ADVERTISEMENT

ಕಾರವಾರ: ಶಿಕ್ಷಕರ ಅರ್ಹತಾ ಪರೀಕ್ಷೆ ಸುಗಮ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2025, 3:17 IST
Last Updated 8 ಡಿಸೆಂಬರ್ 2025, 3:17 IST
ಕಾರವಾರದಲ್ಲಿ ಶಿಕ್ಷಕರ ಅರ್ಹತಾ ಪರೀಕ್ಷೆಯ ಕೇಂದ್ರವೊಂದರಿಂದ ಪರೀಕ್ಷೆ ಮುಗಿಸಿ ಹೊರಬರುತ್ತಿದ್ದ ಅಭ್ಯರ್ಥಿಗಳು.
ಕಾರವಾರದಲ್ಲಿ ಶಿಕ್ಷಕರ ಅರ್ಹತಾ ಪರೀಕ್ಷೆಯ ಕೇಂದ್ರವೊಂದರಿಂದ ಪರೀಕ್ಷೆ ಮುಗಿಸಿ ಹೊರಬರುತ್ತಿದ್ದ ಅಭ್ಯರ್ಥಿಗಳು.   

ಕಾರವಾರ: ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ಉತ್ತರ ಕನ್ನಡ ಜಿಲ್ಲೆಯ ಎರಡೂ ಶೈಕ್ಷಣಿಕ ಜಿಲ್ಲೆಗಳ 19 ಕೇಂದ್ರಗಳಲ್ಲಿ ಭಾನುವಾರ ಸುಗಮವಾಗಿ ನಡೆಯಿತು.

ಕಾರವಾರ ಶೈಕ್ಷಣಿಕ ಜಿಲ್ಲೆ ವ್ಯಾಪ್ತಿಯಲ್ಲಿ ಕಾರವಾರ ನಗರದ 11 ಕೇಂದ್ರಗಳಲ್ಲಿ, ಶಿರಸಿ ಶೈಕ್ಷಣಿಕ ಜಿಲ್ಲೆ ವ್ಯಾಪ್ತಿಗೆ ಶಿರಸಿ ನಗರದ 8 ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಯಿತು. ಪರೀಕ್ಷೆ ಕೇಂದ್ರಗಳ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು. ಪರೀಕ್ಷೆ ಆರಂಭಕ್ಕೆ ಎರಡು ತಾಸು ಮುನ್ನವೇ ಅಭ್ಯರ್ಥಿಗಳು ಹಾಜರಾಗಲು ಸೂಚನೆ ನೀಡಲಾಗಿತ್ತು.

ಬೆಳಿಗ್ಗೆ ನಡೆದ ಮೊದಲ ಪರೀಕ್ಷೆಯಲ್ಲಿ ಕಾರವಾರದ ಕೇಂದ್ರಗಳಲ್ಲಿ ನೋಂದಾಯಿಸಿಕೊಂಡಿದ್ದ 1,089 ಅಭ್ಯರ್ಥಿಗಳ ಪೈಕಿ 983 ಮಂದಿ ಪರೀಕ್ಷೆಗೆ ಹಾಜರಾಗಿದ್ದರೆ, 106 ಮಂದಿ ಗೈರಾಗಿದ್ದರು. ಶಿರಸಿಯಲ್ಲಿ ನೋಂದಾಯಿಸಿಕೊಂಡಿದ್ದ 990 ಅಭ್ಯರ್ಥಿಗಳ ಪೈಕಿ 935 ಅಭ್ಯರ್ಥಿಗಳು ಹಾಜರಾಗಿದ್ದು, 55 ಮಂದಿ ಗೈರಾಗಿದ್ದರು.

ADVERTISEMENT

ಮಧ್ಯಾಹ್ನ ನಡೆದ ಎರಡನೇ ಪರೀಕ್ಷೆಯಲ್ಲಿ ಕಾರವಾರದಲ್ಲಿ ನೋಂದಾಯಿತ 2,498 ಅಭ್ಯರ್ಥಿಗಳ ಪೈಕಿ 2,330 ಅಭ್ಯರ್ಥಿಗಳು ಪರೀಕ್ಷೆ ಬರೆದರು. 168 ಮಂದಿ ಗೈರಾದರು. ಶಿರಸಿಯಲ್ಲಿ 1,857 ಅಭ್ಯರ್ಥಿಗಳ ಪೈಕಿ 1,776 ಮಂದಿ ಪರೀಕ್ಷೆ ಬರೆದರೆ, 81 ಮಂದಿ ಗೈರಾಗಿದ್ದರು.

‘ಪರೀಕ್ಷೆಯನ್ನು ಕಟ್ಟುನಿಟ್ಟಾಗಿ ಹಾಗೂ ಪಾರದರ್ಶಕವಾಗಿ ನಡೆಸಲಾಗಿದೆ. ಯಾವುದೇ ಅಹಿಕರ ಘಟನೆಗೆ ಆಸ್ಪದ ನೀಡಿಲ್ಲ. ಭಿಗಿ ಪೊಲೀಸ್ ಬಂದೋಬಸ್ತ್ ನಡುವೆ ಪರೀಕ್ಷೆ ನಡೆದಿದೆ’ ಎಂದು ಎರಡೂ ಶೈಕ್ಷಣಿಕ ಜಿಲ್ಲೆಯ ಡಿಡಿಪಿಐಗಳು ಪ್ರತಿಕ್ರಿಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.