೆಗೆ ಬರುವುದು ಸ್ವಲ್ಪ ತಡವಾದರೂ ಪಾಲಕರು ಚಡಪಡಿಸುತ್ತಾರೆ.

ಇದು ಚವಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬ್ಯಾನಳ್ಳಿ ಗ್ರಾಮದ ಗೌಳಿಗ ಸಮುದಾಯದ ವಿದ್ಯಾರ್ಥಿಗಳ ಗೋಳು. ಹಲವು ವರ್ಷಗಳಿಂದ ಸಾರಿಗೆ ಬಸ್‌ ವ್ಯವಸ್ಥೆ ಇಲ್ಲದೇ ವಿದ್ಯಾರ್ಥಿಗಳು ನಿತ್ಯವೂ ನಡೆದುಕೊಂಡು ಪಾಠ ಕೇಳಬೇಕಾಗಿದೆ.

‘ಪಟ್ಟಣದಿಂದ ಅಂದಲಗಿ, ಹನುಮಾಪುರ ಕಡೆ ಸಾರಿಗೆ ಬಸ್ಸೊಂದು ದಿನಕ್ಕೆ ಮೂರು ಬಾರಿ ಬಂದು ಹೋಗುತ್ತದೆ. ಬ್ಯಾನಳ್ಳಿ ಗ್ರಾಮದಿಂದ ಅಂದಲಗಿ ಗ್ರಾಮದ ಪ್ರೌಢಶಾಲೆಗೆ 20ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಹೋಗುತ್ತಾರೆ. ಅವರೆಲ್ಲರೂ ಚವಡಳ್ಳಿವರೆಗೆ ಮೂರು ಕಿ.ಮೀ ನಡೆದುಕೊಂಡು ಬಂದು, ಬಸ್ಸಿಗಾಗಿ ಕಾಯಬೇಕು. ಕರಗಿನಕೊಪ್ಪದ ಲೊಯೋಲಾ ಶಾಲೆಗೂ ಬ್ಯಾನಳ್ಳಿಯಿಂದ ವಿದ್ಯಾರ್ಥಿಗಳು ಹೋಗುತ್ತಾರೆ. ಅವರೂ ನಿತ್ಯ ಬಸ್ಸಿಗಾಗಿ ಪರದಾಡಬೇಕಾಗಿದೆ’ ಎಂದು ಗ್ರಾಮಸ್ಥ ಭಾಗು ಕಾತ್ರಟ್ ಹೇಳಿದರು.

ADVERTISEMENT

‘ಚವಡಳ್ಳಿ, ಮಲವಳ್ಳಿ ಊರಿನಲ್ಲಿಯೂ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳಿದ್ದಾರೆ. ಹಾಗಾಗಿ, ಬೆಳಿಗ್ಗೆ ಬರುವ ಬಸ್ ಅಲ್ಲಿಯೇ ಭರ್ತಿಯಾಗುತ್ತದೆ. ಬ್ಯಾನಳ್ಳಿ ಗ್ರಾಮಕ್ಕೆ ಲಾಕ್‌ಡೌನ್‌ಗಿಂತ ಮುಂಚೆ ಕೆಲವು ದಿನ ಬಸ್ ಬಿಡಲಾಗಿತ್ತು. ನಂತರ ಬರುತ್ತಿಲ್ಲ. ಹಾವೇರಿ ಡಿಪೊದಿಂದ ಹೆಚ್ಚುವರಿಯಾಗಿ ಒಂದು ಬಸ್ ತರಿಸಿ, ಬ್ಯಾನಳ್ಳಿ ಗ್ರಾಮಕ್ಕೆ ಕಳುಹಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ವಿ.ಎಸ್.ಪಾಟೀಲ ಹೇಳಿದರು.

ಕಾಡಾನೆ ಸಂಚರಿಸುವ ದಾರಿ:

‘ಇತ್ತೀಚೆಗೆ ಕಾಡಾನೆಗಳು ತಿಂಗಳುಗಟ್ಟಲೇ ಇದೇ ಭಾಗದಲ್ಲಿ ಸಂಚರಿಸುತ್ತವೆ. ಸಂಜೆಯಾಗುತ್ತಲೇ ಗ್ರಾಮದ ಸನಿಹದ ಗದ್ದೆಗಳಿಗೆ ದಾಳಿ ಇಡುತ್ತವೆ. ಬೈಕ್ ಸವಾರರು ಕೆಲವೊಮ್ಮೆ ಚಿರತೆಯನ್ನೂ ಕಂಡಿದ್ದಾಗಿ ಹೇಳುತ್ತಾರೆ. ಇದರಿಂದ ವಿದ್ಯಾರ್ಥಿಗಳು ಹೆದರುತ್ತಲೇ ಶಾಲೆಗೆ ಹೋಗಿ ಬರಬೇಕಾಗಿದೆ. ಒಮ್ಮೊಮ್ಮೆ ಶಾಲೆಯಿಂದ ಬರುವುದು ತಡವಾದರೆ, ಪಾಲಕರು ಹುಡುಕಿಕೊಂಡು ಹೋಗಿರುವ ಉದಾಹರಣೆಗಳೂ ಇವೆ’ ಎಂದು ಗ್ರಾಮಸ್ಥ ಭಾಗು ಕಾತ್ರಟ್ ವಿವರಿಸಿದರು.

* ಬೇಸಿಗೆಯಲ್ಲಿ ಕಷ್ಟಪಟ್ಟು ಶಾಲೆಗೆ ಹೋಗಬಹುದು. ಆದರೆ, ಮಳೆಗಾಲದಲ್ಲಿ ಸಹವಾಸವೇ ಬೇಡ ಎನ್ನುವಂತಾಗುತ್ತದೆ. ನಮ್ಮೂರಿಗೂ ಬಸ್ ಬಂದರೆ ದೊಡ್ಡ ಉಪಕಾರವಾಗುತ್ತದೆ.

– ಶಾಂತಾ, ವಿದ್ಯಾರ್ಥಿನಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.