ADVERTISEMENT

ಹೊನ್ನಾವರ: ಜಾರಿಯಾಗದ ಪಾರ್ಕಿಂಗ್ ವ್ಯವಸ್ಥೆ, ಜನರಿಗೆ ಸಂಕಷ್ಟ

ಎಂ.ಜಿ.ಹೆಗಡೆ
Published 29 ಮಾರ್ಚ್ 2024, 5:03 IST
Last Updated 29 ಮಾರ್ಚ್ 2024, 5:03 IST
ಹೊನ್ನಾವರದ ಭಟ್ಕಳ ವೃತ್ತದಿಂದ ಬಾಜಾರ್‌ಗೆ ಹೋಗುವ ರಸ್ತೆಯಲ್ಲಿ ವಾಹನಗಳನ್ನು ಅಡ್ಡಾದಿಡ್ಡಿಯಾಗಿ ನಿಲ್ಲಿಸುವುದು ನಿತ್ಯ ಕಂಡುಬರುವ ದೃಶ್ಯ
ಹೊನ್ನಾವರದ ಭಟ್ಕಳ ವೃತ್ತದಿಂದ ಬಾಜಾರ್‌ಗೆ ಹೋಗುವ ರಸ್ತೆಯಲ್ಲಿ ವಾಹನಗಳನ್ನು ಅಡ್ಡಾದಿಡ್ಡಿಯಾಗಿ ನಿಲ್ಲಿಸುವುದು ನಿತ್ಯ ಕಂಡುಬರುವ ದೃಶ್ಯ   

ಹೊನ್ನಾವರ: ಪಟ್ಟಣದಲ್ಲಿ ಟ್ರಾಫಿಕ್ ಹಾಗೂ ಪಾರ್ಕಿಂಗ್ ಅವ್ಯವಸ್ಥೆ ಸರಿಪಡಿಸುವ ಕುರಿತು ಪಟ್ಟಣ ಪಂಚಾಯಿತಿಯ ಹಲವು ಸಭೆಗಳಲ್ಲಿ ಚರ್ಚೆಗಳು ನಡೆದಿವೆ.

3 ವರ್ಷಗಳ ಹಿಂದೆ ಪೊಲೀಸ್ ಹಾಗೂ ಪಟ್ಟಣ ಪಂಚಾಯಿತಿ ಪ್ರತಿನಿಧಿಗಳು ಹಾಗೂ ಅಧಿಕಾರಿಗಳ ವಿಶೇಷ ಸಭೆ ನಡೆದು ಪಾರ್ಕಿಂಗ್‌ಗೆ ಜಾಗ ನಿಗದಿಪಡಿಸಿ ಕೆಲ ನಿರ್ಣಯಗಳನ್ನು ಕೂಡ ಅಂಗೀಕರಿಸಲಾಗಿದೆ. ಆದರೆ ಯಾವ ನಿರ್ಣಯಗಳೂ ಜಾರಿಯಾಗಿಲ್ಲದಿರುವುದರ ಜೊತೆಗೆ ವ್ಯವಸ್ಥೆ ಇನ್ನಷ್ಟು ಹದಗೆಟ್ಟಿದೆ.

20 ಸಾವಿರಕ್ಕಿಂತ ಹೆಚ್ಚಿನ ಜನಸಂಖ್ಯೆ ಇರುವ ಪಟ್ಟಣದಲ್ಲಿ ವಾಣಿಜ್ಯ ವಹಿವಾಟುಗಳು ಸಾಕಷ್ಟು ನಡೆಯುತ್ತವೆ. 66 ಮತ್ತು 69 ಸಂಖ್ಯೆಯ ರಾಷ್ಟ್ರೀಯ ಹೆದ್ದಾರಿಗಳು ಇಲ್ಲಿ ಸಂಧಿಸುತ್ತಿದ್ದು ವಾಹನ ದಟ್ಟಣೆ ಹೆಚ್ಚಿದೆ. ಪಟ್ಟಣಕ್ಕೆ ಹೊಂದಿಕೊಂಡಂತೆ ಬಂದರು ಕೂಡ ಇದ್ದು ಅಲ್ಲಿಯೂ ಜನ ಹಾಗೂ ವಾಹನಗಳ ಓಡಾಟ ದಿನವಿಡೀ ಕಂಡುಬರುತ್ತದೆ. ಶರಾವತಿ ನದಿಯಲ್ಲಿ ಬೋಟಿಂಗ್, ಬೀಚ್ ಮೊದಲಾದ ಪ್ರವಾಸಿ ತಾಣಗಳಿಗೆ ನಿತ್ಯ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ. ಮಿತಿ ಮೀರಿದ ಸಂಖ್ಯೆಯ ವಾಹನಗಳು, ಕಿರಿದಾದ ರಸ್ತೆಗಳು, ಸಂಚಾರ ನಿಯಮ ಉಲ್ಲಂಘನೆ ಮೊದಲಾದ ಕಾರಣಗಳಿಂದ ವಾಹನ ಸವಾರರು ಹಾಗೂ ಜನಸಾಮಾನ್ಯರ ಪರದಾಟ ಸಾಮಾನ್ಯವಾಗಿದೆ.

ADVERTISEMENT

‘ಜಾರಿನ ಮಸೀದಿ ರಸ್ತೆ, ಗಂಡು ಮಕ್ಕಳ ಮಾದರಿ ಶಾಲೆ ಎದುರು, ಮಾಸ್ತಿಕಟ್ಟೆ, ಮಲಬಾರ ಬೇಕರಿ ಸಮೀಪ, ಮುಖ್ಯ ಬಸ್ ನಿಲ್ದಾಣ ಮತ್ತು ಬಂದರಿನ ಮಾರುತಿ ದೇವಸ್ಥಾನದ ಹತ್ತಿರ ಹೀಗೆ 6 ಕಡೆಗಳಲ್ಲಿ ಪಾರ್ಕಿಂಗ್ ಸ್ಥಳಗಳೆಂದು ನಿಗದಿಪಡಿಸಿ ಫಲಕ ಅಂಟಿಸಲಾಗಿದೆ’ ಎಂಬುದು ಪಟ್ಟಣ ಪಂಚಾಯಿತಿ ಅಧಿಕಾರಿಗಳು ನೀಡುವ ಮಾಹಿತಿ. ಆದರೆ ಸದ್ಯ ಈ ಫಲಕಗಳೂ ಮರೆಯಾಗಿರುವ ಜೊತೆಗೆ ಈ ಜಾಗಗಳೆಲ್ಲ ಬಹುಮಟ್ಟಿಗೆ ಅತಿಕ್ರಮಣಕ್ಕೊಳಗಾಗಿವೆ. ವಾಹನಗಳನ್ನು ಎಲ್ಲೆಂದರಲ್ಲಿ ಅಡ್ಡಾದಿಡ್ಡಿಯಾಗಿ ನಿಲ್ಲಿಸುತ್ತಿದ್ದು ವಾಹನ ನಿಲುಗಡೆಗೆ ಸಂಬಂಧಿಸಿ ನಡೆಯುವ ತಂಟೆ-ತಕರಾರುಗಳಿಂದಾಗಿ ಸಭ್ಯ ನಾಗರಿಕರು ಮುಜುಗರ ಅನುಭವಿಸುವಂತಾಗಿದೆ. ಗಣ್ಯ ವ್ಯಕ್ತಿಗಳು ಬಂದಾಗ ಮಾತ್ರ ಕಂಡುಬರುವ ಪೊಲೀಸರು ಉಳಿದ ದಿನಗಳಲ್ಲಿ ಸಂಚಾರ ಸುವ್ಯವಸ್ಥೆ ಕಡೆ ಗಮನ ಹರಿಸುತ್ತಿಲ್ಲ ಎನ್ನುವ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

‘ಬಾಜಾರ್ ಸೇರಿದಂತೆ ಹಲವೆಡೆ ಅಂಗಡಿಕಾರರು ರಸ್ತೆ ಅತಿಕ್ರಮಿಸಿದ್ದಾರೆ. ಮೌದ್ಗಿಲ್ ಜಿಲ್ಲಾಧಿಕಾರಿಯಾಗಿದ್ದಾಗ ಒಮ್ಮೆ ಅತಿಕ್ರಮಣ ತೆರವು ಕಾರ್ಯಾಚರಣೆ ನಡೆದಿತ್ತು. ಪಾರ್ಕಿಂಗ್‌ ವ್ಯವಸ್ಥೆ ಇದ್ದರೆ ಮಾತ್ರ ಅಂಗಡಿಗಳಿಗೆ ಪರವಾನಗಿ ಕೊಡಬೇಕೆಂಬ ನಿಯಮ ನಮ್ಮ ಪಟ್ಟಣಕ್ಕೆ ಅನ್ವಯಿಸುತ್ತಿಲ್ಲ. ವಾಹನ ದಟ್ಟಣೆ ಹಾಗೂ ಪಾರ್ಕಿಂಗ್ ತೊಂದರೆಯಿಂದ ಪೇಟೆಗೆ ಹೋಗುವುದೆಂದರೆ ಭಯವಾಗುತ್ತಿದೆ’ ಎಂದು ಪ್ರಭಾತನಗರದ ಸುರೇಶ ಅಸಮಾಧಾನ ವ್ಯಕ್ತಪಡಿಸಿದರು.

‘ವಾಹನ ನಿಲುಗಡೆ ಮಾಹಿತಿ ಪಡೆದು ಕ್ರಮ’

‘ತಹಶೀಲ್ದಾರರಿಗೆ ಕಂದಾಯ ಇಲಾಖೆಯ ಕೆಲಸಗಳ ಜೊತೆಗೆ ಚುನಾವಣೆ ನಡೆಸುವ ಜವಾಬ್ದಾರಿ ಕೂಡ ಇದೆ. ಪಟ್ಟಣ ಪಂಚಾಯಿತಿ ಆಡಳಿತಾಧಿಕಾರಿಯೂ ಅವರೇ ಆಗಿದ್ದಾರೆ. ವಾಹನ ನಿಲುಗಡೆ ವ್ಯವಸ್ಥೆಗೆ ಸಂಬಂಧಿಸಿ ಕೈಗೊಂಡಿರುವ ಕ್ರಮಗಳ ಕುರಿತು ಮಾಹಿತಿ ಪಡೆಯಬೇಕಿದೆ. ಸಾರ್ವಜನಿಕರಿಗೆ ಆಗುತ್ತಿರುವ ಸಮಸ್ಯೆಗಳ ಕುರಿತು ಗಮನ ಹರಿಸುತ್ತೇವೆ’ ಎಂದು ಉಪ ತಹಶೀಲ್ದಾರ ಹಾಗೂ ಹೊನ್ನಾವರ ಪಟ್ಟಣ ಪಂಚಾಯಿತಿಯ ಪ್ರಭಾರ ಮುಖ್ಯಾಧಿಕಾರಿ ಉಷಾ ಪಾವಸ್ಕರ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.