
ಕಾರವಾರ ತಾಲ್ಲೂಕಿನ ದೇವಬಾಗದಲ್ಲಿ ಮೊಟ್ಟೆಯಿಂದ ಹೊರಬಂದ ಆಲಿವ್ ರಿಡ್ಲೆ ಕಡಲಾಮೆ ಮರಿಗಳು ಸಮುದ್ರದತ್ತ ಸಾಗುತ್ತಿರುವುದು
ಚಿತ್ರ: ಶಾನವಾಜ್ ಕಡಪಾ
ಕಾರವಾರ: ಅಳಿವಿನಂಚಿನಲ್ಲಿರುವ ಆಲಿವ್ ರಿಡ್ಲೆ ಕಡಲಾಮೆಗಳ ಸಂರಕ್ಷಣೆಗೆ ಪೂರಕವಾಗುವ ಜೊತೆಗೆ ಅವುಗಳ ಜಾಡು ಅರಸಲು ಪ್ರವಾಸಿಗರನ್ನು ಸೆಳೆಯುವ ‘ಟರ್ಟಲ್ ಟ್ರೇಲ್ಸ್’ (ಆಮೆ ಸಂರಕ್ಷಣಾ ಪಥ) ಯೋಜನೆಯನ್ನು ಕೇಂದ್ರ ಸರ್ಕಾರದ ಆಯವ್ಯಯದಲ್ಲಿ ಘೋಷಿಸಲಾಗಿದೆ. ಇದು ಜಿಲ್ಲೆಯ ಪ್ರವಾಸೋದ್ಯಮ ಕ್ಷೇತ್ರಕ್ಕೆ ವರವಾಗಬಹುದು ಎಂಬ ನಿರೀಕ್ಷೆ ಗರಿಗೆದರಿದೆ.
ಆಮೆ ಸಂರಕ್ಷಣಾ ಪಥಕ್ಕೆ ₹2,500 ಕೋಟಿಗೂ ಹೆಚ್ಚಿನ ಅನುದಾನ ಮೀಸಲಿಡಲಾಗುತ್ತಿದೆ. ಓರಿಸ್ಸಾ, ಕೇರಳ ಹೊರತುಪಡಿಸಿದರೆ ಕಡಲಾಮೆ ಸಂತಾನೋತ್ಪತ್ತಿ ಸ್ಥಳಗಳಲ್ಲಿ ಕರ್ನಾಟಕವೂ ಮುಂಚೂಣಿ ಸ್ಥಾನ ಹೊಂದಿದೆ. ರಾಜ್ಯದ ಕರಾವಳಿ ಪ್ರದೇಶದ ಪೈಕಿ ಉತ್ತರ ಕನ್ನಡದ್ದೇ ಸಿಂಹಪಾಲಿದೆ. ಹೀಗಾಗಿ, ಹೊಸ ಯೋಜನೆಯು ಜಿಲ್ಲ್ಎಗೆ ನೆರವಾಗಬಹುದು ಎಂಬ ನಿರೀಕ್ಷೆ ಇದೆ.
ರಾಜ್ಯದಲ್ಲಿ ಅತಿ ಹೆಚ್ಚು ಕಡಲಾಮೆ ಮೊಟ್ಟೆ ಇಡುವ ತಾಣಗಳು ಉತ್ತರ ಕನ್ನಡ ಜಿಲ್ಲೆಯಲ್ಲಿವೆ. ಹೊನ್ನಾವರದ ಕಾಸರಕೋಡ, ಟೊಂಕ ಕಡಲತೀರ ಈ ಪೈಕಿ ಮುಂಚೂಣಿಯಲ್ಲಿದೆ. ಕಾರವಾರದ ಟ್ಯಾಗೋರ್ ಕಡಲತೀರ, ದೇವಬಾಗ ಕಡಲತೀರ, ಅಂಕೋಲಾದ ಮಂಜುಗುಣಿ, ಕುಮಟಾದ ಧಾರೇಶ್ವರದಲ್ಲೂ ಕಡಲಾಮೆಗಳು ವ್ಯಾಪಕ ಪ್ರಮಾಣದಲ್ಲಿ ಮೊಟ್ಟೆ ಇಡುತ್ತಿವೆ.
ಕಳೆದ ನಾಲ್ಕು ವರ್ಷಗಳಲ್ಲಿ ಜಿಲ್ಲೆಯ ಕಾರವಾರ, ಹೊನ್ನಾವರ ವಿಭಾಗದಲ್ಲಿ ಆಲಿವ್ ರಿಡ್ಲೆ ಕಡಲಾಮೆಗಳು 1.5 ಲಕ್ಷಕ್ಕೂ ಹೆಚ್ಚು ಮೊಟ್ಟೆಗಳನ್ನು ಇರಿಸಿದ್ದವು. ಅಕ್ಟೋಬರ್‌ನಿಂದ ಏಪ್ರಿಲ್‌ವರೆಗೆ ಕರಾವಳಿ ಭಾಗದಲ್ಲಿ ಆಲಿವ್ ರಿಡ್ಲೆ ಕಡಲಾಮೆಗಳು ಮೊಟ್ಟೆ ಇಡುವ, ಅವುಗಳ ಸಂರಕ್ಷಣೆಗೆ ಗೂಡು ರಚಿಸುವ, ಹೊರಬಂದ ಮರಿಗಳನ್ನು ಸಮುದ್ರಕ್ಕೆ ಬಿಡುವ ಪ್ರಕ್ರಿಯೆ ನಡೆಯುತ್ತಿರುತ್ತವೆ.
‘ಟರ್ಟಲ್ಸ್ ಟ್ರೇಲ್ಸ್ ಯೋಜನೆ ಕೇವಲ ಕಡಲಾಮೆಗಳ ವೀಕ್ಷಣೆಗೆ ಸೀಮಿತವಾಗಿರುವ ಸಾಧ್ಯತೆ ಕಡಿಮೆ. ಇದು ಕರಾವಳಿಯ ಜೀವವೈವಿಧ್ಯತೆ ಉಳಿಸುವ ನಿಟ್ಟಿನಲ್ಲಿ ಯೋಜನೆಗಳನ್ನು ಒಳಗೊಂಡಿರಬಹುದು. ಅಳಿವಿನಂಚಿನಲ್ಲಿರುವ ಕಡಲಾಮೆಗಳ ಸಂತತಿ ಉಳಿವಿಗೆ ಇದು ಪೂರಕವಾಗುವ ವಿಶ್ವಾಸವಿದೆ’ ಎನ್ನುತ್ತಾರೆ ಕಡಲಜೀವಶಾಸ್ತ್ರ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಮುಖ್ಯಸ್ಥ ಶಿವಕುಮಾರ ಹರಗಿ.
‘ಓರಿಸ್ಸಾ ಸೇರಿದಂತೆ ನಾನಾಕಡೆಗಳಲ್ಲಿ ಕಡಲಾಮೆ ಮೊಟ್ಟೆ ಇಡುವ, ಮರಿಗಳನ್ನು ಬಿಡುವ ಚಟುವಟಿಕೆಗಳ ಅಧ್ಯಯನಕ್ಕೆ ಪ್ರವಾಸೋದ್ಯಮ ಮಾದರಿಯ ಯೋಜನೆಗಳಿವೆ. ರಾಜ್ಯದ ವಿವಿಧೆಡೆಗಳಲ್ಲೂ ವನ್ಯಜೀವಿ, ಕೆಲ ನಿರ್ದಿಷ್ಟ ಪ್ರಾಣಿಗಳ ಚಟುವಟಿಕೆ ವೀಕ್ಷಣೆಗೆ ಪೂರಕವಾಗಿ ಪ್ರವಾಸೋದ್ಯಮ ರೂಪುಗೊಂಡಿದೆ. ಅದೇ ಮಾದರಿಯಲ್ಲಿ ಈ ಯೋಜನೆ ಜಾರಿಯಾದರೆ ಜಿಲ್ಲೆ ಜಾಗತಿಕ ಮಟ್ಟದಲ್ಲಿ ಗಮನಸೆಳೆಯಬಹುದು’ ಎನ್ನುತ್ತಾರೆ ಪ್ರಾಣಿಶಾಸ್ತ್ರ ಸಂಶೋಧಕ ಅಮಿತ್ ಹೆಗಡೆ.
ಆಲಿವ್ ರಿಡ್ಲೆ ಕಡಲಾಮೆಗಳ ಸಂತಾನೋತ್ಪತ್ತಿ ಪ್ರಮಾಣ ಹೆಚ್ಚಿರುವ ಪ್ರದೇಶಗಳ ಪೈಕಿ ಉತ್ತರ ಕನ್ನಡವೂ ಒಂದು. ಹೀಗಾಗಿ ಟರ್ಟಲ್ ಟ್ರೇಲ್ಸ್ ಜಿಲ್ಲೆಗೆ ಹೊಸರೂಪ ನೀಡಲು ಅವಕಾಶವಾಗಬಹುದುಅಮಿತ್ ಹೆಗಡೆ ಪ್ರಾಣಿಶಾಸ್ತ್ರ ಸಂಶೋಧಕ
ವಿರೋಧಕ್ಕೆ ಸ್ಥಗಿತಗೊಂಡಿದ್ದ ‘ಕೆನರಾ ಟ್ರೇಲ್ಸ್’
ಜಿಲ್ಲೆಯ ವ್ಯಾಪ್ತಿಯಲ್ಲಿರುವ ಪಶ್ಚಿಮ ಘಟ್ಟದ ಸೌಂದರ್ಯ ಸವಿಯುವ ಜೊತೆಗೆ ಇಲ್ಲಿನ ಸಸ್ಯ ಜೀವಸಂಪತ್ತಿನ ಅಧ್ಯಯನಕ್ಕೆ ಅನುಕೂಲವಾಗುವಂತೆ 2016ರಲ್ಲಿ ‘ದಿ ಗ್ರೇಟ್ ಕೆನರಾ ಟ್ರೇಲ್ಸ್’ ಯೋಜನೆ ಜಾರಿಗೆ ಬಂದಿತ್ತು. ಜೋಗ ಜಲಪಾತದ ಸಮೀಪದಿಂದ ಆರಂಭಿಸಿ ಜೊಯಿಡಾ ತಾಲ್ಲೂಕಿನ ಕ್ಯಾಸಲ್‌ರಾಕ್‌ವರೆಗೆ ಅರಣ್ಯ ಪಥದಲ್ಲೇ ಚಾರಣ ನಡೆಸುವ ಯೋಜನೆ ಇದಾಗಿತ್ತು. ಆದರೆ ಪರಿಸರವಾದಿಗಳು ಯೋಜನೆಗೆ ಆಕ್ಷೇಪ ಎತ್ತಿದ್ದರು. ಅರಣ್ಯ ಪ್ರದೇಶದಲ್ಲಿ ಜನರ ಹಸ್ತಕ್ಷೇಪ ಹೆಚ್ಚುವುದರಿಂದ ವನ್ಯಜೀವಿಗಳಿಗೆ ಅಡ್ಡಿಯಾಗಲಿದೆ ಎಂದಿದ್ದರು. ಬಳಿಕ ಯೋಜನೆ ಸ್ಥಗಿತಗೊಂಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.