ADVERTISEMENT

ಹಳಿಯಾಳ | ಲಾಕ್‌ಡೌನ್‌ನಿಂದ ಆರ್ಥಿಕ ಮುಗ್ಗಟ್ಟು: ಮಳೆಗಾಲಕ್ಕೆ ಸಜ್ಜಾಗಲು ಚಿಂತೆ

ಲಾಕ್‌ಡೌನ್‌ನಿಂದ ಕೆಲಸವಿಲ್ಲದೇ ಕಂಗಾಲಾದ ಬುಡಕಟ್ಟು ಜನಾಂಗದ ಕುಟುಂಬಗಳು

ಸಂತೋಷ ಹಬ್ಬು
Published 27 ಏಪ್ರಿಲ್ 2020, 4:23 IST
Last Updated 27 ಏಪ್ರಿಲ್ 2020, 4:23 IST
ಹಳಿಯಾಳ ತಾಲ್ಲೂಕಿನ ಗರಡೊಳ್ಳಿಯಲ್ಲಿ ಗ್ರಾಮಸ್ಥರು ಮನೆಯ ಮುಂದೆ ಕಸಬರಿಗೆ ತಯಾರಿಸಲು ಸಿದ್ಧತೆ ಮಾಡಿಕೊಳ್ಳುತ್ತಿರುವುದು
ಹಳಿಯಾಳ ತಾಲ್ಲೂಕಿನ ಗರಡೊಳ್ಳಿಯಲ್ಲಿ ಗ್ರಾಮಸ್ಥರು ಮನೆಯ ಮುಂದೆ ಕಸಬರಿಗೆ ತಯಾರಿಸಲು ಸಿದ್ಧತೆ ಮಾಡಿಕೊಳ್ಳುತ್ತಿರುವುದು   

ಹಳಿಯಾಳ (ಉತ್ತರ ಕನ್ನಡ): ಲಾಕ್‌ಡೌನ್‌ನಿಂದಾಗಿ ಕೆಲಸವಿಲ್ಲದೇಸಿದ್ದಿಜನಾಂಗದ ನೂರಾರು ಮಂದಿ ಕಾರ್ಮಿಕರು, ಹೊಟ್ಟೆ‍ಪಾಡಿಗೆ ಪರದಾಡುತ್ತಿದ್ದಾರೆ.ಮೊದಲಿನಂತೆ ದುಡಿಮೆ ಆರಂಭವಾಗಿ ಜೀವನ ಸುಗಮವಾದರೆ ಸಾಕೆಂದು ಕಾಯುತ್ತಿದ್ದಾರೆ.

ತಾಲ್ಲೂಕಿನಕೆಸರೊಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗರಡೊಳ್ಳಿ ಗ್ರಾಮದಲ್ಲಿ 130 ಹಾಗೂ ವಾಡಾ ಗ್ರಾಮದಲ್ಲಿ 67 ಸಿದ್ದಿ ಕುಟುಂಬಗಳು ವಾಸಿಸುತ್ತಿವೆ. ಎರಡೂ ಕಡೆಗಳಲ್ಲಿ ಒಟ್ಟು945 ಜನಸಂಖ್ಯೆಯಿದೆ.

‘ನಮಗೆ ಸರ್ಕಾರದಿಂದ ಎಲ್ಲ ಮೂಲ ಸೌಕರ್ಯಗಳು, ಅಕ್ಕಿ ಮತ್ತಿತರ ದಿನಸಿಗಳು ದೊರಕಿವೆ. ಸರ್ಕಾರವು ಹಸಿವು ಇಂಗಿಸಲು ದವಸ ಧಾನ್ಯ ಕೊಟ್ಟರೂ ಇನ್ನಿತರ ವಸ್ತುಗಳನ್ನು ಕೊಳ್ಳಲು ಹಣಕಾಸಿನ ತೀರಾ ಅಗತ್ಯವಿದೆ. ಆದ್ದರಿಂದಲಾಕ್‌ಡೌನ್ ಬೇಗ ತೆರವಾದರೆ ಕೂಲಿ ಕೆಲಸಕ್ಕೆ ತೆರಳುತ್ತೇವೆ’ ಎನ್ನುತ್ತಾರೆ ಗರಡೊಳ್ಳಿ ಗ್ರಾಮದ ಲೀನಾ ಸುನೀಲ ಕಾಮ್ರೇಕರ.

ADVERTISEMENT

‘ಗ್ರಾಮ ಪಂಚಾಯ್ತಿ ಕಚೇರಿಗೆ ಭೇಟಿ ನೀಡಿ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡಿ ಕೂಲಿ ಪಡೆಯಬೇಕಾಗಿದೆ. ಎಷ್ಟೊಂದು ದಿವಸ ಮನೆಯಲ್ಲಿಯೇ ಕೂರಲು ಸಾಧ್ಯ’ ಎಂದು ಪ್ರಶ್ನಿಸಿದರು.

‘ಮಾರ್ಚ್ 22ರಂದು ಲಾಕ್‌ಡೌನ್ ಘೋಷಣೆಯಾಗುವ ಮೊದಲಿನಿಂದಲೇ ಕುಟುಂಬದ ಆರು ಮಂದಿ ಮನೆಯಲ್ಲಿಯೇ ಇದ್ದೇವೆ. ಈಗಿನ ತುರ್ತು ಪರಿಸ್ಥಿತಿಯಲ್ಲಿ ಸರ್ಕಾರದಸಹಾಯ ಸಿಗುತ್ತಿದೆ. ಎಲ್ಲ ದಿನಗಳೂಈ ರೀತಿ ಇರುವುದಿಲ್ಲ. ಮುಂಬರುವ ಮಳೆಗಾಲಕ್ಕೆ ಯೋಜನೆ ರೂಪಿಸಿ ವರ್ಷಕ್ಕೆ ಬೇಕಾದಷ್ಟು ದವಸ ಧಾನ್ಯ, ಮತ್ತಿತರಸಾಮಗ್ರಿಗಳನ್ನು ಸಂಗ್ರಹಿಸಿಟ್ಟುಕೊಳ್ಳಬೇಕಿದೆ. ಅದಕ್ಕೆಆರ್ಥಿಕವಾಗಿ ಸದೃಢವಾಗಬೇಕಾಗಿದೆ’ ಎನ್ನುತ್ತಾರೆ ಭಾರತಿ ಇಶೆಂತಿ ಕಾಮ್ರೇಕರ.

‘ಗ್ರಾಮಸ್ಥರಿಗೆ ಉದ್ಯೋಗ’: ‘ಈಗಾಗಲೇತಾಲ್ಲೂಕಿನ ಮಾಗವಾಡ, ಆಲೂರ, ಬಡಾಕಾನ ಶಿರಡಾ, ಜನಗಾ, ತತ್ವಣಗಿ, ಎನ್.ಎಸ್.ಕೊಪ್ಪ, ಹವಗಿ, ಚಿಬ್ಬಲಗೇರಿ ಮತ್ತಿತರ ಗ್ರಾಮ ಪಂಚಾಯ್ತಿಗಳ ವ್ಯಾಪ್ತಿಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ 946 ಮಂದಿಗೆ ಉದ್ಯೋಗ ಒದಗಿಸಲಾಗಿದೆ’ ಎಂದುತಾಲ್ಲೂಕು ಪಂಚಾಯ್ತಿಕಾರ್ಯ ನಿರ್ವಹಣಾಧಿಕಾರಿ ಪ್ರವೀಣಕುಮಾರ ಸಾಲಿ ಹೇಳಿದರು.

‘ಉದ್ಯೋಗ ಮಾಡಲು ಬರುವವರಿಗೆ ಕಡ್ಡಾಯವಾಗಿ ಆರೋಗ್ಯ ತಪಾಸಣೆ ಮಾಡಲಾಗುತ್ತದೆ. ಮುಖಗವಸು, ಸ್ಯಾನಿಟೈಸರ್ ವಿತರಿಸಲಾಗುತ್ತದೆ. ಗರಡೊಳ್ಳಿ ಹಾಗೂ ವಾಡಾ ಗ್ರಾಮದಲ್ಲಿಯೂ ಉದ್ಯೋಗ ಖಾತ್ರಿ ಯೋಜನೆಯಡಿ ಕಾಮಗಾರಿ ಕೈಗೊಂಡು ಗ್ರಾಮಸ್ಥರಿಗೆ ಉದ್ಯೋಗ ನೀಡಲಾಗುವುದು’ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.