ADVERTISEMENT

ಹಸಿರು ಮನೆಯಲ್ಲಿ ಕೆಂಪು ಟೊಮೆಟೊ!

ತೋಟಗಾರಿಕಾ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಪ್ರಾಯೋಗಿಕ ಕೃಷಿ

ಸಂಧ್ಯಾ ಹೆಗಡೆ
Published 9 ಸೆಪ್ಟೆಂಬರ್ 2019, 19:30 IST
Last Updated 9 ಸೆಪ್ಟೆಂಬರ್ 2019, 19:30 IST
ಕಾಯಿ ಕಚ್ಚಿರುವ ಟೊಮೆಟೊ ಗಿಡಗಳು
ಕಾಯಿ ಕಚ್ಚಿರುವ ಟೊಮೆಟೊ ಗಿಡಗಳು   

ಶಿರಸಿ: ಇಲ್ಲಿನ ತೋಟಗಾರಿಕಾ ಕಾಲೇಜಿನ ವಿದ್ಯಾರ್ಥಿಗಳು ಹಸಿರುಮನೆಯಲ್ಲಿ ಬೆಳೆಸಿರುವ ಟೊಮೆಟೊ ಗಿಡಗಳು ಸೊಂಪಾಗಿ ಬೆಳೆದಿವೆ. ಕೈಗೆ ಮಣ್ಣು ಮೆತ್ತಿಕೊಂಡು, ಶ್ರಮವಹಿಸಿ ಮಾಡಿರುವ ಕೃಷಿ ಫಲ ಕೊಡುತ್ತಿರುವುದನ್ನು ಕಂಡ ಈ ವಿದ್ಯಾರ್ಥಿಗಳು ಈಗ ಖುಷಿಯಲ್ಲಿದ್ದಾರೆ.

ತೋಟಗಾರಿಕಾ ಪದವಿಯ ಅಂತಿಮ ವರ್ಷದ ವಿದ್ಯಾರ್ಥಿಗಳು ಆರು ತಿಂಗಳ ಕೌಶಲಾಭಿವೃದ್ಧಿ ಕಾರ್ಯಕ್ರಮದ ಅಡಿಯಲ್ಲಿ ಸ್ವ ಉದ್ಯೋಗಕ್ಕೆ ಸಹಾಯಕವಾಗುವ ಹಲವಾರು ಪ್ರಾಯೋಗಿಕ ಚಟುವಟಿಕೆಗಳನ್ನು ನಡೆಸುತ್ತಾರೆ. ವಿದ್ಯಾರ್ಥಿಗಳ ಒಂದು ತಂಡ ಈ ಬಾರಿ ವಸಂತ ತಳಿಯ ಟೊಮೆಟೊ ಬೆಳೆಸಿದೆ.

ಪಾಲಿಹೌಸ್ ಇರುವ ಐದು ಗುಂಟೆ ಜಾಗದಲ್ಲಿ ಟೊಮೆಟೊ ಗಿಡಗಳು ಕಾಯಿ ಕಚ್ಚುತ್ತಿವೆ. ‘ಪಾಲಿಹೌಸ್‌ ನಿರ್ಮಿಸಿಕೊಂಡು, ಅದರಲ್ಲಿ ಒಂದು ಮೀಟರ್ ಅಗಲ, 20–30 ಸೆಂ.ಮೀ ಅಗಲದಲ್ಲಿ ಮಡಿ ಮಾಡಬೇಕು. ಅದರಲ್ಲಿ 60X60 ಸೆಂ.ಮೀ ಅಂತರದಲ್ಲಿ 30 ದಿನ ಆಗಿರುವ (ಈ ಮೊದಲೇ ಸಿದ್ಧಪಡಿಸಿಕೊಂಡ) ಸಸಿಗಳನ್ನು ನಾಟಿ ಮಾಡಬೇಕು. 45–50 ದಿನಗಳಿಗೆ ಟೊಮೆಟೊ ಹಣ್ಣು ಕೊಯ್ಲಿಗೆ ಸಿಗುತ್ತದೆ’ ಎನ್ನುತ್ತಾರೆ ವಿದ್ಯಾರ್ಥಿ ರೋಹಿತ್.

ADVERTISEMENT

‘ಎಂಟರಿಂದ ಒಂಬತ್ತು ತಿಂಗಳವರೆಗೆ ನಿರಂತರವಾಗಿ ಕೊಯ್ಲು ಮಾಡಬಹುದು. ಒಂದು ಗಿಡದಿಂದ ಸರಾಸರಿ 8–10 ಕೆ.ಜಿ ಹಣ್ಣು ಸಿಗುತ್ತದೆ. ಐದು ಗುಂಟೆಯಲ್ಲಿ ಸುಮಾರು 10–12 ಟನ್ ಬೆಳೆ ತೆಗೆಯಬಹುದು. ಹನಿ ನೀರಾವರಿ ಅಳವಡಿಸಿರುವುದರಿಂದ ಅದರ ಮೂಲಕವೇ ಪೋಷಕಾಂಶಗಳನ್ನು ಸಹ ಕೊಡಲಾಗುತ್ತದೆ. ರೋಗ ನಿಯಂತ್ರಣಕ್ಕೆ ಕ್ರಮ, ಸರಿಯಾಗಿ ಪ್ರೂನಿಂಗ್ ಮಾಡಿ ಎರಡು ಟಿಸಿಲುಗಳನ್ನು ಮಾತ್ರ ಇಡುವುದು ಮಹತ್ವದ್ದು’ ಎನ್ನುತ್ತಾರೆ ಮಕ್ಕಳಿಗೆ ಮಾರ್ಗದರ್ಶನ ನೀಡುತ್ತಿರುವ ತರಕಾರಿ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಶಿವಾನಂದ ಹೊಂಗಲ್.

‘ಟೊಮೆಟೊ ಮಾರಾಟ ಮಾಡಿ ಬರುವ ಲಾಭದಲ್ಲಿ ಶೇ 75;25 ಅನುಪಾತದಲ್ಲಿ ಮಕ್ಕಳು ಮತ್ತು ಕಾಲೇಜಿನವರಿಗೆ ಲಾಭ ಸಿಗುತ್ತದೆ. ವಿದ್ಯಾರ್ಥಿಗಳೇ ಸಂಪೂರ್ಣವಾಗಿ ತೊಡಗಿಕೊಂಡು ಬೆಳೆ ತೆಗೆಯುವುದರಿಂದ ಅವರಿಗೆ ಕಲಿಕೆಯ ಜೊತೆಗೆ ಕೈಗೆ ಹಣವೂ ಬರುತ್ತದೆ’ ಎಂದು ಅವರು ಪ್ರತಿಕ್ರಿಯಿಸಿದರು.

‘ಕ್ಲಾಸಿನಲ್ಲಿ ಪಾಠ ಕೇಳುವಾಗ ಸುಲಭವಾಗಿ ಕೃಷಿ ಮಾಡಬಹುದು ಎಂದುಕೊಂಡಿದ್ದೆವು. ಮಣ್ಣಿನಲ್ಲಿ ಕೆಲಸ ಮಾಡುವಾಗಲೇ ಗೊತ್ತಾಗಿದ್ದು ಕೃಷಿ ತಿಳಿದಷ್ಟು ಸುಲಭವಲ್ಲ, ಸಮಯಕ್ಕೆ ಸರಿಯಾಗಿ ಕೆಲಸ ಮಾಡಿದರೆ ಮಾತ್ರ ಬೆಳೆ ಸಿಗಬಹುದೆಂಬ ಸತ್ಯ. ಪುಸ್ತಕದಲ್ಲಿರುವ ಪಾಠಕ್ಕೂ ಪ್ರಾಯೋಗಿಕ ಜ್ಞಾನಕ್ಕೂ ಇರುವ ವ್ಯತ್ಯಾಸ ಅರಿವಿಗೆ ಬಂತು’ ಎನ್ನುತ್ತಾರೆ ವಿದ್ಯಾರ್ಥಿ ಸಂತೋಷ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.