ADVERTISEMENT

ಶಿರಸಿ: ಕಿರಿಯ ವಯಸ್ಸಿನಲ್ಲೇ ಸಿವಿಲ್ ನ್ಯಾಯಾಧೀಶರಾಗಿ ಆಯ್ಕೆಯಾದ ಸುಮಂತ ನಾಯ್ಕ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2026, 5:38 IST
Last Updated 20 ಫೆಬ್ರುವರಿ 2026, 5:38 IST
ಸುಮಂತ ನಾಯ್ಕ
ಸುಮಂತ ನಾಯ್ಕ   

ಶಿರಸಿ: ಕಠಿಣ ಪರಿಶ್ರಮ ಮತ್ತು ಸ್ಪಷ್ಟ ಗುರಿಯಿದ್ದರೆ ಅಸಾಧ್ಯವಾದುದು ಯಾವುದೂ ಇಲ್ಲ ಎಂಬುದನ್ನು ಶಿರಸಿ ಹೆಗಡೆಕಟ್ಟಾ ಮೂಲದ ಸುಮಂತ ಮಂಜುನಾಥ ನಾಯ್ಕ ಸಾಬೀತು ಪಡಿಸಿದ್ದಾರೆ. 2025ನೇ ಸಾಲಿನ ಕರ್ನಾಟಕ ನ್ಯಾಯಾಂಗ ಪರೀಕ್ಷೆಯಲ್ಲಿ ಮೊದಲ ಪ್ರಯತ್ನದಲ್ಲೇ ರಾಜ್ಯಕ್ಕೆ ದ್ವಿತೀಯ ರ‍್ಯಾಂಕ್‌ ಪಡೆಯುವ ಮೂಲಕ ಅವರು ಸಿವಿಲ್ ನ್ಯಾಯಾಧೀಶರಾಗಿ ಆಯ್ಕೆಯಾಗಿದ್ದಾರೆ. 

​ಬೆಂಗಳೂರಿನಲ್ಲಿ ಸರ್ಕಾರಿ ಅಭಿಯೋಜಕರಾಗಿರುವ ಮಂಜುನಾಥ ನಾಯ್ಕ ಹಾಗೂ ವಕೀಲೆ ಸುಜಾತಾ ನಾಯ್ಕ ದಂಪತಿಯ ಪುತ್ರನಾದ ಸುಮಂತ, ಬಾಲ್ಯದಿಂದಲೂ ಪ್ರತಿಭಾವಂತ ವಿದ್ಯಾರ್ಥಿ. ದ್ವಿತೀಯ ಪಿಯುಸಿವರೆಗೆ ಶಿರಸಿಯಲ್ಲಿ ವ್ಯಾಸಂಗ ಮಾಡಿದ್ದ ಅವರು, ನ್ಯಾಯಾಂಗ ಸೇವೆಯ ಗುರಿಯೊಂದಿಗೆ ಹುಬ್ಬಳ್ಳಿಯ ಕರ್ನಾಟಕ ಕಾನೂನು ವಿಶ್ವವಿದ್ಯಾಲಯದಲ್ಲಿ ಕಾನೂನು ಪದವಿ ಪೂರೈಸಿದ್ದರು. ​ಈ ಮೂಲಕ ಕೇವಲ 25ನೇ ವಯಸ್ಸಿನಲ್ಲಿ ನ್ಯಾಯಾಧೀಶರ ಪಟ್ಟ ಅಲಂಕರಿಸಿದ ಜಿಲ್ಲೆಯ ಮೊದಲ ಸಾಧಕ ಎಂಬ ಹೆಗ್ಗಳಿಕೆಗೆ ಇವರು ಪಾತ್ರರಾಗಿದ್ದಾರೆ.

ವಿಶೇಷವೆಂದರೆ, ತಂದೆ ಮಂಜುನಾಥ ನಾಯ್ಕ ಅವರು ಸರ್ಕಾರದ ಪರವಾಗಿ ವಾದ ಮಂಡಿಸುವ ವಕೀಲರಾಗಿದ್ದರೆ ಮಗ ಸುಮಂತ ಪ್ರಕರಣಗಳ ತೀರ್ಪು ನೀಡುವ ನ್ಯಾಯಾಧೀಶರಾಗಿ ನೇಮಕಗೊಂಡಿರುವುದು ಹೆಮ್ಮೆಯ ಸಂಗತಿ. 

ADVERTISEMENT

​‘ಮಗ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿಯಲ್ಲಿ ಅತ್ಯಧಿಕ ಅಂಕ ಪಡೆದಿದ್ದರೂ ವೈದ್ಯಕೀಯ ಅಥವಾ ಎಂಜಿನಿಯರಿಂಗ್ ಹಾದಿ ಹಿಡಿಯದೆ, ನ್ಯಾಯಾಂಗ ಕ್ಷೇತ್ರವನ್ನು ಆಯ್ದುಕೊಂಡು ಇಂದು ನ್ಯಾಯಾಧೀಶ ಆಗಿರುವುದು ಖುಷಿ ತಂದಿದೆ’ ಎಂದು ಸುಮಂತ ಅವರ ತಂದೆ ಮಂಜುನಾಥ ನಾಯ್ಕ ಸಂತಸ ಹಂಚಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.