
ಮುಂಡಗೋಡ ತಾಲ್ಲೂಕಿನ ಟಿಬೆಟಿಯನ್ ಕ್ಯಾಂಪ್‌ನ ಬೌದ್ಧ ಮಂದಿರದಲ್ಲಿ ಲೋಸಾರ್ ಪೂಜೆಯಲ್ಲಿ ಪಾಲ್ಗೊಂಡಿರುವ ಬಿಕ್ಕುಗಳು
(ಸಂಗ್ರಹ ಚಿತ್ರ)
ಮುಂಡಗೋಡ (ಉತ್ತರ ಕನ್ನಡ ಜಿಲ್ಲೆ): ಟಿಬೆಟಿಯನ್ನರ ಹೊಸ ವರ್ಷ ‘ಲೋಸಾರ್’ 2153 ಬುಧವಾರದಿಂದ (ಫೆ.18) ಆರಂಭ ಆಗಲಿದೆ. ‘ಫೈರ್ ಹಾರ್ಸ್’ ಈ ವರ್ಷದ ರಾಶಿ. ಪ್ರತಿಯೊಂದು ರಾಶಿಚಕ್ರವು ಮರ, ಬೆಂಕಿ, ಭೂಮಿ, ಲೋಹ ಮತ್ತು ನೀರು ಈ ಐದು ಅಂಶಗಳನ್ನು ಒಳಗೊಂಡಿರುತ್ತದೆ ಎಂದು ಟಿಬೆಟಿಯನ್ನರು ಹೇಳುತ್ತಾರೆ.
‘ಫೈರ್ ಹಾರ್ಸ್’ ಇದು ಚಲನೆ, ಧೈರ್ಯ ಮತ್ತು ರೂಪಾಂತರವನ್ನು ಸಂಕೇ
ತಿಸುತ್ತದೆ. ಲೋಸಾರ್ ಪ್ರಯುಕ್ತ ಈಗಾಗಲೇ ಟಿಬೆಟಿಯನ್ನರು ಮನೆ ಗಳನ್ನು ಶುಚಿಗೊಳಿಸಿ, ಸಿಹಿ ಖಾದ್ಯ ಹಾಗೂ ನೂಡಲ್ ಸೂಪ್ ತಯಾರಿಕೆ ಯಲ್ಲಿ ತೊಡಗಿದ್ದಾರೆ. ಮೊದಲ ಮೂರು ದಿನಗಳು ಹಬ್ಬದ ಪ್ರಮುಖ ದಿನಗಳು. ಹುಣ್ಣಿಮೆಯ ದಿನ ‘ಭೂತ ದಹನ’ ಮಾಡುವ ಮೂಲಕ ಬಿಕ್ಕು ಗಳು ಲೋಸಾರ್ ಆಚರಣೆಗೆ ತೆರೆ ಎಳೆಯು ತ್ತಾರೆ.
ಲೋಸಾರ್ ಮೊದಲ ದಿನದಂದು ಟಿಬೆಟಿಯನ್ನರು ಬೌದ್ಧ ಮಂದಿರಗಳಿಗೆ ತೆರಳಿ, ಬೆಣ್ಣೆ ದೀಪ ಬೆಳಗಿಸಿ ಸಿಹಿಖಾದ್ಯ, ಹಣ್ಣುಹಂಪಲ ದೇವರಿಗೆ ಸಮರ್ಪಿಸುತ್ತಾರೆ. ಬಿಳಿ ರುಮಾಲು (ಖತಾ) ದೇವರಿಗೆ ಅರ್ಪಿಸಿ, ಪರಸ್ಪರ ‘ತಾಶಿ ದೆಲೆಕ್’ ಎಂದು ಹೇಳಿ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಾರೆ.
ರಾಜ್ಯದ ಮುಂಡಗೋಡ, ಬೈಲಕುಪ್ಪೆ, ಹುಣಸೂರು ಸೇರಿ ದೇಶದ ಲಡಾಖ್, ಸಿಕ್ಕಿಂ, ಧರ್ಮಶಾಲಾ ಇತರೆಡೆ ನೆಲೆಸಿರುವ ಟಿಬೆಟಿಯನ್ನರು ‘ಲೋಸಾರ್’ ಅನ್ನು ಸಂಭ್ರಮದಿಂದ ಆಚರಿಸುತ್ತಾರೆ. ಧಾರ್ಮಿಕ ಮತ್ತು ಸಾಂಸ್ಕೃತಿಕವಾಗಿ ಹೆಚ್ಚು ಪ್ರಾಮುಖ್ಯತೆ ಪಡೆದಿರುವ ಲೋಸಾರ್ ಸಂಭ್ರಮವು ತಾಲ್ಲೂಕಿನ ಟಿಬೆಟಿಯನ್ನ ಕ್ಯಾಂಪ್‌ಗಳಲ್ಲಿ ಕಳೆಗಟ್ಟಿದೆ.
‘ಮಂಗಳವಾರ ರಾತ್ರಿಯಿಂದಲೇ ಬಿಕ್ಕುಗಳಿಂದ ಲೋಸಾರ್ ಪೂಜೆ ನಡೆಯುತ್ತದೆ. ಮಾರನೇ ದಿನ ಬೆಳಿಗ್ಗೆ ಇತರೆ ಟಿಬೆಟಿಯನ್ನರು ಬೌದ್ಧಮಂದಿರದಲ್ಲಿ ಪೂಜೆ ಸಲ್ಲಿಸುತ್ತಾರೆ. ಧಾರ್ಮಿಕ ಮುಖಂಡ ದಲೈಲಾಮಾ ಅವರ ದೀರ್ಘಾಯುಷ್ಯಕ್ಕಾಗಿ ವಿಶೇಷ ಪೂಜೆ ಸಹ ಈ ಸಂದರ್ಭದಲ್ಲಿ ಮಾಡಲಾಗುತ್ತದೆ. ಉದ್ಯೋಗ ಮತ್ತು ಶಿಕ್ಷಣಕ್ಕೆ ಬೇರೆಡೆ ತೆರಳಿರುವ ಸ್ಥಳೀಯ ಕ್ಯಾಂಪ್‌ನ ಟಿಬೆಟಿಯನ್ನರು ಲೋಸಾರ್ ಆಚರಿಸಲು, ಮನೆಗಳಿಗೆ ಮರಳಿದ್ದಾರೆ. ಸಾಂಪ್ರದಾಯಿಕ ವೇಷಭೂಷಣ ಧರಿಸಿ, ಹಬ್ಬದ ವಿಶೇಷ ಖಾದ್ಯದೊಂದಿಗೆ ಬಂಧು -ಬಳಗದೊಂದಿಗೆ ಹಬ್ಬವನ್ನು ಆಚರಿಸಲಾಗುತ್ತದೆ' ಎಂದು ಬೌದ್ಧ ಮುಖಂಡ ಜಂಪಾ ಲೋಬ್ಬಂಗ್ ‘ಪ್ರಜಾವಾಣಿ’ಗೆ ತಿಳಿಸಿದರು.
ಬುದ್ಧನನ್ನು ವಿಶೇಷವಾಗಿ ಪೂಜಿಸಲಾಗುತ್ತದೆ. ಹೊಸ ವರ್ಷದ ಆರಂಭದ ದಿನದಂದು ಕೊಡದಲ್ಲಿ ನೀರು ತುಂಬಿ ಎಲ್ಲರೂ ಹಬ್ಬದ ಆಚರಣೆಯಲ್ಲಿ ಪಾಲ್ಗೊಳ್ಳುತ್ತಾರೆ. ಎಲ್ಲರ ಶಾಂತಿ ನೆಮ್ಮದಿ ಜೀವನಕ್ಕೆ ಪ್ರಾರ್ಥಿಸುತ್ತೇವೆ.ಜಂಪಾ ಲೋಬ್ಬಂಗ್ ಬೌದ್ಧ ಮುಖಂಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.