ಭಟ್ಕಳ: ಒಳಚರಂಡಿಯ ಚೇಂಬರ್‌ಗಳಿಂದ ಸೋರಿಕೆಯಾಗುವ ತ್ಯಾಜ್ಯ ನೀರು ಪಟ್ಟಣದ ಬಹುತೇಕ ಕಡೆಗಳಲ್ಲಿ ದುರ್ವಾಸನೆಯ ಸ್ಥಿತಿ ತಂದೊಡುತ್ತಿರುವುದು ನಿವಾಸಿಗಳ ವಲಸೆಗೆ ಕಾರಣವಾಗುತ್ತಿದೆ. ನೀರು ಸೇವನೆಗೂ ಜನರು ಹಿಂದೇಟು ಹಾಕುತ್ತಿದ್ದಾರೆ.
ಗೌಸಿಯಾ ಸ್ಟ್ರೀಟ್‌ನಲ್ಲಿರುವ ಪಂಪಿಂಗ್ ಘಟಕದ ಸುತ್ತಮುತ್ತಲಿನ ವಾಸಿಗಳು ಒಳಚರಂಡಿಯ ಅವ್ಯವಸ್ಥೆಯಿಂದ ನಿತ್ಯವೂ ತೊಂದರೆ ಎದುರಿಸುತ್ತಿದ್ದಾರೆ. ತ್ಯಾಜ್ಯನೀರನ್ನು ಪಂಪಿಂಗ್ ಮಾಡುವ ಯಂತ್ರ ಕೆಟ್ಟು ಹೋದಾಗ ನೀರನ್ನು ಶರಾಬಿ ನದಿಗೆ ಬೀಡಲಾಗುತ್ತಿದೆ. ಮಳೆಗಾಲದ ಸಮಯದಲ್ಲಿ ಹೀಗೆ ನೀರು ಬಿಟ್ಟಾಗ ಜನರಿಗೆ ತೊಂದರೆ ಎನಿಸದಿದ್ದರೂ, ಮಳೆ ಕಡಿಮೆಯಾದ ಮೇಲೆ ನದಿಯಿಂದ ಸೂಸುವ ದುರ್ವಾಸನೆ ಜನರಿಗೆ ಮನೆಯಲ್ಲಿ ಕೂರದಂತಹ ಪರಿಸ್ಥಿತಿ ತಂದೊಡ್ಡುತಿದೆ.
‘ದುರ್ವಾಸನೆ ಬೀರುವ ಕಾರಣಕ್ಕೆ ಮನೆಗಳಿಗೆ ಸಂಬಂಧಿಕರು ಬರಲು ಹಿಂದೇಟು ಹಾಕುತ್ತಾರೆ. ಊಟ ತಿಂಡಿ ಮಾಡಲೂ ಸಾಧ್ಯವಾಗದ ಸ್ಥಿತಿ ಉಂಟಾಗುತ್ತದೆ. ಇಂತಹ ಕೆಟ್ಟ ಪರಿಸ್ಥಿತಿಯ ಕಾರಣಕ್ಕೆ ಗೌಸಿಯಾ ಸ್ಟ್ರೀಟ್ ಭಾಗದ ಹಲವು ಕುಟುಂಬಗಳು ಪಟ್ಟಣದ ಬೇರೆಡೆಗೆ ವಲಸೆ ಹೋಗಿವೆ’ ಎನ್ನುತ್ತಾರೆ ಇಲ್ಲಿನ ನಿವಾಸಿಗಳು.
ಶಂಶುದ್ದೀನ್ ವೃತ್ತದ ಕೆಳಭಾಗದ ಪ್ರದೇಶಗಳ ಒಳಚರಂಡಿ ನೀರನ್ನು ವೆಂಕಟಾಪುರದಲ್ಲಿರುವ ತ್ಯಾಜ್ಯ ನೀರು ಶುದ್ದಿಕರಣ ಘಟಕಕ್ಕೆ ಗೌಸಿಯಾ ಸ್ಟ್ರೀಟ್‌ನಲ್ಲಿರುವ ತ್ಯಾಜ್ಯ ನೀರು ಪಂಪಿಂಗ್ ಘಟಕದಿಂದ ಪಂಪ್ ಮಾಡಿ ಕಳುಹಿಸಲಾಗುತ್ತದೆ. 2006ರಲ್ಲಿ ನಿರ್ಮಿಸಿದ ಪಂಪಿಂಗ್ ಕೇಂದ್ರ ಸಮರ್ಪಕ ನಿರ್ವಹಣೆ ಇಲ್ಲದೇ ಜೀರ್ಣಾವಸ್ಥೆ ತಲುಪಿದ್ದು, ಪಟ್ಟಣದ ಸಂಪೂರ್ಣ ತ್ಯಾಜ್ಯ ನೀರನ್ನು ವೆಂಕಟಾಪುರ ಘಟಕಕ್ಕೆ ಪಂಪ್ ಮಾಡುವ ಸಾಮರ್ಥ್ಯ ಕಳೆದುಕೊಂಡಿದೆ. ಸದ್ಯ ಗೌಸಿಯಾ ಸ್ಟ್ರೀಟ್‌ನ ಪಂಪಿಂಗ್ ಕೇಂದ್ರದಲ್ಲಿ 80 ಅಶ್ವ ಸಾಮರ್ಥ್ಯದ ಪಂಪ್ ಅಳವಡಿಸಿ ತ್ಯಾಜ್ಯ ನೀರನ್ನು ವೆಂಕಟಾಪುರ ಘಟಕಕ್ಕೆ ರವಾನೆ ಮಾಡಲಾಗುತ್ತಿದೆ.
‘ಮಳೆಗಾಲದಲ್ಲಿ ಚೇಂಬರ್ ನೀರು ರಸ್ತೆಯ ಮೇಲೆ ಹರಿಯುವುದು ಪಟ್ಟಣದಲ್ಲಿ ಸಾಮಾನ್ಯ ದೃಶ್ಯವಾಗಿದೆ. ಹೀಗೆ ಹರಿಯುವ ತ್ಯಾಜ್ಯ ನೀರು ಪಟ್ಟಣದ ಅಂಚಿನ ಮನೆಗಳ ಬಾವಿಗಳಿಗೆ ಸೇರಿ ನೀರು ಕಲುಷಿತಗೊಂಡರೆ, ಮಳೆ ನಿಂತ ಮೇಲೆ ಚರಂಡಿಗಳಲ್ಲಿ ನಿಲ್ಲುವ ತ್ಯಾಜ್ಯ ನೀರು ಸೊಳ್ಳೆ ಉತ್ಪತ್ತಿ ಕೇಂದ್ರವಾಗಿ ಮಾರ್ಪಟ್ಟಿದೆ’ ಎಂಬುದು ನಿವಾಸಿಗಳ ದೂರು.
ಚೇಂಬರ್ ಬದಲಾವಣೆ ಮಾಡಿದ ಪ್ರದೇಶಗಳಲ್ಲಿಯೇ ಮತ್ತೆ ಸೋರಿಕೆಯಾಗಿ ಬಾವಿ ನೀರು ಕಲುಷಿತಗೊಳ್ಳುತ್ತಿದ್ದು ಇದಕ್ಕೆ ಚೇಂಬರ್ ಕಾರಣವಲ್ಲ ಬದಲಾಗಿ 20 ವರ್ಷಗಳ ಹಿಂದೆ ಹಾಕಿರುವ ಪಪ್‌ಲೈನ್ ಮಾರ್ಗದಲ್ಲಿ ಸೋರಿಕೆ ಇದ್ದರೆ ಹೀಗಾಗುತ್ತದೆ ಎನ್ನುವ ಸಮಜಾಯಿಷಿ ಜಲಮಂಡಳಿಯವರು ನೀಡುತ್ತಿದ್ದಾರೆ.– ವೆಂಕಟೇಶ ನಾಯ್ಕ, ಆಸರಕೇರಿ ಪುರಸಭೆ ಮಾಜಿ ಸದಸ್ಯ
ಪಂಪಿಂಗ್ ಘಟಕದ ಸಮರ್ಪಕ ನಿರ್ವಹಣೆ ಇರದ ಕಾರಣ ಗೌಸಿಯಾ ಸ್ಟ್ರೀಟ್ ಸುತ್ತಮುತ್ತಲಿನ ನಿವಾಸಿಗಳಿಗೆ ಕುಡಿಯಲು ಶುದ್ದವಾದ ನೀರು ಸೇವಿಸಲು ಶುದ್ದ ಗಾಳಿಯೂ ಸಿಗುತ್ತಿಲ್ಲ.– ಕೈಸರ್ ಮೊಹತೆಶ್ಯಾಂ ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ
ಅಂತೂ ಬಂತು ಹೊಸ ಯಂತ್ರ
ಪಟ್ಟಣದಲ್ಲಿ ಒಳಚರಂಡಿ ಸಮಸ್ಯೆ ಉಲ್ಬಣಗೊಳ್ಳುತ್ತಿದ್ದಂತೆಯೇ ಎಚ್ಚರಗೊಂಡ ಜಲಮಂಡಳಿಯವರು ₹40 ಲಕ್ಷ ವೆಚ್ಚದ ಹೊಸ ಜೆಟ್ ಇನ್ ಯಂತ್ರವನ್ನು ಖರೀದಿ ಮಾಡಿ ಶುಕ್ರವಾರ ಪುರಸಭೆಗೆ ಹಸ್ತಾಂತರಿಸಿದ್ದಾರೆ. ಪಟ್ಟಣದಲ್ಲಿ ಚೇಂಬರ್‌ನಲ್ಲಿ ತ್ಯಾಜ್ಯರಾಶಿ ಸಿಲುಕಿಕೊಂಡಿದ್ದರೆ ಯಂತ್ರ ಬಳಸಿ ತೆರವು ಮಾಡುವ ಕಾರ್ಯ ಮಾಡಲಾಗುತ್ತದೆ ಎಂದು ಪುರಸಭೆ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.