ADVERTISEMENT

‘ವಿಕ್ರಮಾದಿತ್ಯ’ನ ಭೇಟಿಗೆ ಜನಸಾಗರ

ಸೀಬರ್ಡ್‌ ನೌಕಾನೆಲೆಯಲ್ಲಿ ಯುದ್ಧನೌಕೆಗಳನ್ನು ಕಣ್ತುಂಬಿಕೊಂಡ ಸಾರ್ವಜನಿಕರು

​ಪ್ರಜಾವಾಣಿ ವಾರ್ತೆ
Published 20 ಜುಲೈ 2019, 14:26 IST
Last Updated 20 ಜುಲೈ 2019, 14:26 IST
‘ಐಎನ್‌ಎಸ್ ವಿಕ್ರಮಾದಿತ್ಯ’ದ ವೀಕ್ಷಣೆಗೆ ತೆರಳಲು ಕಾರವಾರದ ಸೀಬರ್ಡ್ ನೌಕಾನೆಲೆಯ ಒಳಗೆ ಶನಿವಾರ ನಿಂತಿದ್ದ ಜನರ ಸಾಲು.
‘ಐಎನ್‌ಎಸ್ ವಿಕ್ರಮಾದಿತ್ಯ’ದ ವೀಕ್ಷಣೆಗೆ ತೆರಳಲು ಕಾರವಾರದ ಸೀಬರ್ಡ್ ನೌಕಾನೆಲೆಯ ಒಳಗೆ ಶನಿವಾರ ನಿಂತಿದ್ದ ಜನರ ಸಾಲು.   

ಕಾರವಾರ: ಇಲ್ಲಿನ ಅರಗಾ ಸೀಬರ್ಡ್ ನೌಕಾನೆಲೆಯು ಶನಿವಾರ ಸಾರ್ವಜನಿಕರ ವೀಕ್ಷಣೆಗಾಗಿ ಮುಕ್ತವಾಗಿತ್ತು. ವಿದ್ಯಾರ್ಥಿಗಳೂ ಸೇರಿದಂತೆ ಸಹಸ್ರಾರುನಾಗರಿಕರುಭಾರತೀಯ ನೌಕಾಪಡೆಯ ಯುದ್ಧನೌಕೆಗಳನ್ನು ಕಣ್ತುಂಬಿಕೊಂಡರು.

ಜುಲೈ 26ರಂದು ಕಾರ್ಗಿಲ್ ವಿಜಯ ದಿವಸದ ಅಂಗವಾಗಿ ನೌಕಾನೆಲೆಯಲ್ಲಿ ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿತ್ತು. ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧೆಡೆಯಿಂದ, ನೆರೆ ರಾಜ್ಯ ಗೋವಾದಿಂದಲೂ ಸಾವಿರಾರು ಜನರು ಇಲ್ಲಿಗೆ ಭೇಟಿ ನೀಡಿದರು. ನೌಕಾನೆಲೆಯ ಮುಖ್ಯದ್ವಾರದಲ್ಲಿ ಪ್ರವೇಶ ಚೀಟಿ ಪಡೆಯಲು ವ್ಯವಸ್ಥೆ ಮಾಡಲಾಗಿತ್ತು.

ಜನರ ಸಾಲು ಹೆದ್ದಾರಿಗುಂಟ ಚಾಚಿತ್ತು. ಅಧಿಕಾರಿಗಳು, ಪ್ರವೇಶ ಚೀಟಿಯ ಆಧಾರದ ಮೇಲೆ ಒಬ್ಬೊಬ್ಬರನ್ನೇ ಪರಿಶೀಲಿಸಿ ನೌಕಾನೆಲೆಯ ಒಳಗೆ ಬಿಟ್ಟರು. ಅಲ್ಲಿಂದ ನೌಕಾನೆಲೆಯ ಜಟ್ಟಿಗೆ ಹೋಗಲು ವಾಹನ ವ್ಯವಸ್ಥೆಯನ್ನು ನೌಕಾನೆಲೆಯಿಂದ ಮಾಡಲಾಗಿತ್ತು. ಸುಮಾರು ಆರು ಟೆಂಪೊ, ಎರಡು ವ್ಯಾನ್‌ಗಳು ಸಾರ್ವಜನಿಕರನ್ನು ಕರೆದೊಯ್ದು, ವಾಪಸ್ ಕರೆತಂದು ಬಿಡುವ ಕಾರ್ಯವನ್ನು ಸಂಜೆ ಐದು ಗಂಟೆಯವರೆಗೂ ಮಾಡಿದವು.

ADVERTISEMENT

ವಿಕ್ರಮಾದಿತ್ಯ ಕಂಡು ಸಂಭ್ರಮ:

ಜಟ್ಟಿಯಲ್ಲಿ ನಿಂತಿದ್ದ, ದೇಶದ ಏಕೈಕ ಯುದ್ಧ ವಿಮಾನ ವಾಹಕ ನೌಕೆ ‘ಐಎನ್‌ಎಸ್ ವಿಕ್ರಮಾದಿತ್ಯ’ವನ್ನು ಕಂಡು ಜನರು ಖುಷಿಪಟ್ಟರು. ಅನೇರು ಅದರ ಎದುರು ನಿಂತು ಸೆಲ್ಫಿ ಕ್ಲಿಕ್ಕಿಸಿಕೊಂಡರು. ತಮ್ಮ ತಂಡದೊಂದಿಗೆ ಫೋಟೊಗಳನ್ನು ತೆಗೆದುಕೊಂಡರು. ವಿಕ್ರಮಾದಿತ್ಯ ವೀಕ್ಷಣೆಯ ಬಳಿಕ ‘ಐಎನ್ಎಸ್ ಸುವರ್ಣ’ದ ಒಳಗೂ ಸಾರ್ವಜನಿಕರಿಗೆ ವೀಕ್ಷಣೆಗೆ ಅವಕಾಶ ನೀಡಲಾಗಿತ್ತು.

ವೀಕ್ಷಣೆಗೆ ಬಂದವರಿಗೆ ನೌಕಾನೆಲೆಯ ಅಧಿಕಾರಿಗಳು, ಯುದ್ಧದ ಸಂದರ್ಭದಲ್ಲಿ ನೌಕೆ ಯಾವ ರೀತಿ ಕಾರ್ಯನಿರ್ವಹಿಸುತ್ತದೆ ಎನ್ನುವುದನ್ನು ವಿವರಿಸಿದರು. ಅದರ ಸಾಮರ್ಥ್ಯ, ದೇಶದ ರಕ್ಷಣಾ ವ್ಯವಸ್ಥೆಯಲ್ಲಿ ನೌಕಾಸೇನೆಯ ಪಾತ್ರಗಳ ಬಗ್ಗೆಯೂ ಮಾಹಿತಿ ನೀಡಿದರು. ಇದೇ ವೇಳೆ ನೌಕಾಸೇನೆಗೆ ಸಂಬಂಧಿಸಿದ ಟಿ– ಶರ್ಟ್, ಟೋಪಿ, ಮಗ್, ಕೀಚೈನ್‌ಗಳನ್ನು ಮಾರಾಟಕ್ಕೆ ಇಡಲಾಗಿತ್ತು.

ಹೈರಾಣಾದ ನೌಕಾ ಸಿಬ್ಬಂದಿ: ‘ಸೀಬರ್ಡ್ ನೌಕಾನೆಲೆಯ ಒಳಗೆ ಇಷ್ಟೊಂದು ಜನರು ಭೇಟಿ ನೀಡಿದ್ದು ಇದೇ ಮೊದಲು. ಚಿಕ್ಕ ಮಕ್ಕಳನ್ನು, ಹಿರಿಯ ನಾಗರಿಕರನ್ನು ನೌಕಾನೆಲೆಯ ಒಳಗೆ ಅತಿ ಸುರಕ್ಷತೆಯಿಂದ ನೋಡಿಕೊಂಡಿದ್ದೇವೆ’ ಎಂದು ನೌಕಾ ಸಿಬ್ಬಂದಿಯೊಬ್ಬರು ‘ಪ್ರಜಾವಾಣಿ’ಗೆತಿಳಿಸಿದರು.

ಬೆಳಿಗ್ಗೆಯಿಂದ ಸಂಜೆಯವರೆಗೂ ಬಿಟ್ಟು ಬಿಟ್ಟು ಮಳೆ ಸುರಿಯುತ್ತಿತ್ತು. ಇದರಿಂದಾಗಿ ಸಾರ್ವಜನಿಕರ ಭೇಟಿಗೆ ಸ್ವಲ್ಪ ತೊಡಕಾಯಿತು. ಸಿಬ್ಬಂದಿ ಜನರನ್ನು ನಿಭಾಯಿಸಲು ಹೆಣಗಾಡಿದರು. ನೌಕೆಯ ಒಳ ಹೋಗಲು ಹಾಗೂ ಹೊರ ಬರಲು ಒಂದೊಂದೇ ದ್ವಾರಗಳು ಇದ್ದಕಾರಣ ಸ್ವಲ್ಪ ಅಡಚಣೆಉಂಟಾಯಿತು. ಕೆಲವರು ಸಿಟ್ಟಿಗೆದ್ದು ಸಿಬ್ಬಂದಿಯೊಡನೆವಾಗ್ವಾದ ನಡೆಸಿದರು.

ಹೆದ್ದಾರಿಯಲ್ಲಿ ವಾಹನಗಳ ಸಾಲು:ಜನಸಾಗರವೇ ನೌಕಾನೆಲೆಯತ್ತ ಹರಿದು ಬಂದಿದ್ದರಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳ ಸಂಚಾರವೂ ಅಸ್ತವ್ಯಸ್ತಗೊಂಡಿತು. ರಾಜ್ಯದ ವಿವಿಧೆಡೆಯಿಂದ ಜನರು ಕಾರು ಸೇರಿದಂತೆ ವಿವಿಧ ವಾಹನಗಳಲ್ಲಿ ಬಂದಿದ್ದರಿಂದ ಅವುಗಳನ್ನು ಹೆದ್ದಾರಿ ಪಕ್ಕದಲ್ಲಿ ನಿಲುಗಡೆ ಮಾಡಿದ್ದರು.

ಇವುಗಳ ಸಾಲು ಐಎನ್‌ಎಚ್‌ಎಸ್‌ ಪತಂಜಲಿ ಆಸ್ಪತ್ರೆಯವರೆಗೂ ತಲುಪಿತ್ತು. ಇದರಿಂದಾಗಿ ಹೆದ್ದಾರಿಯಲ್ಲಿ ಬೃಹತ್ ವಾಹನಗಳ ಸಂಚಾರಕ್ಕೆ ಸಮಸ್ಯೆ ಉಂಟಾಯಿತು. ಗ್ರಾಮೀಣ ಠಾಣೆಯ ಪೊಲೀಸರು ನೌಕಾನೆಲೆಯ ಹೊರ ಭಾಗದಲ್ಲಿ ಭದ್ರತೆಗೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.