ADVERTISEMENT

ಅವಳಿ ಮಕ್ಕಳಿಗೆ ಕ್ರೀಡೆ ಮೆಚ್ಚು, ಕುಟುಂಬ ಸದಸ್ಯರೆಲ್ಲರೂ ಬ್ಯಾಡ್ಮಿಂಟನ್ ಆಟಗಾರರು

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2020, 14:23 IST
Last Updated 17 ಮಾರ್ಚ್ 2020, 14:23 IST
ರಕ್ಷಾ ಹಾಗೂ ದಕ್ಷ್ ತಂದೆ ಡಾ.ದಿನೇಶ ಹೆಗಡೆ ಅವರೊಂದಿಗೆ
ರಕ್ಷಾ ಹಾಗೂ ದಕ್ಷ್ ತಂದೆ ಡಾ.ದಿನೇಶ ಹೆಗಡೆ ಅವರೊಂದಿಗೆ   

ಶಿರಸಿ: ಈ ಅವಳಿ ಮಕ್ಕಳಿಗೆ ಕ್ರೀಡೆಯೆಂದರೆ ಅಚ್ಚುಮೆಚ್ಚು. ಅದರಲ್ಲೂ ಬ್ಯಾಡ್ಮಿಂಟನ್ ಅವರ ಉಸಿರು. ವಾಲಿಬಾಲ್ ಕೂಡ ಅವರ ಇಷ್ಟದ ಆಟ.

ಇಲ್ಲಿನ ಡಾ.ಸುಮನ್ ಹೆಗಡೆ ಮತ್ತು ದಿನೇಶ ಹೆಗಡೆ ದಂಪತಿ ಮಕ್ಕಳಾದ ರಕ್ಷಾ ಮತ್ತು ದಕ್ಷ್ ಬ್ಯಾಡ್ಮಿಂಟನ್‌ನಲ್ಲಿ ಮುಂಚಿದವರು. ಭಾರತೀಯ ವೈದ್ಯಕೀಯ ಸಂಘದ ರಾಜ್ಯ ಮಟ್ಟದ ಬ್ಯಾಡ್ಮಿಂಟನ್ ಪಂದ್ಯದಲ್ಲಿ ರಕ್ಷಾ ಎರಡು ವರ್ಷ ಪ್ರಥಮ, ಒಮ್ಮೆ ದ್ವಿತೀಯ ಸ್ಥಾನ ಗಳಿಸಿದ್ದಾಳೆ. 13 ವರ್ಷದೊಳಗಿನ ವಿಭಾಗದ ಶಾಲಾ ಕ್ರೀಡಾಕೂಟದಲ್ಲಿ ರಾಷ್ಟ್ರ ಮಟ್ಟದಲ್ಲಿ ತೃತೀಯ ಸ್ಥಾನ ಪಡೆದಿದ್ದಾಳೆ.

ಸೇಂಟ್ ಅಂಥೋನಿ ಶಾಲೆಯ ಏಳನೇ ತರಗತಿ ವಿದ್ಯಾರ್ಥಿನಿಯಾಗಿರುವ ಈಕೆ, ಶಾಲೆಯ ವಾಲಿಬಾಲ್ ತಂಡದ ನಾಯಕಿಯಾಗಿ, ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು, ವಿಭಾಗ ಮಟ್ಟದಲ್ಲಿ ಉತ್ತಮ ಪ್ರದರ್ಶನ ನೀಡಿದ್ದಳು.

ADVERTISEMENT

ಡಾ. ದಿನೇಶ ಹೆಗಡೆ ಅವರು ಬ್ಯಾಡ್ಮಿಂಟನ್ ಆಟಗಾರ. ಅವರು ರಾಜ್ಯ ಮಟ್ಟದ ಅನೇಕ ಪಂದ್ಯಗಳಲ್ಲಿ ಬಹುಮಾನ ಗೆದ್ದವರು. ಸುಮನ್ ಮತ್ತು ದಿನೇಶ ದಂಪತಿ, ಭಾರತೀಯ ವೈದ್ಯಕೀಯ ಸಂಘದ ರಾಜ್ಯ ಮಟ್ಟದ ಬ್ಯಾಡ್ಮಿಂಟನ್ ಪಂದ್ಯದಲ್ಲಿ ಮಿಕ್ಸ್ಡ್ ಡಬಲ್ಸ್‌ನಲ್ಲಿ ಮೂರು ಬಾರಿ ಪದಕ ಪಡೆದವರು. ಅವರಿಂದ ಪ್ರೇರಿತರಾದ ಮಕ್ಕಳು ಕೂಡ, ಇದೇ ಆಟವನ್ನು ನೆಚ್ಚಿಕೊಂಡಿದ್ದಾರೆ. ಅವರ ಮೊದಲ ಪುತ್ರಿ ಸ್ಪರ್ಷಾ ಕೂಡ ಬ್ಯಾಡ್ಮಿಂಟನ್ ಆಟಗಾರ್ತಿ.

‘ನಾವು ಪಂದ್ಯಕ್ಕೆ ಹೋಗುವಾಗಲೆಲ್ಲ ಮಕ್ಕಳನ್ನು ಕರೆದುಕೊಂಡು ಹೋಗುತ್ತಿದ್ದೆವು. ಅದೇ ಅವರಿಗೆ ಬ್ಯಾಡ್ಮಿಂಟನ್‌ನಲ್ಲಿ ಆಸಕ್ತಿ ಬೆಳೆಯಲು ಕಾರಣವಾಯಿತು. ಎರಡನೇ ಕ್ಲಾಸಿನಿಂದಲೇ, ಶಾಲೆ ಮುಗಿದ ಮೇಲೆ ಆಟಕ್ಕೆ ಹೋಗುತ್ತಿದ್ದ ಮಕ್ಕಳು, ನಂತರ ಅನೇಕ ಪಂದ್ಯಗಳಲ್ಲಿ ಭಾಗವಹಿಸಿದರು’ ಎನ್ನುತ್ತಾರೆ ದಿನೇಶ ಹೆಗಡೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.