ಕಾರವಾರ: ರಾಜ್ಯದಲ್ಲೇ ಅತಿ ಎತ್ತರದ, ನೀರು ಸಂಗ್ರಹಣೆ ಸಾಮರ್ಥ್ಯದಲ್ಲಿ ಎರಡನೇ ಅತಿ ದೊಡ್ಡ ಜಲಾಶಯವಾಗಿರುವ ಜೊಯಿಡಾ ತಾಲ್ಲೂಕಿನ ಸೂಪಾ ಜಲಾಶಯ ಭರ್ತಿ ಹಂತದಲ್ಲಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ. ದೇಶಪಾಂಡೆ ಸೋಮವಾರ ಬಾಗಿನ ಅರ್ಪಿಸಿದರು.
ಸಮುದ್ರ ಮಟ್ಟದಿಂದ 564 ಮೀಟರ್ ಎತ್ತರದಲ್ಲಿನ ಜಲಾಶಯವು 101 ಮೀಟರ್ ಎತ್ತರ, 332 ಮೀ. ಉದ್ದವಿದೆ. ಗುಡ್ಡಗಳ ನಡುವೆ ಭದ್ರವಾಗಿ ನೆಲೆನಿಂತ ಜಲಾಶಯ ಸ್ಥಾಪನೆಗೊಂಡು 40 ವರ್ಷ ಪೂರ್ಣಗೊಂಡಿದೆ. ಆದರೆ, ಈವರೆಗೆ ಕೇವಲ ನಾಲ್ಕು ಬಾರಿ ಜಲಾಶಯ ಭರ್ತಿಯಾಗಿದೆ.
147.55 ಟಿಎಂಸಿ ಅಡಿ ನೀರು ಸಂಗ್ರಹಣೆ ಸಾಮರ್ಥ್ಯದ ಜಲಾಶಯದಲ್ಲಿ ಸದ್ಯ 128 ಟಿಎಂಸಿ ಅಡಿಗಳಷ್ಟು ನೀರು ಸಂಗ್ರಹವಾಗಿದೆ. ನಿರಂತರವಾಗಿ ಮಳೆ ಸುರಿದಿದ್ದರ ನಡುವೆಯೂ, ಕಳೆದ ವರ್ಷಕ್ಕೆ ಹೋಲಿಸಿದರೆ ಜಲಾಶಯದಲ್ಲಿ ನೀರು ಸಂಗ್ರಹಣೆ ಕಡಿಮೆ ಇದೆ. ಕಳೆದ ಬಾರಿ ಸೆ.1ರ ಹೊತ್ತಿಗೆ 560 ಮೀ ಮಟ್ಟಕ್ಕೆ ನೀರು ಸಂಗ್ರಹವಿತ್ತು.
‘ಜಲಾಶಯದ ಗರಿಷ್ಠ ಮಟ್ಟಕ್ಕೆ ಶೇ 95ರಷ್ಟು ನೀರು ಸಂಗ್ರಹವಾದರೆ ಮಾತ್ರ ಮೂರು ಗೇಟ್‌ಗಳನ್ನು ತೆರೆದು ಕಾಳಿನದಿಗೆ ನೀರು ಹರಿಸಲಾಗುತ್ತದೆ. ಆದರೆ, ಆಗಸ್ಟ್ ತಿಂಗಳಿನಲ್ಲಿ ಈ ಮಟ್ಟದಷ್ಟು ಭರ್ತಿಯಾದರೆ ಮಾತ್ರ ಜಲಾಶಯದಿಂದ ನೀರು ಹೊರಹರಿಸುವ ಸಾಧ್ಯತೆ ಹೆಚ್ಚು. ಇಲ್ಲವಾದರೆ ಒಳಹರಿವು ನಿರಂತರವಾಗಿದ್ದು, ಮಳೆ ಸುರಿಯುವ ಸಾಧ್ಯತೆ ಇನ್ನಷ್ಟು ಹೆಚ್ಚಿದ್ದರೆ ಮಾತ್ರ ನೀರು ಹರಿಸಲಾಗುತ್ತದೆ’ ಎಂದು ಸೂಪಾ ಜಲಾಶಯದ ಸಿವಿಲ್ ಎಂಜಿನಿಯರಿಂಗ್ ವಿಭಾಗದ ಇಇ ಅಶೋಕ ಕುಮಾರ್ ತಿಳಿಸಿದರು.
‘1994, 2006, 2018 ಮತ್ತು 2019ರಲ್ಲಿ ಮಾತ್ರ ಜಲಾಶಯ ಗರಿಷ್ಠ ಮಟ್ಟದ ಶೇ 95ರಷ್ಟು ಭರ್ತಿಯಾಗಿತ್ತು. ನಾಲ್ಕೇ ಬಾರಿ ಜಲಾಶಯದಿಂದ ನೀರನ್ನು ಕಾಳಿನದಿಗೆ ಹರಿಸಲಾಗಿದೆ’ ಎಂದೂ ಹೇಳಿದರು.
ಕಾಳಿ ಜಲವಿದ್ಯುತ್ ಯೋಜನೆ ನಾಡಿನ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಿದೆ. ಜಲಾಶಯದಲ್ಲಿ ನೀರು ಸಂಗ್ರಹ ಹೆಚ್ಚಿದೆ ಎಂದರೆ ವಿದ್ಯುತ್ ಉತ್ಪಾದನೆ ಹೆಚ್ಚಳದೊಂದಿಗೆ ಕೈಗಾರಿಕೆಗೂ ಅನುಕೂಲವಾಗಿದೆಆರ್.ವಿ.ದೇಶಪಾಂಡೆ ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ
ಹೂಳಿನ ಸಮಸ್ಯೆ ಕಾಡದು
‘ಕಾಳಿನದಿಗೆ ನಿರ್ಮಿಸಲಾದ ಸೂಪಾ ಸೇರಿದಂತೆ ಐದು ಜಲಾಶಯಗಳಲ್ಲಿ ಈವರೆಗೆ ಹೂಳು ತುಂಬಿಕೊಂಡ ಸಮಸ್ಯೆ ಎದುರಾಗಿಲ್ಲ. 2021ರಲ್ಲಿ ಸೂಪಾ ಜಲಾಶಯದಲ್ಲಿ ಬ್ಯಾಥಿಮೆಟ್ರಿಕ್ ಸಮೀಕ್ಷೆ ನಡೆಸಲಾಗಿದೆ. ಸಮೀಕ್ಷೆ ವರದಿಯಲ್ಲಿ ಹೂಳು ಸಂಗ್ರಹವಾಗಿಲ್ಲ ಎಂಬುದು ಸ್ಪಷ್ಟವಾಗಿದೆ. ಕದ್ರಾ ಕೊಡಸಳ್ಳಿ ಜಲಾಶಯಗಳಲ್ಲೂ ಸಮೀಕ್ಷೆ ಮುಗಿದಿದ್ದು ವರದಿ ಇನ್ನಷ್ಟೇ ಬರಬೇಕಿದೆ’ ಎಂದು ಕಾಳಿ ಜಲವಿದ್ಯುತ್ ಯೋಜನೆಯ ಸಿವಿಲ್ ವಿಭಾಗದ ಮುಖ್ಯ ಎಂಜಿನಿಯರ್ ರಾಜಶೇಖರ ಪ್ರತಿಕ್ರಿಯಿಸಿದರು. ‘ಪಶ್ಚಿಮ ಘಟ್ಟಗಳಲ್ಲಿ ಭೂಸವಕಳಿ ಪ್ರಮಾಣ ಕಡಿಮೆ. ಕಲ್ಲುಗಳು ಮರದ ಬೇರುಗಳು ಮಣ್ಣನ್ನು ಭದ್ರವಾಗಿ ಹಿಡಿದಿಟ್ಟುಕೊಳ್ಳುವ ಕಾರಣದಿಂದ ಸೂಪಾ ಜಲಾಶಯಕ್ಕೆ ನೂರು ವರ್ಷಗಳವರೆಗೆ ಹೂಳು ತುಂಬುವ ಸಮಸ್ಯೆ ಇರದು ಎಂದು ಅಂದಾಜಿಸಲಾಗಿದೆ. ಆದಾಗ್ಯೂ ಕಾಲಕಾಲಕ್ಕೆ ಬಾಥಿಮೆಟ್ರಿಕ್ ಸಮೀಕ್ಷೆ ನಡೆಯುತ್ತದೆ’ ಎಂದು ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.