ADVERTISEMENT

ಉತ್ತರ ಕನ್ನಡ ಜಿಲ್ಲೆಗೆ ಇನ್ನೂ ಮೂರು ಕೋವಿಡ್ ವಾರ್ಡ್: ಸಚಿವ ಶಿವರಾಮ್ ಹೆಬ್ಬಾರ

ಶಿರಸಿ, ಹಳಿಯಾಳ, ಭಟ್ಕಳಕ್ಕೆ ತಲಾ 100 ಹಾಸಿಗೆಯ ಸೌಲಭ್ಯ ನೀಡಲು ಸಚಿವ ಹೆಬ್ಬಾರ ಸೂಚನೆ

​ಪ್ರಜಾವಾಣಿ ವಾರ್ತೆ
Published 12 ಮೇ 2020, 14:36 IST
Last Updated 12 ಮೇ 2020, 14:36 IST
ಶಿವರಾಮ ಹೆಬ್ಬಾರ
ಶಿವರಾಮ ಹೆಬ್ಬಾರ   

ಕಾರವಾರ: ‘ಜಿಲ್ಲೆಯ ಶಿರಸಿ, ಹಳಿಯಾಳ ಮತ್ತು ಭಟ್ಕಳದ ಸರ್ಕಾರಿ ಆಸ್ಪತ್ರೆಗಳಲ್ಲಿ ತಲಾ 100 ಹಾಸಿಗೆಗಳ ಪ್ರತ್ಯೇಕ ಕೋವಿಡ್ ವಾರ್ಡ್ ಸಿದ್ಧಪಡಿಸಲಾಗುವುದು. ಮುಂದಿನ ದಿನಗಳಲ್ಲಿ ತುರ್ತು ಸಂದರ್ಭದಲ್ಲಿ ಮಾತ್ರ ಕೋವಿಡ್ ಸೋಂಕಿತರನ್ನು ಕಾರವಾರಕ್ಕೆ ಕರೆದುಕೊಂಡು ಬರಬೇಕು ಎಂದು ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಲಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ತಿಳಿಸಿದ್ದಾರೆ.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಾರವಾರದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆವರಣದಲ್ಲಿ ಸಿದ್ಧಪಡಿಸಲಾದ ಕೋವಿಡ್ ವಾರ್ಡ್‌ನ ಮಾದರಿಯಲ್ಲೇ ಈ ಮೂರು ತಾಲ್ಲೂಕು ಆಸ್ಪತ್ರೆಗಳಲ್ಲೂ ಸೌಕರ್ಯಗಳು ಇರಲಿವೆ. ಭಟ್ಕಳದಲ್ಲಿ ಈಗಾಗಲೇ ಸಿದ್ಧತೆ ಆರಂಭವಾಗಿದ್ದು, ಹಳಿಯಾಳಕ್ಕೆ ಉಪ ವಿಭಾಗಾಧಿಕಾರಿ ಮೇ 13ರಂದು ಭೇಟಿ ನೀಡಿ ಪರಿಶೀಲನೆ ಮಾಡಲಿದ್ದಾರೆ’ ಎಂದು ಮಾಹಿತಿ ನೀಡಿದರು.

‘ಮುಂದಿನ 15– 20 ದಿನಗಳಲ್ಲಿ ವಾರ್ಡ್‌ಗಳು ಸಿದ್ಧಗೊಳ್ಳಬೇಕು. ಜಿಲ್ಲೆಯ ಜನರ ಹಿತದೃಷ್ಟಿಯಿಂದ ಜಿಲ್ಲೆಯ ನಾಲ್ಕೂ ದಿಕ್ಕುಗಳಲ್ಲಿ ಕೋವಿಡ್ 19 ಚಿಕಿತ್ಸೆಯ ಆಸ್ಪತ್ರೆಗಳು ಇರುವಂತೆ ನೋಡಿಕೊಳ್ಳಲಾಗುತ್ತದೆ’ ಎಂದೂ ಹೇಳಿದರು.

ADVERTISEMENT

‘ರಾಜ್ಯದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ವೇಗ ನೀಡಬೇಕಿದೆ. ಹಾಗಾಗಿ ಲಾಕ್‌ಡೌನ್‌ ನಡುವೆ ಕೆಲವು ವಿನಾಯಿತಿ ನೀಡಲಾಗಿದೆ. ಜಿಲ್ಲೆಯಲ್ಲಿ ನಿಯಮಗಳ ಪಾಲನೆ ಇದೇ ರೀತಿ ಮುಂದುವರಿದರೆ ಲಾಕ್‌ಡೌನ್‌ ಅನ್ನು ಹಂತಹಂತವಾಗಿ ಸಡಿಲಿಕೆ ಮಾಡಲಾಗುವುದು. ಭಟ್ಕಳ ತಾಲ್ಲೂಕಿನಲ್ಲಿ ಉಂಟಾಗಿರುವ ಸ್ಥಿತಿ ಮತ್ಯಾವ ತಾಲ್ಲೂಕಿಗೂ ಬರಬಾರದು ಎಂಬುದೇ ಇದರ ಉದ್ದೇಶವಾಗಿದೆ’ ಎಂದು ಹೇಳಿದರು.

‘ಕೊರೊನಾಮತ್ತು ಅಭಿವೃದ್ಧಿ ಚಟುವಟಿಕೆಗಳು ಜೊತೆ ಜೊತೆಗೆ ಸಾಗಬೇಕಿದೆ. ಆದ್ದರಿಂದ ಮೀನುಗಾರಿಕೆಗೂ ಅನುಮತಿ ನೀಡಲಾಗಿದೆ. ಆದರೆ, ಈಗಿನ ಸ್ಥಿತಿಯಲ್ಲಿ ಮೀನುಗಾರಿಕೆ ಲಾಭದಾಯಕವಾಗುತ್ತಿಲ್ಲ ಎಂದು ಮೀನುಗಾರರು ತಿಳಿಸಿದ್ದಾಗಿ ಅಧಿಕಾರಿಗಳು ಹೇಳಿದ್ದಾರೆ. ಅದೇನೇ ಇದ್ದರೂ ಕೊರೊನಾ ಎಂಬ ಕಾರಣಕ್ಕೆ ಅಭಿವೃದ್ಧಿ ಕಾರ್ಯಗಳನ್ನು ಕೈಬಿಡಲು ಸಾಧ್ಯವಿಲ್ಲ. ಎರಡನ್ನೂ ನಿಭಾಯಿಸಬೇಕಾಗಿದೆ’ ಎಂದರು.

‘ಕಾರ್ಖಾನೆ ಆರಂಭವಾಗಬೇಕು’:‘ಕಾರ್ಮಿಕ ಸಚಿವನಾಗಿ ನಾನು ಕಾರ್ಮಿಕರು ಮತ್ತು ಉದ್ದಿಮೆಗಳ ಮಾಲೀಕರ ನಡುವೆ ಸೇತುವೆಯಂತೆ ಕೆಲಸ ಮಾಡುತ್ತಿದ್ದೇನೆ. ಸದ್ಯದ ಸ್ಥಿತಿಯಲ್ಲಿ ಕಾರ್ಖಾನೆಗಳು ಪುನರಾರಂಭ ಆಗಬೇಕಿದೆ. ಇಲ್ಲದಿದ್ದರೆ ಭವಿಷ್ಯದಲ್ಲಿ ಪರಿಸ್ಥಿತಿ ಏನಾಗಬಹುದು ಎಂದು ಊಹಿಸುವುದು ಕಷ್ಟ’ ಎಂದು ಶಿವರಾಮ ಹೆಬ್ಬಾರ ಹೇಳಿದರು.

‘ರಾಜ್ಯದಲ್ಲಿಉದ್ದಿಮೆಗಳ ಸ್ಥಾಪನೆಗೆ ಮುಖ್ಯಮಂತ್ರಿ ಸಾಕಷ್ಟು ಶ್ರಮಿಸುತ್ತಿದ್ದಾರೆ. ಈಗಿನ ಪರಿಸ್ಥಿತಿಯಲ್ಲಿ ಎಲ್ಲರೂ ಸ್ವಲ್ಪ ವ್ಯವಧಾನದಿಂದ ಮುಂದುವರಿಯಬೇಕಿದೆ. ಕಾರ್ಮಿಕರಿಗೆ ವೇತನ ಸಿಗಬೇಕು. ನೌಕರಿಯಿಂದ ತೆಗೆಯದಂತೆ ವೇತನ ಕಡಿತ ಮಾಡದಂತೆ ಉದ್ದಿಮೆದಾರರಿಗೆ ಸೂಚನೆ ನೀಡಲಾಗಿದೆ’ ಎಂದು ತಿಳಿಸಿದರು.

ಸೋಂಕಿತರ ಆರೋಗ್ಯ ಸುಧಾರಣೆ:‘ಕಾರವಾರದ ಕೋವಿಡ್ 19 ವಾರ್ಡ್‌ಗೆ ದಾಖಲಾಗಿರುವ ಭಟ್ಕಳದ ರೋಗಿಗಳ ಆರೋಗ್ಯ ಸುಧಾರಿಸುತ್ತಿದ್ದು, ಆತಂಕವಿಲ್ಲ.ವಾರ್ಡ್‌ನಲ್ಲಿ ಮಾಡಲಾಗಿರುವ ವ್ಯವಸ್ಥೆಗಳ ಬಗ್ಗೆ ಸೋಂಕಿತರೂತೃಪ್ತಿ ವ್ಯಕ್ತಪಡಿಸಿದ್ದಾರೆ. ಅವರಲ್ಲಿರೋಗ ನಿರೋಧಕ ಶಕ್ತಿ ವೃದ್ಧಿ ಆಗುವಂತೆ ನೋಡಿಕೊಳ್ಳಲಾಗುತ್ತಿದೆ. ಜಿಲ್ಲೆಯಲ್ಲಿ ಮತ್ತಷ್ಟು ಭಾರಿ ಸಂಖ್ಯೆಯಲ್ಲಿ ಕೋವಿಡ್ 19 ಪ್ರಕರಣಗಳು ಬರಲಾರವು ಎಂದು ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ’ ಎಂದು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಶಾಸಕಿ ರೂಪಾಲಿ ನಾಯ್ಕ, ಬಿ.ಜೆ.ಪಿ ಮುಖಂಡ ರಾಜೇಶ ನಾಯ್ಕ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.