ADVERTISEMENT

ಚರಂಡಿ ಕಾಮಗಾರಿ ಸರಿಪಡಿಸಲು ರಸ್ತೆ ಅಗೆತ: ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2021, 16:28 IST
Last Updated 18 ಆಗಸ್ಟ್ 2021, 16:28 IST
ಶಿರಸಿ ನಗರದ ಟಿವಿ ಸ್ಟೇಶನ್ ರಸ್ತೆಯಲ್ಲಿ ಸಿಡಿ ಎತ್ತರಕ್ಕೆ ಸರಿಹೊಂದಿಸುವ ಸಲುವಾಗಿ ಕಾಮಗಾರಿ ನಡೆಸಲು ರಸ್ತೆ ಅಗೆದಿರುವುದು
ಶಿರಸಿ ನಗರದ ಟಿವಿ ಸ್ಟೇಶನ್ ರಸ್ತೆಯಲ್ಲಿ ಸಿಡಿ ಎತ್ತರಕ್ಕೆ ಸರಿಹೊಂದಿಸುವ ಸಲುವಾಗಿ ಕಾಮಗಾರಿ ನಡೆಸಲು ರಸ್ತೆ ಅಗೆದಿರುವುದು   

ಶಿರಸಿ: ನಗರದ ಟಿವಿ ಸ್ಟೇಶನ್ ರಸ್ತೆಯಲ್ಲಿ ಕೆಲ ದಿನಗಳ ಹಿಂದೆ ರಸ್ತೆಗಿಂತ ಎತ್ತರಕ್ಕೆ ನಿರ್ಮಿಸಿದ್ದ ಅಡ್ಡ ಚರಂಡಿಯಿಂದ (ಸಿಡಿ) ವಾಹನ ಸಂಚಾರಕ್ಕೆ ಉಂಟಾಗುತ್ತಿದ್ದ ಅಡ್ಡಿ ಸರಿಪಡಿಸಲು ರಸ್ತೆ ಅಗೆಯಲಾಗುತ್ತಿದೆ. ಅಸಮರ್ಪಕ ಕೆಲಸಕ್ಕೆ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ನೀರು ನಿಲ್ಲುವ ಸಮಸ್ಯೆ ತಡೆಗಟ್ಟುವ ಜತೆಗೆ ಚರಂಡಿ ಸಂಪರ್ಕಕ್ಕೆ ಸಿಡಿ ನಿರ್ಮಿಸಲಾಗಿತ್ತು. ಆದರೆ ಇದು ರಸ್ತೆಗಿಂತ ಮುಕ್ಕಾಲು ಅಡಿಯಷ್ಟು ಎತ್ತರವಾಗಿತ್ತು. ಇದರಿಂದ ವಾಹನ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದೆ ಎಂಬ ದೂರು ಸಾರ್ವಜನಿರಿಂದ ನಗರಸಭೆಗೆ ಸಲ್ಲಿಕೆಯಾಗಿತ್ತು.

ಈಗ ಸಿಡಿ ಅಕ್ಕಪಕ್ಕ ತಲಾ ಸುಮಾರು ಐದು ಮೀಟರ್ ಡಾಂಬರು ರಸ್ತೆಯನ್ನು ಕೀಳಲಾಗಿದೆ. ಎರಡು ದಿನಗಳ ಹಿಂದೆಯೆ ಡಾಂಬರು ಕಿತ್ತು ಹಾಕಿದ್ದು ಹಾಗೆಯೆ ಬಿಡಲಾಗಿದೆ. ದ್ವಿಚಕ್ರ ವಾಹನ ಮಾತ್ರ ಸಂಚರಿಸುವ ಸ್ಥಿತಿ ಸದ್ಯ ಇದೆ.

ADVERTISEMENT

‘ಸಿಡಿಯನ್ನು ರಸ್ತೆಗಿಂತ ಎತ್ತರಕ್ಕೆ ನಿರ್ಮಿಸಲಾಗಿದೆ. ಈ ಬಗ್ಗೆ ನಗರಸಭೆಗೆ ತಿಳಿಸಿದ್ದರೂ ಯೋಜನೆಯಂತೆ ಅದು ಸರಿಯಾಗಿದೆ ಎಂದಿದ್ದರು. ಸಂಚಾರಕ್ಕೆ ತೊಂದರೆಯಾಗುತ್ತಿರುವ ಬಗ್ಗೆಯೂ ದೂರು ನೀಡಲಾಗಿತ್ತು. ಈಗ ರಸ್ತೆ ಅಗೆದು ಬಿಡಲಾಗಿದೆ’ ಎಂದು ಸ್ಥಳೀಯರಾದ ಎಂ.ಎಂ.ಭಟ್ ಇತರರು ದೂರಿದರು.

‘ಮಳೆನೀರು ನಿಲ್ಲುವುದನ್ನು ತಡೆಯಲು ಸಿಡಿ ಎತ್ತರಿಸಲಾಗಿದೆ. ಸಂಚಾರಕ್ಕೆ ತೊಂದರೆಯಾಗುತ್ತಿರುವ ಬಗ್ಗೆ ಜನರು ದೂರಿದ್ದರಿಂದ ರಸ್ತೆಯನ್ನೂ ಎತ್ತರಿಸುವ ಕೆಲಸ ಮಾಡಲು ಸೂಚಿಸಿದ್ದೇವೆ’ ಎಂದು ಪೌರಾಯುಕ್ತ ಕೇಶವ ಚೌಗುಲೆ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.