ADVERTISEMENT

ಕಾರವಾರ: ಸುರಂಗ ಕುಸಿತ, ರೈಲು ಸಂಚಾರ ರದ್ದು

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2020, 14:06 IST
Last Updated 6 ಆಗಸ್ಟ್ 2020, 14:06 IST
ಗೋವಾದ ಪೆರ್ನೆಂ ಬಳಿ ಕೊಂಕಣ ರೈಲ್ವೆಯ ಸುರಂಗದಲ್ಲಿ ಮಣ್ಣು ಕುಸಿದಿರುವುದು
ಗೋವಾದ ಪೆರ್ನೆಂ ಬಳಿ ಕೊಂಕಣ ರೈಲ್ವೆಯ ಸುರಂಗದಲ್ಲಿ ಮಣ್ಣು ಕುಸಿದಿರುವುದು   

ಕಾರವಾರ: ಕೊಂಕಣ ರೈಲ್ವೆಯ ಕಾರವಾರ ವಲಯದಲ್ಲಿರುವ, ಗೋವಾದ ಪೆರ್ನೆಂ ಬಳಿ ಸುರಂಗದ ಒಳಭಾಗದ ಗೋಡೆಯುಭಾರಿ ಮಳೆಯಿಂದಾಗಿ ಗುರುವಾರ ಮುಂಜಾನೆ ಕುಸಿದಿದೆ.

ಹಾಗಾಗಿ ಮುಂದಿನ ಸೂಚನೆ ಬರುವವರೆಗೆ ಈ ಮಾರ್ಗದಲ್ಲಿ ರೈಲುಗಳ ಸಂಚಾರವನ್ನು ರದ್ದುಪಡಿಸಲಾಗಿದೆ. ಆ.5 ಮತ್ತು 6ರಂದು ಸಂಚರಿಸುತ್ತಿದ್ದ ರೈಲುಗಳ ಮಾರ್ಗ ಬದಲಾವಣೆ ಮಾಡಲಾಗಿದೆ. ಸುರಂಗವು ಮಧುರೆ ಹಾಗೂ ಪೆರ್ನೆಂ ಮಧ್ಯೆ ಇದೆ. ಅವಘಡದಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ. ಸುರಂಗವನ್ನು ದುರಸ್ತಿ ಮಾಡಲಾಗುತ್ತಿದೆ ಎಂದು ಕೊಂಕಣ ರೈಲ್ವೆ ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.

ಮಾರ್ಗ ಬದಲಾವಣೆ: ಆ.5ರಂದು ಎರ್ನಾಕುಳಂ– ಹಜರತ್ ನಿಜಾಮುದ್ದೀನ್ ಸೂಪರ್ ಫಾಸ್ಟ್ ಸ್ಪೆಷಲ್ ಎಕ್ಸ್‌ಪ್ರೆಸ್ ರೈಲು (ಸಂಖ್ಯೆ 02617) ಹಾಗೂ ಅದೇ ದಿನ ಸಂಚರಿಸುವ ತಿರುವನಂತಪುರಂ ಸೆಂಟ್ರಲ್– ಲೋಕಮಾನ್ಯ ತಿಲಕ್ (ಸಂಖ್ಯೆ 06346) ವಿಶೇಷ ರೈಲನ್ನು ಮಡಗಾಂವ್– ಲೋಂಡಾ–ಮೀರಜ್– ಪುಣೆ– ಪನ್ವೇಲ್– ಕಲ್ಯಾಣ್ ಮೂಲಕ ಕಳುಹಿಸಲಾಗಿದೆ.

ADVERTISEMENT

ಅದೇ ರೀತಿ, ನವದೆಹಲಿ– ತಿರುವನಂತಪುರಂ ಸೆಂಟ್ರಲ್ ರಾಜಧಾನಿ ವಿಶೇಷ ಎಕ್ಸ್‌ಪ್ರೆಸ್ (ಸಂಖ್ಯೆ 02432), ನಿಜಾಮುದ್ದೀನ್– ಎರ್ನಾಕುಳಂ ಸೂಪರ್‌ಫಾಸ್ಟ್ (ಸಂಖ್ಯೆ 02618), ಆ.6ರಂದು ಸಂಚರಿಸುತ್ತಿದ್ದ ಲೋಕಮಾನ್ಯ ತಿಲಕ್– ತಿರುವನಂತಪುರಂ ಸೆಂಟ್ರಲ್ (ಸಂಖ್ಯೆ 06345) ರೈಲುಗಳನ್ನು ಪನ್ವೆಲ್– ಪುಣೆ– ಮೀರಜ್– ಲೋಂಡ– ಮಡಗಾಂವ್ ಮೂಲಕ ಸಂಚರಿಸಲು ಸೂಚಿಸಲಾಗಿದೆ.

ಪ್ರಯಾಣಿಕರಿಗೆ ಯಾವುದೇ ಸಂಶಯಗಳಿದ್ದರೆ ಸಹಾಯವಾಣಿ: 022 2758 7939, 10722 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.