ಶಿರಸಿ: ಪಡಿತರ ಚೀಟಿಯಲ್ಲಿ ಹೊಸ ಸದಸ್ಯರ ಹೆಸರು ಸೇರ್ಪಡೆ ಹಾಗೂ ತಿದ್ದುಪಡಿಗೆ ಆಹಾರ ಇಲಾಖೆಯು ಡಿ.31ರ ವರೆಗೆ ಅವಕಾಶ ಕಲ್ಪಿಸಿದೆ. ಆದರೆ, ತಾಲ್ಲೂಕಿನ ಗ್ರಾಮೀಣ ಭಾಗದ ಗ್ರಾಮ ಒನ್ ಕೇಂದ್ರಗಳ ವ್ಯಾಪ್ತಿಯಲ್ಲಿ ಮೊಬೈಲ್ ನೆಟ್‍ವರ್ಕ್ ಹಾಗೂ ಕೆಲವೊಮ್ಮೆ ಸರ್ವರ್ ಸಮಸ್ಯೆಯಿಂದಾಗಿ ಸಾರ್ವಜನಿಕರಿಗೆ ತಿದ್ದುಪಡಿಗಾಗಿ ನಗರಕ್ಕೆ ಬರುವ ಅನಿವಾರ್ಯತೆ ಎದುರಾಗಿದೆ.
ಪಡಿತರ ಚೀಟಿಯಲ್ಲಿನ ಹೆಸರು ತಿದ್ದುಪಡಿ, ಫೋಟೊ, ನ್ಯಾಯಬೆಲೆ ಅಂಗಡಿ ಬದಲಾವಣೆ, ಹೊಸ ಹೆಸರು ಸೇರ್ಪಡೆ, ಚೀಟಿಯಲ್ಲಿರುವ ಹೆಸರನ್ನು ತೆಗೆಯುವುದಕ್ಕೆ ಅವಕಾಶ ನೀಡಲಾಗಿದೆ. ಆದರೆ, ತಾಲ್ಲೂಕಿನ ಹಲವು ಗ್ರಾಮೀಣ ಭಾಗದ ಪಂಚಾಯಿತಿ ಗ್ರಾಮ ಒನ್ ಕೇಂದ್ರಗಳಲ್ಲಿ ಮೊಬೈಲ್ ನೆಟ್‍ವರ್ಕ್ ಸಮಸ್ಯೆ ಇದೆ. ಇದರಿಂದ ತಿದ್ದುಪಡಿ ಸಂದರ್ಭದಲ್ಲಿ ಅರ್ಜಿದಾರರ ಮೊಬೈಲ್‍ಗೆ ಒನ್ ಟೈಂ ಪಾಸ್‍ವರ್ಡ್ (ಒಟಿಪಿ) ಬರಲು ಸಮಸ್ಯೆ ಎದುರಾಗುತ್ತಿದೆ. ಇದು ತಿದ್ದುಪಡಿ ಕಾರ್ಯ ವಿಳಂಬಕ್ಕೆ ಕಾರಣವಾಗುತ್ತಿದೆ’ ಎಂಬ ಸಾರ್ವಜನಿಕ ದೂರು ವ್ಯಾಪಕವಾಗಿದೆ.
‘ನೆಟ್‍ವರ್ಕ್ ಸಮಸ್ಯೆ ಜತೆ ಹಲವು ಬಾರಿ ಸರ್ವರ್ ಕೂಡ ತೊಡಕಾಗುತ್ತಿದ್ದು, ತಿದ್ದುಪಡಿ ಕೇಂದ್ರಗಳ ಮುಂದೆ ಪಡಿತರ ಚೀಟಿದಾರರು ಗಂಟೆಗಳ ಕಾಲ ಕಾಯುವಂತಾಗಿದೆ. ಈ ಹಿಂದೆ ತಿದ್ದುಪಡಿಗೆ ಅವಕಾಶ ನೀಡಿದ್ದಾಗ ಸರ್ವರ್ ಸಮಸ್ಯೆಯಿಂದಾಗಿ ತುರ್ತು ಸೇವೆಗೂ ಪಡಿತರ ಚೀಟಿ ಇಲ್ಲದಂತಾಗಿತ್ತು. ಈಗಲೂ ಅಂಥದ್ದೇ ಸಮಸ್ಯೆ ಎದುರಾಗುತ್ತಿದೆ. ಸಾವಿರಾರು ಗ್ರಾಮಸ್ಥರಿಗೆ ನೆಟ್‍ವರ್ಕ್ ಸಮಸ್ಯೆ ಕಾರಣಕ್ಕೆ ನಗರಕ್ಕೆ ತೆರಳಿ ಕರ್ನಾಟಕ ಒನ್ ಕೇಂದ್ರಗಳಲ್ಲಿ ತಿದ್ದುಪಡಿ ಕಾರ್ಯ ಮಾಡಿಸುವ ಅನಿವಾರ್ಯತೆ ಎದುರಾಗಿದೆ’ ಎಂಬುದು ಶಿರಗುಣಿಯ ಯಶೋಧಾ ಅವರ ಮಾತು.
‘6 ವರ್ಷ ಮೇಲ್ಪಟ್ಟವರನ್ನು ಪಡಿತರ ಚೀಟಿಗೆ ಸೇರಿಸಲು ಜಾತಿ, ಆದಾಯ ಪ್ರಮಾಣಪತ್ರ ಹಾಗೂ ಆಧಾರ್ ಕಾರ್ಡ್ ನೀಡಬೇಕು. ಆದರೆ, 6 ವರ್ಷದ ಮಕ್ಕಳು ಆದಾಯ ಪ್ರಮಾಣಪತ್ರ ತರಬೇಕು ಎನ್ನುವುದೇ ಹಾಸ್ಯಾಸ್ಪದ ಸಂಗತಿ. ಈಗಾಗಲೇ ಪೋಷಕರು ಹೊಂದಿರುವ ಬಿಪಿಎಲ್ ಇಲ್ಲವೇ ಎಪಿಎಲ್ ಕಾರ್ಡ್‌ಗಳಿಗೆ ನೇರವಾಗಿ ಸೇರಿಸುವ ಅವಕಾಶ ನೀಡಬೇಕಿತ್ತು. ಆದರೆ ಸರ್ಕಾರವೇ ಇನ್ನಿಲ್ಲದ ಪ್ರಮಾಣ ಪತ್ರಗಳನ್ನು ಕೇಳುತ್ತಿದೆ. ಇದರಿಂದ ತಿದ್ದುಪಡಿಗೆ ಇನ್ನಷ್ಟು ಸಮಯ ಹಿಡಿಯುತ್ತದೆ’ ಎಂಬುದು ಬಹುತೇಕ ಪಾಲಕರ ದೂರು.
‘ಒಂದು ಕಾರ್ಡ್‌ಗೆ ಅರ್ಜಿ ಸಲ್ಲಿಸಲು ಕನಿಷ್ಠ 1-2 ಗಂಟೆ ಬೇಕು. ಇನ್ನು ಎಲ್ಲ ಹಂತಗಳು ಪೂರ್ಣಗೊಂಡು ಅಂತಿಮ ಸುತ್ತಿನಲ್ಲಿ ಸರ್ವರ್ ಸಮಸ್ಯೆ ಎದುರಾದರೆ ಮತ್ತಷ್ಟು ಸಮಸ್ಯೆ. ಗ್ರಾಮೀಣ ಭಾಗದಲ್ಲಿ ಮೊಬೈಲ್ ನೆಟ್‍ವರ್ಕ್ ಸಮಸ್ಯೆ ಇರುವುದರಿಂದ ಒಟಿಪಿ ಪಡೆಯಲೂ ಕಾಯಬೇಕು. ಹೀಗಾಗಿ ಒಂದು ದಿನಕ್ಕೆ ಒಂದು ಕೇಂದ್ರದಲ್ಲಿ 6–10 ಕಾರ್ಡ್‌ಗಳ ತಿದ್ದುಪಡಿಯಾದರೆ ಅದೇ ಅತ್ಯಧಿಕ ಸಾಧನೆ ಎನ್ನುವಂತಾಗಿದೆ’ ಎಂಬುದು ಗ್ರಾಮ ಒನ್ ಕೇಂದ್ರದ ಸಿಬ್ಬಂದಿ ಮಾಹಿತಿ.
ನೆಟ್‍ವರ್ಕ್ ಸಮಸ್ಯೆ ಇರುವ ಗ್ರಾಮ ಒನ್ ಕೇಂದ್ರಗಳ ವ್ಯಾಪ್ತಿಯ ನಾಗರಿಕರು ಪಡಿತರ ಚೀಟಿ ತಿದ್ದುಪಡಿಗೆ ಸಾಮಾನ್ಯ ಸೇವಾ ಕೇಂದ್ರ ಇಲ್ಲವೇ ಕರ್ನಾಟಕ ಒನ್ ಕೇಂದ್ರಕ್ಕೆ ಭೇಟಿ ನೀಡಬಹುದುಶ್ರೀಧರ ಮುಂದಲಮನಿ ತಹಶೀಲ್ದಾರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.