ADVERTISEMENT

ಕಾರವಾರ | ಪಾಲನೆಯಾಗದ ನಿಯಮ: ಬಿಗಡಾಯಿಸುತ್ತಿದೆ ಸಂಚಾರ ದಟ್ಟಣೆ ಸಮಸ್ಯೆ

ಗಣಪತಿ ಹೆಗಡೆ
Published 9 ಜೂನ್ 2025, 6:20 IST
Last Updated 9 ಜೂನ್ 2025, 6:20 IST
ಕಾರವಾರ ನಗರದ ಹೈಚರ್ಚ್ ರಸ್ತೆಯಲ್ಲಿ ದ್ವಿಚಕ್ರ ವಾಹನಗಳನ್ನು ನಿಲುಗಡೆ ಮಾಡಿದ್ದರಿಂದ ಸಂಚಾರಕ್ಕೆ ಸಮಸ್ಯೆ ಉಂಟಾಗಿರುವುದು.
ಕಾರವಾರ ನಗರದ ಹೈಚರ್ಚ್ ರಸ್ತೆಯಲ್ಲಿ ದ್ವಿಚಕ್ರ ವಾಹನಗಳನ್ನು ನಿಲುಗಡೆ ಮಾಡಿದ್ದರಿಂದ ಸಂಚಾರಕ್ಕೆ ಸಮಸ್ಯೆ ಉಂಟಾಗಿರುವುದು.   

ಕಾರವಾರ: ಜಿಲ್ಲಾಕೇಂದ್ರವೂ ಸೇರಿದಂತೆ ಜಿಲ್ಲೆಯ ವಿವಿಧ ನಗರ, ಪಟ್ಟಣಗಳಲ್ಲಿ ಸಂಚಾರ ದಟ್ಟಣೆ ಗಂಭೀರ ಸಮಸ್ಯೆಯಾಗಿ ಕಾಡುತ್ತಿದೆ. ಸಂಚಾರ ನಿಯಮ ಗಾಳಿಗೆ ತೂರಿದ ಪರಿಣಾಮ ಸಮಸ್ಯೆ ಬಿಗಡಾಯಿಸಿದೆ.

ದ್ವಿಚಕ್ರ, ನಾಲ್ಕು ಚಕ್ರ, ಭಾರಿ ವಾಹನಗಳ ನಿಲುಗಡೆಗೆ ಪ್ರತ್ಯೇಕ ಜಾಗ ಗುರುತಿಸಿದ್ದರೂ ನಿಯಮ ಪಾಲನೆ ಆಗುತ್ತಿಲ್ಲ. ಏಕಮುಖ ಸಂಚಾರ ಇರುವ ಮಾರ್ಗಗಳಲ್ಲಿ ಎರಡೂ ಕಡೆಯಿಂದ ವಾಹನಗಳು ಸಂಚರಿಸುತ್ತಿವೆ. ಇಂತ ಸಮಸ್ಯೆ ಕಾರವಾರ, ಶಿರಸಿ ಸೇರಿದಂತೆ ಹಲವು ನಗರಗಳಲ್ಲಿ ಗಂಭೀರವಾಗಿದೆ.

ಕಾರವಾರದ ಗ್ರೀನ್ ಸ್ಟ್ರೀಟ್, ಕೋಡಿಬಾಗ ರಸ್ತೆ, ಕೈಗಾ ರಸ್ತೆಗಳಲ್ಲಿ ರಸ್ತೆಯ ಮೇಲೆ ವಾಹನ ನಿಲುಗಡೆ ಮಾಡಲಾಗುತ್ತಿದ್ದು, ವಾಹನಗಳ ಸಂಚಾರಕ್ಕೆ ಅಡ್ಡಿಯಾಗುತ್ತಿರುವ ದೂರು ಹೆಚ್ಚುತ್ತಿದೆ.

ADVERTISEMENT

‘ಬಹುಮಹಡಿ ಕಟ್ಟಡಗಳ ಸಂಖ್ಯೆ ಏರಿಕೆಯಾಗುತ್ತಲೇ ಇವೆ. ಕಟ್ಟಡ ನಿರ್ಮಿಸುವಾಗ ನೆಲಮಹಡಿಯಲ್ಲಿ ವಾಹನ ನಿಲುಗಡೆಗೆ ಜಾಗ ತೋರಿಸಲಾಗುತ್ತದೆ. ಕಟ್ಟಡ ನಿರ್ಮಾಣ ಮುಗಿಯುತ್ತಿದ್ದಂತೆ ಆ ಜಾಗ ವಾಣಿಜ್ಯ ಮಳಿಗೆಯಾಗಿ ಬದಲಾಗಿರುತ್ತಿದೆ. ವಾಹನಗಳನ್ನು ಕಟ್ಟಡದ ಎದುರಿನ ರಸ್ತೆಯಲ್ಲಿ ನಿಲ್ಲಿಸಬೇಕಾದ ಕಾರಣದಿಂದ ಸಂಚಾರ ದಟ್ಟಣೆ ತೀವೃವಾಗುತ್ತದೆ’ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ರಾಜೇಶ ನಾಯ್ಕ ಕಾರವಾರ.

‘ಪಾರ್ಕಿಂಗ್ ಜಾಗ ಮೀಸಲಿಡದ ಕಟ್ಟಡಗಳಿಗೆ ನೋಟಿಸ್ ನೀಡಲಾಗುತ್ತಿದೆ. ನಿಯಮ ಬಾಹೀರವಾಗಿ ಕಟ್ಟಡ ನಿರ್ಮಾಣವಾದರೆ ಪರವಾನಗಿ ನೀಡಲಾಗುತ್ತಿಲ್ಲ’ ಎಂದು ನಗರಸಭೆ ಎಇಇ ಸದಾನಂದ ಸಾಳೆಹಿತ್ತಲ ಪ್ರತಿಕ್ರಿಯಿಸುತ್ತಾರೆ.

ಶಿರಸಿ ನಗರದ ವಿವಿಧೆಡೆ ಹೊಸ ಕಟ್ಟಡಗಳು ನಿರ್ಮಾಣವಾಗುತ್ತಿದ್ದು, ವಾಹನ ನಿಲುಗಡೆಗೆ ಸಮರ್ಪಕ ಜಾಗ ನೀಡದ ಕಾರಣ ನಗರದಲ್ಲಿ ವಾಹನ ನಿಲುಗಡೆ ಸಮಸ್ಯೆ ತೀವ್ರವಾಗಿದೆ. ಸಿ.ಪಿ ಬಜಾರ, ದೇವಿಕೆರೆ, ಹೊಸಪೇಟೆ ರಸ್ತೆ ಸೇರಿ ಹಲವೆಡೆ ವಾಣಿಜ್ಯ ಕಟ್ಟಡಗಳು ತಲೆ ಎತ್ತಿವೆ. ಈ ಕಟ್ಟಡಗಳಿಗೆ ನೆಲ ಹಂತದಲ್ಲಿ ವಾಹನ ನಿಲುಗಡೆ ಜಾಗವಿದ್ದರೂ ಅಲ್ಲಿ ಬೇರೆ ಬಾಡಿಗೆ ನೀಡಲಾಗಿದೆ. ಹೀಗಾಗಿ ವ್ಯಾಪಾರ, ವಹಿವಾಟಿಗೆ ಬರುವ ಸಾರ್ವಜನಿಕರು ರಸ್ತೆಯ ಮೇಲೆ ವಾಹನ ನಿಲ್ಲಿಸುವಂತಾಗಿದೆ. ಗೂಡಂಗಡಿಕಾರರು ಕೆಲವೆಡೆ ವಾಹನ ನಿಲುಗಡೆ ಜಾಗ ಅತಿಕ್ರಮಿಸಿದ್ದಾರೆ ಎಂಬುದು ಸಾರ್ವಜನಿಕರ ದೂರು.

‘ಈಗಾಗಲೇ ಕೆಲ ಕಟ್ಟಡ ಮಾಲಿಕರಿಗೆ ಮೂರು ನೋಟಿಸ್ ನೀಡಲಾಗಿದೆ’ ಎನ್ನುತ್ತಾರೆ ಪ್ರಭಾರ ಪೌರಾಯುಕ್ತ ಶಿವರಾಜ್. 

ಭಟ್ಕಳ ಪಟ್ಟಣದ ಮುಖ್ಯ ರಸ್ತೆ, ಸುಲ್ತಾನ ಸ್ಟ್ರೀಟ್‌ ಹಾಗೂ ರಥಬೀದಿಯಲ್ಲಿ ವಾಹನ ನಿಲುಗಡೆ ಪೊಲೀಸರು ನಿರ್ದಿಷ್ಟ ಸ್ಥಳ ಗುರುತಿಸಿದ್ದರೂ ವಾಹನ ಸವಾರರು ಎಲ್ಲೆಂದರಲ್ಲಿ ವಾಹನ ನಿಲುಗಡೆ ಮಾಡುತ್ತಿದ್ದಾರೆ. ಮಾರಿಕಟ್ಟೆಯಿಂದ ಹೂವಿನ ಮಾರುಕಟ್ಟೆ ತನಕ ಮುಖ್ಯ ರಸ್ತೆಯಲ್ಲಿ ಏಕಮುಖ ಸಂಚಾರ ಇದೆ. ಜನತಾ ಬ್ಯಾಂಕ್‌ನಿಂದ ಮಾರಿಕಟ್ಟೆಗೆ ಬರುವ ರಸ್ತೆಯ ಎರಡು ಬದಿಗಳಲ್ಲಿ ವಾಹನ ನಿಲುಗಡೆಯಿಂದ ಸದಾ ವಾಹನ ದಟ್ಟಣೆ ಇರುತ್ತಿದೆ. ಸುಲ್ತಾನ ಸ್ಟ್ರೀಟ್‌ನ ಪಾದಚಾರಿ ಮಾರ್ಗ ಗೂಡಂಗಡಿಕಾರರು ಒತ್ತುವರಿ ಮಾಡಿದ್ದಾರೆ ಎಂಬುದು ಜನರ ದೂರು.

ಕುಮಟಾ ಪಟ್ಟಣದಲ್ಲಿ ಸಂಚಾರಿ ದಟ್ಟಣೆ ತಡೆಯಲು ಪುರಸಭೆ ವತಿಯಿಂದ ರಸ್ತೆಯ ಎಡ-ಬಲ ಬದಿಯಲ್ಲಿ ವಾಹನ ನಿಲುಗಡೆಗೆ ಯೋಜನೆ ರೂಪಿಸಿದ್ದರೂ ಅದು ಅನುಷ್ಠಾನಕ್ಕೆ ಬಂದಿಲ್ಲ. ‘ಯೋಜನೆ ಜಾರಿಗೆ ಜಿಲ್ಲಾಧಿಕಾರಿ ಅವರ ಅನುಮತಿಗೆ ಕಳಿಸಿದ್ದು, ಶೀಘ್ರ ಅನುಷ್ಠಾನಗೊಳಿಸುತ್ತೇವೆ’ ಎನ್ನುತ್ತಾರೆ ಪುರಸಭೆ ಮುಖ್ಯಾಧಿಕಾರಿ ವಿದ್ಯಾಧರ ಕಲಾದಗಿ.

ಮುಂಡಗೋಡ ಪಟ್ಟಣದಲ್ಲಿ ದಿನದಿಂದ ದಿನಕ್ಕೆ ಸಂಚಾರ ದಟ್ಟಣೆ ಸಮಸ್ಯೆ ಹೆಚ್ಚುತ್ತಿದ್ದು, ವಾರದ ಸಂತೆಯ ದಿನದಂದು ಮಾತ್ರ ನಿತ್ಯದ ಸಮಸ್ಯೆಗಿಂತ ಎರಡು ಪಟ್ಟು ತೀವೃವಾಗಿದೆ. ಈಚೆಗೆ ಇಲ್ಲಿನ ಠಾಣೆಗೆ ಭೇಟಿ ನೀಡಿದ್ದ ಶಿರಸಿ ಡಿಎಸ್‍ಪಿ ಗೀತಾ ಪಾಟೀಲ, ಪಟ್ಟಣದ ಟ್ರಾಫಿಕ್ ಸಮಸ್ಯೆ ನಿಯಂತ್ರಣಕ್ಕೆ ಮೊದಲ ಆದ್ಯತೆ ನೀಡಲಾಗುವುದು ಎಂದು ಹೇಳಿದ್ದರು.

ಯಲ್ಲಾಪುರ ಪಟ್ಟಣದಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿಯ ಉದ್ದಕ್ಕೂ ಗ್ಯಾರೇಜ್, ಹೋಟೆಲ್, ಅಂಗಡಿ ಮುಂಗಟ್ಟುಗಳಿದ್ದು ಅದರ ಎದುರಿಗೆ ವಾಹನ ನಿಲ್ಲಿಸಲಾಗುತ್ತಿದೆ. ಕೆಲ ಗ್ಯಾರೇಜ್ ನ ಎದುರಿನ ರಸ್ತೆಯಲ್ಲಿ ದೊಡ್ಡದೊಡ್ಡ ವಾಹನ ನಿಲ್ಲಿಸಿ ದುರಸ್ತಿ ಮಾಡಲಾಗುತ್ತಿದೆ.

‘ಪಟ್ಟಣದಲ್ಲಿ 36 ಸೆನ್ಸಾರ್ ಯುಕ್ತ ಸಿಸಿ ಕ್ಯಾಮರಾ ಅಳವಡಿಸಲಾಗಿದ್ದು ನಿಯಮ ಉಲ್ಲಂಘಿಸುವ ವಾಹನದ ಮೇಲೆ ಕ್ರಮ ಕೈಗೊಳ್ಳಲಾಗುವುದು’ ಎಂದು ಪೊಲೀಸ್ ಇನ್‌ಸ್ಪೆಕ್ಟರ್ ರಮೇಶ್ ಹಾನಾಪುರ ಹೇಳುತ್ತಾರೆ.

ಮುಂಡಗೋಡದ ಬಸ್ ನಿಲ್ದಾಣ ರಸ್ತೆಯಲ್ಲಿ ವಾಹನಗಳು ಟ್ರಾಫಿಕ್ ಸಮಸ್ಯೆಗೆ ಸಿಲುಕಿರುವುದು.

ಹೊನ್ನಾವರ ಪಟ್ಟಣದ ಬಾಜಾರ್, ಬಂದರು ರಸ್ತೆಗಳಲ್ಲೂ ಮಣ್ಣು ತುಂಬಿದ ಟಿಪ್ಪರ್‌ಗಳೂ ಸೇರಿದಂತೆ ಭಾರಿ ವಾಹನಗಳು ಓಡಾಡಿದರೂ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸಾರ್ವಜನಿಕರು ದೂರುತ್ತಿದ್ದಾರೆ.

ಸಿದ್ದಾಪುರ ಪಟ್ಟಣದಲ್ಲಿ ವಾಹನ ನಿಲುಗಡೆಗೆ ನಿರ್ದಿಷ್ಟ ಜಾಗ ಗುರುತಿಸಿದ್ದರೂ, ರಾಜಮಾರ್ಗದಲ್ಲಿ ಏಕಮುಖ ಸಂಚಾರ ಇದೆಯಾದರೂ ನಿಯಮ ಪಾಲನೆ ಆಗುತ್ತಿಲ್ಲ ಎಂಬುದು ಜನರ ದೂರು. ಸಂತೆ ದಿನವಾದ ಬುಧವಾರ ವಾಹನ ಸವಾರರು, ಪಾದಚಾರಿಗಳ ಅವಸ್ಥೆ ಹೇಳತೀರದಾಗಿದೆ.

ದಾಂಡೇಲಿ ನಗರದ ಲಿಂಕ್ ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ವಾಹನ ನಿಲುಗಡೆ ಮಾಡಿರುವುದು.

‘ಏಕ ಮುಖ ಸಂಚಾರದ ಸೂಚನಾ ಫಲಕ ಚಿಕ್ಕದಾಗಿದ್ದು ಸರಿಯಾದ ಫಲಕಗಳನ್ನು ಅಳವಡಿಸುವಂತೆ ಪಟ್ಟಣ ಪಂಚಾಯಿತಿಗೆ ಪತ್ರ ಬರೆದಿದ್ದೇವೆ’ ಎಂದು ಸಿಪಿಐ ಜೆ.ಬಿ.ಸೀತಾರಾಮ ತಿಳಿಸಿದರು.

ಪೂರಕ ಮಾಹಿತಿ: ರಾಜೇಂದ್ರ ಹೆಗಡೆ, ಶಾಂತೇಶ ಬೆನಕನಕೊಪ್ಪ, ರವಿ ಸೂರಿ, ಎಂ.ಜಿ.ನಾಯ್ಕ, ಎಂ.ಜಿ.ಹೆಗಡೆ, ಮೋಹನ ನಾಯ್ಕ, ಪ್ರವೀಣಕುಮಾರ ಸುಲಾಖೆ, ಸುಜಯ್ ಭಟ್, ವಿಶ್ವೇಶ್ವರ ಗಾಂವ್ಕರ.

ಗೋಕರ್ಣದ ಮುಖ್ಯ ದೇವಸ್ಥಾನದ ಎದುರಿನ ಇಕ್ಕಟ್ಟಾದ ರಸ್ತೆಯಲ್ಲಿ ವಾಹನ ದಟ್ಟಣೆ ಉಂಟಾಗಿರುವುದು.
ಶಾಲೆ ಬಿಡುವ ಸಮಯದಲ್ಲಿ ಪ್ರಮುಖ ಹೆದ್ದಾರಿಯಲ್ಲೇ ಸಂಚಾರ ದಟ್ಟಣೆ ಸಮಸ್ಯೆ ಉಂಟಾಗಿ ಮಕ್ಕಳಿಗೆ ಪಾಲಕರಿಗೆ ತೊಂದರೆಯಾಗುತ್ತಿದೆ
ಗೋಪಾಲಕೃಷ್ಣ ಭಟ್ಟ ಯಲ್ಲಾಪುರ ಪಾಲಕ
ಪಾದಚಾರಿ ಮಾರ್ಗ ವ್ಯಾಪಾರಿಗಳಿಂದ ಒತ್ತುವರಿ ಆಗಿರುವುದರಿಂದ ಪಾದಚಾರಿಗಳು ರಸ್ತೆ ಮೇಲೆಯೇ ನಡೆಯಬೇಕು. ಸಂಚಾರ ನಿಯಮ ಪಾಲನೆ ಆಗದಿರುವುದು ಸಂಚಾರ ದಟ್ಟಣೆ ಸಮಸ್ಯೆ ಹೆಚ್ಚಲು ಕಾರಣ
ಪ್ರಕಾಶ್ ಮುಂಡಗೋಡ ನಿವಾಸಿ
ಪ್ರವಾಸಿಗರ ಆಗಮನದ ಕಾರಣ ವಾರದ ಕೊನೆಯಲ್ಲಿ ಹೆದ್ದಾರಿಯಲ್ಲಿ ಉಂಟಾಗುವ ಸಂಚಾರ ದಟ್ಟಣೆ ಪರಿಸ್ಥಿತಿಯನ್ನು ಇನ್ನಷ್ಟು ಬಿಗಡಾಯಿಸಿದೆ
ಪ್ರಸನ್ನ ಶೇಟ್ ಹೊನ್ನಾವರ ನಿವಾಸಿ
ಜಾರಿಗೆ ಬಾರದ ಆದೇಶ
ಗೋಕರ್ಣಕ್ಕೆ ಬರುವ ಪ್ರವಾಸಿಗರ ಸಂಖ್ಯೆ ಏರಿಕೆಯಾಗುತ್ತಿದ್ದು ವಾಹನ ದಟ್ಟಣೆಯಿಂದ ಇಲ್ಲಿಯ ಜನತೆ ಹೈರಾಣಾಗಿದ್ದಾರೆ. ಸಾಲು ಸಾಲು ರಜಾ ದಿನಗಳಲ್ಲಂತೂ ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿಕೊಡುವುದು ಸವಾಲಿನ ಕೆಲಸವಾಗಿದೆ. 2013ರ ಜನವರಿಯಲ್ಲಿ ಆಗಿನ ಜಿಲ್ಲಾಧಿಕಾರಿ ಗೋಕರ್ಣದ ಮುಖ್ಯ ರಸ್ತೆಯಲ್ಲಿ ಏಕಮುಖ ಸಂಚಾರವಾಗಿ ವಾಹನಗಳು ಚಲಿಸುವಂತೆ ಆದೇಶ ಜಾರಿಗೊಳಿಸಿದ್ದರು. ಆದರೆ ಆದೇಶ ಇನ್ನೂ ಜಾರಿಗೆ ಬಂದಿಲ್ಲ ಎಂಬುದಾಗಿ ಸ್ಥಳೀಯರು ಹೇಳುತ್ತಾರೆ. ‘ಕಂಡ ಕಂಡಲ್ಲಿ ವಾಹನ ನಿಲ್ಲಿಸುವುದೂ ಸುಗಮ ಸಂಚಾರಕ್ಕೆ ತೊಡಕಾಗುತ್ತಿದೆ. ಸ್ಥಳೀಯ ಆಡಳಿತ ಸೂಕ್ತ ಸ್ಥಳದಲ್ಲಿ ಫಲಕಗಳನ್ನೂ ಅಳವಡಿಸಬೇಕಾಗಿದೆ’ ಎಂದು ಸಾಮಾಜಿಕ ಕಾರ್ಯಕರ್ತ ಶ್ರೀರಾಮ ಸುರೆ ಹೇಳುತ್ತಾರೆ.
ನಿಲುಗಡೆ ಜಾಗ ಅಂಗಡಿಕಾರರಿಂದ ಒತ್ತುವರಿ
ದಾಂಡೇಲಿ ನಗರದ ಪ್ರಮುಖ ರಸ್ತೆಗಳಾದ ಜೆ.ಎನ್ ರಸ್ತೆ ಚನ್ನಮ್ಮ ವೃತ್ತ ಲಿಂಕ್ ರಸ್ತೆಗಳಲ್ಲಿ ವಾರಾಂತ್ಯದಲ್ಲಿ ಪ್ರವಾಸಿಗರ ವಾಹನ ದಟ್ಟಣೆಯಿಂದಾಗಿ ನಿಲುಗಡೆ ಸಮಸ್ಯೆ ಉಂಟಾಗುತ್ತದೆ. ಭಾನುವಾರ ಸಂತೆಯ ದಿನ ಸೇರಿದಂತೆ ವಾಹನ ನಿಲುಗಡೆಗೆ ಲಿಂಕ್ ರಸ್ತೆಯಲ್ಲಿ ಮಾತ್ರ ಜಾಗ ಗುರುತಿಸಲಾಗಿದೆ. ಜಾಗವು ಚಿಕ್ಕದಾಗಿರುವ ಕಾರಣ ಸ್ಥಳೀಯ ವಾಹನಗಳಿಗೆ ಸಾಲುತ್ತಿಲ್ಲ. ಮಾರುಕಟ್ಟೆಯಲ್ಲಿನ ಪಾರ್ಕಿಂಗ್ ಜಾಗದಲ್ಲಿ ಹಣ್ಣುಗಳ ಅಂಗಡಿ ಹಾಕಲಾಗಿದ್ದು ಇದರಿಂದಾಗಿ ಸಮಸ್ಯೆ ಬಿಗಾಡಿಯಿಸಿದೆ ಎನ್ನುವುದು ಸಾರ್ವಜನಿಕರ ಆರೋಪ. ‘ಬಸ್ ನಿಲ್ದಾಣದಲ್ಲಿ ಜಾಗವಿದ್ದು ಪಾರ್ಕಿಂಗ್ ವ್ಯವಸ್ಥೆ ನಿರ್ಮಾಣವಾಗಬೇಕು ಎಂದು ಹುಬ್ಬಳ್ಳಿ ವಿಭಾಗದ ಸಾರಿಗೆ ನಿರ್ದೇಶಕರಿಗೆ ಹಲವು ಬಾರಿ ಪತ್ರವನ್ನು ಬರೆಯಲಾಗಿದೆ. ಶುಲ್ಕ ನಿಗದಿ ಪಡಿಸಿದರೆ ಸರ್ಕಾರಕ್ಕೆ ಆದಾಯ ಮತ್ತು ಪಾರ್ಕಿಂಗ್ ಸಮಸ್ಯೆಗೆ ಪರಿಹಾರ ಸಿಗಬಹುದು’ ಎನ್ನುತ್ತಾರೆ ವ್ಯಾಪಾರಿ ಸುಧೀರ್ ಶೆಟ್ಟಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.