ADVERTISEMENT

ಕಾರವಾರ: ಕಾಲು ಸಂಕದ ಮೇಲೆ ‘ಸಂಕಟ’ದ ಸವಾರಿ

ಕಡಿಮೆ ಜನರಿರುವ ಗ್ರಾಮಕ್ಕಿಲ್ಲ ಸ್ಪಂದನೆ: ಮರದ ಸಂಕವೇ ಅನಿವಾರ್ಯ

ಗಣಪತಿ ಹೆಗಡೆ
Published 5 ಮೇ 2025, 4:20 IST
Last Updated 5 ಮೇ 2025, 4:20 IST
ಜೊಯಿಡಾ ತಾಲ್ಲೂಕಿನ ಡಿಗ್ಗಿ ಭಾಗದ ಸುಮಾರು ಏಳು ಹಳ್ಳಿಗಳಿಗೆ ತೇರಾಳಿ ಮೂಲಕ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಸಿಸೈ ಹಳ್ಳಕ್ಕೆ ಕಳೆದ ವರ್ಷ ಸ್ಥಳೀಯರೇ ನಿರ್ಮಿಸಿರುವ ಕಾಲು ಸಂಕ 
ಜೊಯಿಡಾ ತಾಲ್ಲೂಕಿನ ಡಿಗ್ಗಿ ಭಾಗದ ಸುಮಾರು ಏಳು ಹಳ್ಳಿಗಳಿಗೆ ತೇರಾಳಿ ಮೂಲಕ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಸಿಸೈ ಹಳ್ಳಕ್ಕೆ ಕಳೆದ ವರ್ಷ ಸ್ಥಳೀಯರೇ ನಿರ್ಮಿಸಿರುವ ಕಾಲು ಸಂಕ    

ಕಾರವಾರ: ಬಹುಪಾಲು ಅರಣ್ಯ ಪ್ರದೇಶಗಳಿಂದ ಆವೃತ್ತವಾಗಿರುವ ಜಿಲ್ಲೆಯ ಹಲವು ಹಳ್ಳಿಗಳಲ್ಲಿ ಜನರು ಇಂದಿಗೂ ಹಳ್ಳಗಳನ್ನು ದಾಟಲು ತಾವೇ ನಿರ್ಮಿಸಿಕೊಂಡ ಮರದ ಕಾಲುಸಂಕ ದಾಟಬೇಕಾದ ಸ್ಥಿತಿ ಇದೆ. ಆತಂಕದ ನಡುವೆಯೇ ಹಳ್ಳದ ಜೊತೆಗೆ ಹೆಜ್ಜೆ ಹೆಜ್ಜೆಗೂ ಎದುರಾಗುವ ಅಪಾಯ ದಾಟುತ್ತಿದ್ದಾರೆ.

ಕಾಂಕ್ರೀಟ್ ಕಾಲುಸಂಕಗಳನ್ನು ನಿರ್ಮಿಸುವ ಯೋಜನೆಗಳು ಚಾಲ್ತಿಯಲ್ಲಿದ್ದರೂ ಕಡಿಮೆ ಜನಸಂಖ್ಯೆ ಹೊಂದಿರುವ ಗ್ರಾಮಗಳಲ್ಲಿ ಯೋಜನೆ ಸಾಕಾರಗೊಳ್ಳುತ್ತಿಲ್ಲ ಎಂಬ ದೂರುಗಳಿವೆ. ಜನರ ಬೇಡಿಕೆಗೆ ಈವರೆಗೆ ಸ್ಪಂದನೆ ಸಿಗದ ಹಲವು ಉದಾಹರಣೆಗಳಿವೆ.

ಕಾರವಾರ ತಾಲ್ಲೂಕಿನ ಶಿರ್ವೆ, ಅಲ್ಲೇ ಸಮೀಪ ಗಡಿಗೆ ಹೊಂದಿಕೊಂಡಿರುವ ಗುಳೆ, ಹೊಸಗದ್ದೆ, ಹೀಗೆ ಹಲವು ಗ್ರಾಮಗಳಲ್ಲಿ ಇಂದಿಗೂ ಜನರು ಹಳ್ಳ ದಾಟಲು ಬಿದಿರು, ಮರದ ದಿಮ್ಮಿ ಬಳಸಿ ಸಂಕ ನಿರ್ಮಿಸಿಕೊಳ್ಳುತ್ತಿದ್ದಾರೆ. ಬರ್ಗಿ ಮಡಕರ್ಣಿಯ ಹಳ್ಳಕ್ಕೆ ಸೇತುವೆ ಮಂಜೂರಾದರೂ ನಿಧಾನಗತಿಯ ಕಾಮಗಾರಿಯಿಂದ ಮಳೆಗಾಲದಲ್ಲಿ ಹಳ್ಳ ದಾಟಲು ಕಾಲುಸಂಕವನ್ನು ಸಿದ್ಧವಿಟ್ಟುಕೊಳ್ಳಲಾಗಿದೆ.

ADVERTISEMENT

ಶಿರಸಿ ತಾಲ್ಲೂಕಿನಲ್ಲಿ 30ಕ್ಕೂ ಅಧಿಕ ಕಡೆ ಕಾಲು ಸಂಕ, ಸಣ್ಣ ಸೇತುವೆಗಳ ಬೇಡಿಕೆ ಇದೆ. ತಾರಗೋಡ, ಕೌಲದ್ದ, ಕೊಪ್ಪ, ಅಡೆಮನೆ ಸೇರಿದಂತೆ ಹಲವು ಭಾಗದಲ್ಲಿ ಕಿರು ಸೇತುವೆ, ಕಾಲುಸಂಕದ ಅಗತ್ಯತೆಯಿದೆ. ವಾನಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೆಂಗಿನಮುಡಿಯ ಊರಿನಲ್ಲಿ ಹತ್ತಾರು ಮನೆಗಳಿವೆ. ಹೊಳೆ ಆಚೀಚೆ ಮನೆಗಳಿವೆ. ಹೊಳೆಯಾಚೆಗಿನ ನಿವಾಸಿಗಳಿಗೆ ಕಾಲು ಸಂಕವೇ ಗತಿಯಾಗಿದೆ.

ಕೆಳಾಸೆ ಭಾಗದಲ್ಲಿ ಬಿದಿರು ಹಾಗೂ ಅಡಿಕೆ ಮರದ ದಬ್ಬೆಗಳನ್ನು ಬಳಸಿ ಗ್ರಾಮಸ್ಥರೇ ಎರಡು ಕಡೆಗಳಲ್ಲಿ ಉದ್ದನೆಯ ಕಾಲುಸಂಕ ನಿರ್ಮಿಸಿಕೊಳ್ಳುತ್ತಾರೆ. ಮಳೆಗಾಲದಲ್ಲಿ ಭಯದ ನೆರಳಲ್ಲೇ ದಾಟುತ್ತಾರೆ. ಹೊಳೆ ತುಂಬಿ ಹರಿದ ಸಂದರ್ಭದಲ್ಲಿ ಕೆಲವೊಮ್ಮೆ ಕಾಲುಸಂಕವೇ ತೇಲಿ ಹೋಗುತ್ತದೆ. ಇಂತಹ ಸಂದರ್ಭದಲ್ಲಿ ಸಂಪರ್ಕ ಸಾಧನ ಇಲ್ಲದೇ ಊರು ದ್ವೀಪದಂತಾಗುತ್ತದೆ ಎನ್ನುತ್ತಾರೆ ಸ್ಥಳೀಯರು.

ಮುಂಡಗೋಡ ತಾಲ್ಲೂಕಿನ ಬೆಡಸಗಾಂವ ಪಂಚಾಯಿತಿ ವ್ಯಾಪ್ತಿಯಲ್ಲಿ 15ಕ್ಕೂ ಹೆಚ್ಚು ಕಡೆ ಕಾಲುಸಂಕಗಳ ಬೇಡಿಕೆಯಿದ್ದು, ಕೆಲವು ವರ್ಷಗಳಿಂದ ಅಲ್ಲಿನ ಗ್ರಾಮಸ್ಥರು, ವಿದ್ಯಾರ್ಥಿಗಳು ಮಳೆಗಾಲದಲ್ಲಿ ಮರದ ಕಾಲುಸಂಕಗಳಲ್ಲಿ ಜೀವ ಕೈಯಲ್ಲಿ ಹಿಡಿದುಕೊಂಡು ದಾಟುವುದು ಸಾಮಾನ್ಯವಾಗಿದೆ.

ಶಾನವಳ್ಳಿ, ಟೆಂಕಲ್‌ ಉಮ್ಮಚಗಿ, ತೊಗರಳ್ಳಿ, ಅಟಬೈಲ್‌, ವೀರಾಪುರ, ಬಾಳೆಕೊಪ್ಪ, ನಂದಿಗಟ್ಟಾ, ಕೋಡಂಬಿ ಗ್ರಾಮಗಳ ವ್ಯಾಪ್ತಿಯಲ್ಲಿ ಕಾಲುಸಂಕ ಹಾಗೂ ಗ್ರಾಮ ಬಂಧು ಸೇತುವೆಗೆ ಹೆಚ್ಚಿನ ಬೇಡಿಕೆಯಿದೆ.

‘ಸರ್ಕಾರಕ್ಕೆ ಹಲವು ಬಾರಿ ಮನವಿ ಮಾಡಿದರೂ, ಈವರೆಗೆ ಶಾಶ್ವತ ಕಾಮಗಾರಿ ಕೈಗೊಳ್ಳುತ್ತಿಲ್ಲ. ಅರಣ್ಯದಂಚಿನಲ್ಲಿ ಒಂಟಿ ಮನೆ, ತೋಟ, ಗದ್ದೆ ಇರುವರಿಗೆ ಕಾಲುಸಂಕ ದಾಟಲೇಬೇಕು. ಶಾಲೆಗೆ ಹೋಗುವ ಮಕ್ಕಳು ಸಹ ಒಬ್ಬರಿಗೊಬ್ಬರು ಹಿಡಿದುಕೊಂಡು ಕಟ್ಟಿಗೆಯ ಕಾಲುಸಂಕದ ಮೇಲೆ ಹೆಜ್ಜೆ ಇಡುತ್ತಾ ಹೋಗುತ್ತಾರೆ’ ಎಂದು ಗ್ರಾಮಸ್ಥ ದೇವೇಂದ್ರ ಹೇಳಿದರು.

‘ಬೆಡಸಗಾಂವ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಲುಸಂಕ ಹಾಗೂ ಗ್ರಾಮ ಬಂಧು ಸೇತುವೆ ನಿರ್ಮಾಣಕ್ಕೆ ಈಗಾಗಲೇ ಕ್ರಿಯಾಯೋಜನೆ ತಯಾರಿಸಲಾಗಿದೆ. ಒಟ್ಟು 13 ಕಾಲು ಸಂಕ ಹಾಗೂ 12 ಗ್ರಾಮ ಬಂಧು ಸೇತುವೆ ನಿರ್ಮಾಣದ ಬೇಡಿಕೆಯಿದೆ’ ಎಂದು ಲೋಕೋಪಯೋಗಿ ಎಇಇ ಮಹದೇವಪ್ಪ ಹೇಳಿದರು.

ಅಂಕೋಲಾ ತಾಲ್ಲೂಕಿನ ಅಗಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಡ್ಲುರು ಹಾಗೂ ಹೊನ್ನಳ್ಳಿ ಗ್ರಾಮಗಳ ವ್ಯಾಪ್ತಿಯ ಕೆಲವೆಡೆ ಜನರು ಹಳ್ಳ ದಾಟಲು ಕಾಲುಸಂಕಗಳ ಅಗತ್ಯವಿದೆ. ನಾಲ್ಕೈದು ವರ್ಷಗಳ ಹಿಂದೆ ಹಳೆಯ ಮರದ ಕಾಲುಸಂಕವನ್ನು ತೆರವುಗೊಳಿಸಿ, ಹೊಸದಾದ ಕಾಂಕ್ರೀಟ್ ಸಂಕವನ್ನು ನಿರ್ಮಿಸಲಾಗಿದೆ. ಆದರೆ ಇನ್ನೂ ಹಲವೆಡೆ ಸರ್ಕಾರದಿಂದ ಮಂಜೂರಾಗಿದ್ದರೂ ಖಾಸಗಿ ಜಮೀನುಗಳ ಮಾಲೀಕರ ದಾವೆಯಿಂದ ಕಾಮಗಾರಿಗಳು ನನೆಗುದಿಗೆ ಬಿದ್ದಿವೆ.

ಭಟ್ಕಳ ತಾಲ್ಲೂಕಿನಲ್ಲಿ ಗ್ರಾಮೀಣ ಭಾಗದಲ್ಲಿ ಜನರು ಮಳೆಗಾಲದಲ್ಲಿ ಸ್ವಯಂ ನಿರ್ಮಿತ ಕಾಲುಸಂಕಗಳನ್ನು ಬಳಿಸಿ ಹಳ್ಳ ದಾಟುತ್ತಾರೆ.

‘ಕಾಲುಸಂಕ ನಿರ್ಮಾಣಕ್ಕೆ ಕ್ರಿಯಾಯೋಜನೆ ಮಾಡಿ ಪ್ರಸ್ತಾವ ಸಲ್ಲಿಕೆಯಾಗಿತ್ತು. 22 ಕಾಲುಸಂಕ ನಿರ್ಮಾಣಕ್ಕೆ ಈ ಬಾರಿ ಅನುಮೋದನೆ ದೊರೆತಿದೆ’ ಎಂದು ಲೋಕೋಪಯೋಗಿ ಇಲಾಖೆ ಸಹಾಯಕ ಎಂಜಿನಿಯರ್ ಸುಜಯ್‌ ತಿಳಿಸಿದ್ದಾರೆ.

ಹೊನ್ನಾವರ ತಾಲ್ಲೂಕಿನ ನಾಥಗೇರಿ ಮತ್ತು ಸಂಶಿಯಲ್ಲಿ ತಲಾ ಒಂದು ತೂಗು ಸೇತುವೆ ದುರಸ್ತಿ, ಹೆಗ್ಗಾರ-ಅನಿಲಗೋಡ ಹೊಸ ತೂಗು ಸೇತುವೆ ನಿರ್ಮಾಣ, ಹಡಿನಬಾಳ ವಠಾರ, ಕೆಳಗಿನ ಇಡಗುಂಜಿ ಬಾಳುಬೆಲೆಯಲ್ಲಿ ಈಗಿರುವ ಕಾಲುಸಂಕಗಳ ದುರಸ್ತಿ ಹಾಗೂ ಹೆರಂಗಡಿ ಹೊಸತೋಟದಲ್ಲಿ ಹೊಸ ಕಾಲು ಸಂಕ ನಿರ್ಮಾಣಕ್ಕೆ ಪ್ರಸ್ತಾವ ಸಲ್ಲಿಕೆಯಾಗಿವೆ.

‘ಕಾಲು ಸಂಕ ಹಾಗೂ ತೂಗು ಸೇತುವೆ ನಿರ್ಮಾಣಕ್ಕೆ ಸಂಬಂಧಿಸಿದ ಪ್ರಸ್ತಾವನೆಗಳು ಎರಡು ವರ್ಷಗಳ ಹಿಂದೆಯೇ ಸಲ್ಲಿಕೆಯಾಗಿದ್ದು ಸರ್ಕಾರದಿಂದ ಇದುವರೆಗೆ ಮಂಜೂರಾತಿ ಅಥವಾ ಅನುದಾನ ಸಿಕ್ಕಿಲ್ಲ’ ಎಂದು ತಾಲ್ಲೂಕು ಪಂಚಾಯಿತಿ ಅಧಿಕಾರಿಗಳು ತಿಳಿಸಿದರು.

ಯಲ್ಲಾಪುರ ತಾಲ್ಲೂಕಿನ ವಜ್ರಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊನ್ನಗದ್ದೆ ಗ್ರಾಮದ ಅಡಿಕೆ ಮನೆ ಹಳ್ಳಕ್ಕೆ ಕಾಲುಸಂಕ ಹಾಕಲಾಗಿದೆ. ಮಳೆಗಾಲದಲ್ಲಿ ಹಳ್ಳವನ್ನು ಶಾಲಾ ಮಕ್ಕಳು ಸಂಕ ಬಳಸಿಯೇ ದಾಟಬೇಕಿದೆ. ಬೀಗಾರ ಬಾಗಿನಕಟ್ಟಾ ಗ್ರಾಮದಲ್ಲಿ ಹಳ್ಳದ ಎರಡೂ ಅಂಚಿನಲ್ಲಿ ಜಮೀನು ಹೊಂದಿರುವ ರೈತರು ಒಂದು ಬದಿಯಿಂದ ಇನ್ನೊಂದು ಬದಿ ಸಾಗಲು ಮರದ ಕಾಲುಸಂಕವನ್ನೇ ಅವಲಂಬಿಸಿದ್ದಾರೆ.

‘ಬಾಗಿನಕಟ್ಟಾ ಹಳ್ಳಕ್ಕೆ ಕಿರಗಾರಿಮನೆ ಕೆಳಭಾಗದಲ್ಲಿರುವ ಸಂಕದಲ್ಲಿ ಸಂಚರಿಸುವುದು ಕಷ್ಟಸಾಧ್ಯವಾಗಿದೆ. ಇಲ್ಲಿ ಕಾಂಕ್ರೀಟ್ ಸಂಕ‌ ನಿರ್ಮಿಸಿದರೆ ಅನುಕೂಲವಾಗುತ್ತದೆ’ ಎಂಬುದು ಗ್ರಾಮಸ್ಥ ರಾಮಕೃಷ್ಣ ಗಾಂವ್ಕರ ಅಭಿಪ್ರಾಯ.

ಶಿರಸಿ ತಾಲ್ಲೂಕಿನ ತಾರಗೋಡ ಬಳಿ ಕಿರು ಸೇತುವೆ ಕುಸಿದ ಸ್ಥಿತಿಯಲ್ಲಿರುವುದು
ಮುಂಡಗೋಡ ತಾಲ್ಲೂಕಿನ ಬೆಡಸಗಾಂವ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೊಗರಳ್ಳಿ ಸನಿಹ ಮರದ ಕಾಲುಸಂಕದ ಬದಲು ಕಾಂಕ್ರೀಟ್ ಕಾಲುಸಂಕ ನಿರ್ಮಾಣಕ್ಕೆ ಅಧಿಕಾರಿಗಳು ಪರಿಶೀಲಿಸಿದ್ದರು.
ಗ್ರಾಮೀಣ ಭಾಗದಲ್ಲಿ ಅಗತ್ಯವಿರುವ ಕಡೆಗಳಲ್ಲಿ ಸಣ್ಣ ಸೇತುವೆ ಕಾಂಕ್ರೀಟ್ ಕಾಲು ಸಂಕ ನಿರ್ಮಾಣಕ್ಕೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದು ಹಂತ ಹಂತವಾಗಿ ಮಂಜೂರಾಗುತ್ತಿದೆ
ಭೀಮಣ್ಣ ನಾಯ್ಕ ಶಿರಸಿ ಶಾಸಕ
ಊರಾಚೆಯ ತೋಟ ಗದ್ದೆಗಳಿಗೆ ಹೋಗಲು ಸಹ ಕಾಲುಸಂಕಗಳನ್ನು ಬಳಸಬೇಕಾದ ಅನಿವಾರ್ಯತೆಯಿದೆ. ಮಳೆಗಾಲದಲ್ಲಿ ತುಂಬಿ ಹರಿಯುವ ಹಳ್ಳ ಕಾಲುವೆಗಳ ಮೇಲೆ ಅಪಾಯ ಎದುರಿಸುತ್ತ ಸಾಗಬೇಕಾಗುತ್ತದೆ
ದೇವೇಂದ್ರ ನಾಯ್ಕ ಬೆಡಸಗಾಂವ ಗ್ರಾಮಸ್ಥ
ಕೆಲವು ಕಡೆ ಕಾಲುಸಂಕ ನಿರ್ಮಿಸಿದರೂ ಕಾಲುದಾರಿ ಖಾಸಗಿ ಜಾಗದಲ್ಲಿ ಹಾದುಹೋಗುವುದರಿಂದ ಜಾಗದ ಮಾಲೀಕರ ತಕರಾರಿನ ಕಾರಣಕ್ಕೆ ಕಾಲುಸಂಕವೂ ನಿರ್ಮಾಣವಾಗುತ್ತಿಲ್ಲ
ಮಹೇಶ ಗೌಡ ಅಗಸೂರು ಗ್ರಾಮಸ್ಥ
ಮರದಿಂದ ನಿರ್ಮಿತ ಕಾಲುಸಂಕಗಳು ಕೆಲವೊಮ್ಮೆ ಪ್ರವಾಹ ಪ್ರರಿಸ್ಥಿತಿ ತಲೆದೋರಿದಾಗ ಕೊಚ್ಚಿಕೊಂಡು ಹೋದಾಗ ಸಂಪರ್ಕ ಕಡಿತವಾಗಿ ಮಳೆ ಕಡಿಮೆಯಾಗುವ ತನಕ ಒಂದು ಬದಿಯಲ್ಲೇ ನಿಂತುಕಾಯುವ ಸ್ಥಿತಿ ಇದೆ
ಸುಕ್ರಯ್ಯ ಗೊಂಡ ಹಾಡುವಳ್ಳಿ ಗ್ರಾಮಸ್ಥ

ಸೇತುವೆಯಿಲ್ಲದೆ ಸುತ್ತು ಬಳಸಿ ಸಂಚಾರ

ಜೊಯಿಡಾ ತಾಲ್ಲೂಕಿನ ಬಜಾರಕುಣಂಗ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಡಿಗ್ಗಿ ಭಾಗದ ಸುಮಾರು ಏಳು ಹಳ್ಳಿಗಳಿಗೆ ತೇರಾಳಿ ಮಾರ್ಗದ ಮೂಲಕ ಸಿಸೈ ಹಳ್ಳಕ್ಕೆ ಸೇತುವೆ  ನಿರ್ಮಿಸುವಂತೆ ಈ ಭಾಗದ ಸ್ಥಳೀಯರು ಹಲವು ವರ್ಷಗಳಿಂದ ಆಗ್ರಹಿಸುತ್ತಿದ್ದಾರೆ. ಸ್ಪಂದನೆ ಸಿಗದ ಕಾರಣಕ್ಕೆ ಪ್ರತಿ ವರ್ಷವೂ ಮಳೆಗಾಲದಲ್ಲಿ ತಾವೇ ನಿರ್ಮಿಸಿಕೊಳ್ಳುವ ಕಾಲು ಸಂಕದಲ್ಲಿ ಸಾಗುತ್ತಾರೆ. ಕರಂಜೆ ಅಸುಳೆ ಹಳ್ಳಿಗಳ ಜನರು ಬಜಾರಕುಣಂಗ ಮೂಲಕ ಸಾಗುವ ರಸ್ತೆಯಲ್ಲಿ ದೊಡ್ಡ ಹಳ್ಳಗಳು ಹರಿಯುತ್ತಿದ್ದು ಈವರೆಗೆ ಶಾಶ್ವತ ಸೇತುವೆಗಳ ನಿರ್ಮಾಣ ಆಗಿಲ್ಲ. ಕುಂಬಾರವಾಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನವರ ಕೆಲೋಲಿ ಘಟ್ಟಾವ ಹಳ್ಳಿಗಳ ರಸ್ತೆಗಳಲ್ಲಿ ಹಳ್ಳಗಳು ಹರಿಯುತ್ತಿದ್ದು ಮಳೆಗಾಲದಲ್ಲಿ ಸ್ಥಳೀಯರೇ ಕಾಲು ಸಂಕಗಳನ್ನು ನಿರ್ಮಾಣ ಮಾಡಿಕೊಳ್ಳುತ್ತಾರೆ. ‘ಪ್ರತಿ ವರ್ಷ ಮಳೆಗಾಲ ಪೂರ್ವ ಎರಡು ಕಡೆಗಳಲ್ಲಿ ಕಾಲು ಸಂಕಗಳನ್ನು ನಾವೇ ನಿರ್ಮಿಸುತ್ತೇವೆ. ಸೇತುವೆಗಳು ಇಲ್ಲದಿರುವುದರಿಂದ 10–15 ಕಿ.ಮೀ ದೂರ ನಡೆದುಕೊಂಡೇ ಸಾಗಬೇಕಾಗುತ್ತದೆ’ ಎನ್ನುತ್ತಾರೆ ಸಿಸೈ ಗ್ರಾಮದ ಪ್ರಕಾಶ ಮೀರಾಶಿ.

ಪೂರಕ ಮಾಹಿತಿ: ರಾಜೇಂದ್ರ ಹೆಗಡೆ, ಶಾಂತೇಶ ಬೆನಕನಕೊಪ್ಪ, ಜ್ಞಾನೇಶ್ವರ ದೇಸಾಯಿ, ಎಂ.ಜಿ.ಹೆಗಡೆ, ಮೋಹನ ನಾಯ್ಕ, ವಿಶ್ವೇಶ್ವರ ಗಾಂವ್ಕರ, ಅಜಿತ್ ನಾಯಕ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.