ADVERTISEMENT

ಭಟ್ಕಳದಲ್ಲಿ ‘ನರಕ’ ಸೃಷ್ಟಿಸಿದ ಒಳಚರಂಡಿ

ಮ್ಯಾನ್‌ಹೋಲ್‌ಗಳಲ್ಲಿ ಸೋರಿಕೆ: ಜಲಮೂಲಗಳು ಕಲುಷಿತ

ಮೋಹನ ನಾಯ್ಕ
Published 20 ಜೂನ್ 2025, 5:16 IST
Last Updated 20 ಜೂನ್ 2025, 5:16 IST
ಭಟ್ಕಳ ಪಟ್ಟಣದ ಆಸರಕೇರಿಯಲ್ಲಿ ಒಳಚರಂಡಿಯ ಮ್ಯಾನ್‌ಹೋಲ್‌ನಲ್ಲಿ ಸಿಲುಕಿರುವ ತ್ಯಾಜ್ಯಗಳನ್ನು ತೆರವುಗೊಳಿಸಲು ಕೋಲು ಬಳಸಿ ಪೌರಕಾರ್ಮಿಕರೊಬ್ಬರು ಪ್ರಯತ್ನಿಸಿದರು
ಭಟ್ಕಳ ಪಟ್ಟಣದ ಆಸರಕೇರಿಯಲ್ಲಿ ಒಳಚರಂಡಿಯ ಮ್ಯಾನ್‌ಹೋಲ್‌ನಲ್ಲಿ ಸಿಲುಕಿರುವ ತ್ಯಾಜ್ಯಗಳನ್ನು ತೆರವುಗೊಳಿಸಲು ಕೋಲು ಬಳಸಿ ಪೌರಕಾರ್ಮಿಕರೊಬ್ಬರು ಪ್ರಯತ್ನಿಸಿದರು   

ಭಟ್ಕಳ: ಒಳಚರಂಡಿ ಸೋರಿಕೆ ಸದ್ಯ ಪಟ್ಟಣದ ಗಂಭೀರ ಸಮಸ್ಯೆಯಾಗಿ ಪರಿಣಮಿಸಿದ್ದು, ಪರಿಸರ ಮತ್ತು ಜನರ ಆರೋಗ್ಯದೊಂದಿಗೆ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಚೆಲ್ಲಾಟ ಆಡುತ್ತಿದೆ ಎಂದು ಜನರು ದೂರುತ್ತಿದ್ದಾರೆ. ಇದಕ್ಕೆ ಪುಷ್ಟಿ ನೀಡುವಂತೆ ಪಟ್ಟಣದ ವಿವಿಧ ಭಾಗಗಳಲ್ಲಿ ನಿತ್ಯವೂ ಮ್ಯಾನ್‌ಹೋಲ್‌ಗಳಿಂದ ತ್ಯಾಜ್ಯನೀರು ಸೋರಿಕೆಯಾಗಿ, ದುರ್ನಾತದ ಸ್ಥಿತಿ ನಿರ್ಮಾಣವಾಗುತ್ತಿದೆ.

ಒಳಚರಂಡಿಯ ಚೇಂಬರ್‌ಗಳಿಂದ ಸೋರಿಕೆಯಾದರೆ ಅಲ್ಲಿ ಸಿಲುಕಿದ ತ್ಯಾಜ್ಯಗಳನ್ನು ತೆರವುಗೊಳಿಸಲು ಸಕ್ಕಿಂಗ್ ಯಂತ್ರಗಳ ಬಳಕೆಯೂ ಆಗುತ್ತಿಲ್ಲ. ಪೌರಕಾರ್ಮಿಕರು ಕೋಲು, ಕಬ್ಬಿಣದ ಸಲಾಕೆಗಳನ್ನು ಬಳಸಿ ಕಾರ್ಯಾಚರಿಸುವ ಸ್ಥಿತಿಯೂ ಇದೆ.

‘ಒಳಚರಂಡಿಯ ಚೇಂಬರ್‌ಗಳಲ್ಲಿ ಸ್ಯಾನಿಟರಿ ಪ್ಯಾಡ್‌ಗಳು, ಹರಿದ ಬಟ್ಟೆಗಳು, ಪ್ಲಾಸ್ಟಿಕ್ ಬಾಟಲಿಗಳ ರಾಶಿ ಸಿಲುಕುತ್ತಿವೆ. ಕರಗದ ತ್ಯಾಜ್ಯವಸ್ತುಗಳ ರಾಶಿಯೇ ಚೇಂಬರ್‌ಗಳಲ್ಲಿ ಸಿಲುಕಿ, ಮ್ಯಾನ್‌ಹೋಲ್‌ಗಳ ಮೂಲಕ ನೀರು ಸೋರಿಕೆಯಾಗುತ್ತಿದೆ’ ಎನ್ನುತ್ತಾರೆ ಪಟ್ಟಣದ ನಿವಾಸಿಗಳು.

ADVERTISEMENT

‘ಪಟ್ಟಣದ ಸಂಪೂರ್ಣ ತ್ಯಾಜ್ಯ ನೀರನ್ನು ಪಂಪಿಂಗ್ ಮಾಡಿ ವೆಂಕಟಾಪುರದಲ್ಲಿರುವ ತ್ಯಾಜ್ಯನೀರು ಸಂಸ್ಕರಣಾ ಘಟಕಕ್ಕೆ ಕಳುಹಿಸಬೇಕಾಗುತ್ತದೆ. ಹೀಗೆ ಘಟಕಕ್ಕೆ ಕಳಿಸಬೇಕಾದ ಗೌಸಿಯಾ ಸ್ಟ್ರೀಟ್‌ನಲ್ಲಿರುವ ತ್ಯಾಜ್ಯ ಪಂಪಿಂಗ್ ಘಟಕ ಕೆಟ್ಟು ಹೋದ ಕಾರಣ ತ್ಯಾಜ್ಯ ನೀರು ಚೇಂಬರ್‌ನಲ್ಲಿಯೇ ಶೇಖರವಾಗಿ, ಅಕ್ಕಪಕ್ಕದ ಬಾವಿಗಳಿಗೆ ಪಸರಿಸಿದೆ. ಒಮ್ಮೊಮ್ಮೆ ಪಂಪಿಂಗ್ ಘಟಕ ಸ್ಥಗಿತಗೊಂಡಾಗ ಪಟ್ಟಣದ ಸಂಪೂರ್ಣ ತ್ಯಾಜ್ಯ ನೀರನ್ನು ಅಲ್ಲಿನ ಸರಾಬಿ ನದಿಗೆ ಹರಿಸುವ ಕೆಲಸವೂ ನಡೆದಿದೆ. ಸ್ಥಳೀಯರು ಪ್ರತಿಭಟಿಸಿದ ಬಳಿಕ ನದಿಗೆ ಹರಿಬಿಡುವುದು ನಿಲ್ಲುತ್ತಿದೆ’ ಎಂಬುದು ಜನರ ದೂರು.

‘ಒಳಚರಂಡಿಯ ನೀರು ಚೇಂಬರ್‌ಗಳ ಮೂಲಕ ಸೋರಿಕೆಯಾಗಿ ಅಕ್ಕಪಕ್ಕದ ಬಾವಿಗೆ ನುಗ್ಗುವುದರಿಂದ ನೀರು ಕಲುಷಿತಗೊಳ್ಳುತ್ತಿದೆ. ಪಟ್ಟಣದ ನೂರಾರು ಮನೆಗಳ ಜನರು ಅನಾರೋಗ್ಯಕ್ಕೆ ತುತ್ತಾದ ಘಟನೆಯೂ ನಡೆದಿವೆ. ಶಾಶ್ವತ ಪರಿಹಾರ ಒದಗಿಸುವುದಾಗಿ ನಗರ ನೀರು ಹಾಗೂ ಒಳಚರಂಡಿ ಸರಬರಾಜು ಮಂಡಳಿ ಪಟ್ಟಣದಲ್ಲಿ ಚೇಂಬರ್‌ಗಳನ್ನು ಬದಲಾವಣೆ ಮಾಡಲು ಮುಂದಾಯಿತು. ಚೇಂಬರ್ ಬದಲಿಸಿದ ಬಳಿಕ ಸಮಸ್ಯೆ ಇನ್ನಷ್ಟು ಬಿಗಡಾಯಿಸಿತು’ ಎನ್ನುತ್ತಾರೆ ಸತೀಶಕುಮಾರ ನಾಯ್ಕ.

‘ಪುರಸಭೆಯ ಕೊಳಾಯಿ ಗುತ್ತಿಗೆದಾರರು ಮನೆ, ಹೋಟೆಲ್‍ಗಳ ಒಳಚರಂಡಿ ಸಂಪರ್ಕಕ್ಕೆ ದೊಡ್ಡ ಗಾತ್ರದ ಪೈಪ್ ಅಳವಡಿಸಿದ್ದಾರೆ. ಚೇಂಬರ್ ಕತ್ತರಿಸಲು ಆಧುನಿಕ ಯಂತ್ರ ಬಳಸದೇ, ಭಾರವಾದ ಆಯುಧ ಬಳಸಿದ್ದಾರೆ. ಬಲವಾದ ಹೊಡೆತ ಬೀಸಿದ್ದರಿಂದ ಚೇಂಬರ್‌ಗಳಲ್ಲಿ ಬಿರುಕು ಮೂಡಿರುವುದು ಸೋರಿಕೆ ಹಾಗು ನೀರು ಸರಾಗವಾಗಿ ಹರಿಯದಿರಲು ಪ್ರಮುಖ ಕಾರಣವಾಗಿರಬಹುದು’ ಎಂದೂ ಹೇಳಿದರು.

ಭಟ್ಕಳ ಪಟ್ಟಣದ ಆಸರಕೇರಿಯಲ್ಲಿ ಒಳಚರಂಡಿಯ ಚೇಂಬರ್‌ನಲ್ಲಿ ಸಿಲುಕಿರುವ ಪ್ಲಾಸ್ಟಿಕ್ ಬಾಟಲಿ ತ್ಯಾಜ್ಯಗಳು
ಪುರಸಭೆಗೆ ಅಗತ್ಯ ಇರುವ ಸೀವೇಜ್ ಪಂಪಿಂಗ್ ಯಂತ್ರ ಪೂರೈಸಲು ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ಟೆಂಡರ್ ಕರೆದಿದೆ
ವೆಂಕಟೇಶ ನಾವಡ ಪುರಸಭೆ ಮುಖ್ಯಾಧಿಕಾರಿ

26 ವರ್ಷಗಳ ಹಿಂದಿನ ಯೋಜನೆ ಭಟ್ಕಳ ಪಟ್ಟಣದಲ್ಲಿ 1999 ರಲ್ಲಿ ಏಷ್ಯಾ ಅಭಿವೃದ್ಧಿ ಬ್ಯಾಂಕ್‌ನ (ಎಡಿಬಿ) ಹಣಕಾಸಿನ ಯೋಜನೆಯಲ್ಲಿ ಕೆ.ಯು.ಐ.ಡಿ.ಎಫ್.ಸಿ ಸಂಸ್ಥೆಯ ಮೇಲ್ವಿಚಾರಣೆಯಲ್ಲಿ ಒಳಚರಂಡಿ ಕಾಮಗಾರಿ ನಡೆದಿತ್ತು. ಪಟ್ಟಣದ ಗೌಸಿಯಾ ಸ್ಟ್ರೀಟ್‌ನಲ್ಲಿ ತ್ಯಾಜ್ಯ ಪಂಪಿಂಗ್ ಘಟಕ ಹಾಗೂ ವೆಂಕಟಾಪುರದಲ್ಲಿ ತ್ಯಾಜ್ಯ ನೀರು ಸಂಸ್ಕರಣಾ ಘಟಕ ನಿರ್ಮಿಸಲಾಗಿತ್ತು. ‘ಒಳಚರಂಡಿ ಯೋಜನೆ ಜಾರಿಯಾದಾಗ ಪಟ್ಟಣವು ಅಷ್ಟೇನೂ ಅಭಿವೃದ್ಧಿ ಕಂಡಿರಲಿಲ್ಲ. ಈಗ ನಿರೀಕ್ಷೆಗೂ ಮೀರಿ ಬೆಳವಣಿಗೆಯಾಗಿದೆ. ಕಟ್ಟಡಗಳು ಜನಸಂಖ್ಯೆಯೂ ದುಪ್ಪಟ್ಟಾಗಿದೆ. ಹೊಸ ಸಂಪರ್ಕ ನೀಡುವಾಗ ಸರಿಯಾದ ನಿಯಮ ಪಾಲನೆ ಆದಂತೆ ಕಂಡುಬರುತ್ತಿಲ್ಲ’ ಎನ್ನುತ್ತಾರೆ ಹಿರಿಯರೊಬ್ಬರು.

ಯಂತ್ರಗಳೂ ಇಲ್ಲ ಪಟ್ಟಣದಲ್ಲಿ ಒಳಚರಂಡಿ ಚೇಂಬರ್‌ಗಳಲ್ಲಿ ತ್ಯಾಜ್ಯ ತುಂಬಿಕೊಂಡು ನೀರು ಸಾಗದಿದ್ದಾಗ ತಕ್ಷಣ ಸರಿಪಡಿಸಬಹುದಾದ ಅತ್ಯಾಧುನಿಕ ಯಂತ್ರಗಳು ಭಟ್ಕಳ ಪುರಸಭೆಯ ಬಳಿ ಇಲ್ಲ. ಕಬ್ಬಿಣದ ಸರಳು ಹಾಗೂ ಕೋಲನ್ನು ಬಳಸಿ ಚೇಂಬರ್ ಬ್ಲಾಕ್  ಸರಿಪಡಿಸಲಾಗುತ್ತದೆ. ಪೌರಕಾರ್ಮಿಕರು ಚೇಂಬರ್ ಒಳಗಡೆ ಇಳಿಯಬಾರದು ಎನ್ನುವ ನಿಯಮ ಇದ್ದರೂ ಅನಿವಾರ್ಯ ಸಂದರ್ಭದಲ್ಲಿ ಪೌರಕಾರ್ಮಿಕರು ಚೇಂಬರ್ ಮೇಲೆ ನಿಂತು ಕೋಲುಗಳ ಮೂಲಕ ತ್ಯಾಜ್ಯಗಳನ್ನು ಹೊರತೆಗೆಯುವ ಅನಿವಾರ್ಯತೆ ಇದೆ ಎಂದು ಅಧಿಕಾರಿಯೊಬ್ಬರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.