ಶಿರಸಿ: ಮಾರ್ಚ್ ತಿಂಗಳ ಅಂತ್ಯ ಹಾಗೂ ಏಪ್ರಿಲ್ ಮೊದಲ ವಾರದಲ್ಲಿ ಸುರಿದ ಅಕಾಲಿಕ ಮಳೆಯಿಂದಾಗಿ ಮಲೆನಾಡಿನಲ್ಲಿ ಕಾಡ್ಗಿಚ್ಚಿಗೆ ಬಹುತೇಕ ಕಡಿವಾಣ ಬಿದ್ದಿದೆ. ಬಿರು ಬೇಸಿಗೆಯಲ್ಲಿ ಸುರಿದ ಮಳೆಯಿಂದಾಗಿ ಕಾಡಿನಲ್ಲಿ ಹಸಿರು ಚಿಗುರೊಡೆಯುತ್ತಿದೆ.
ಪಶ್ಚಿಮಘಟ್ಟ ಸಾಲಿನ ದೇವಿಮನೆ, ಅರಬೈಲ್, ಕತ್ತಲೆಕಾನು ಪ್ರದೇಶಗಳ ಸುತ್ತಮುತ್ತಲ ನಿತ್ಯಹರಿದ್ವರ್ಣದ ಪ್ರದೇಶವನ್ನು ಹೊರತುಪಡಿಸಿ ಎಲೆ ಉದುರುವ ಕಾಡುಗಳಲ್ಲಿ ಯಾವ ಹೊತ್ತಿನಲ್ಲಾದರೂ ಕಾಡಿಗೆ ಬೆಂಕಿ ತಗಲುವ ಭೀತಿ ಹೆಚ್ಚಿತ್ತು. ಈ ಬಾರಿ ಆಗಾಗ್ಗೆ ಸುರಿದ ಮಳೆ ಕಾಡಿಗೆ ಬೆಂಕಿ ತಗುಲದಂತೆ ತಡೆದಿದೆ. ವಿವಿಧ ಅರಣ್ಯ ಪ್ರದೇಶದಲ್ಲಿ ಎಲೆ ಉದುರುವ ಮರಗಳಲ್ಲಿ ಹೊಸ ಚಿಗುರು ಚಿಮ್ಮುತ್ತಿದೆ. ನೆಲಕ್ಕೆ ಬಿದ್ದ ತರಗೆಲೆ ಬಿಸಿಲಿನ ತೀವ್ರತೆಗೆ ಒಣಗಿ ಬೆಂಕಿ ತಗುಲಿದರೆ ಇಡೀ ಕಾಡು ಸುಟ್ಟು ಕರಕಲಾಗುವ ಭೀಕರ ಪರಿಸ್ಥಿತಿಯನ್ನು ಅಕಾಲಿಕವಾಗಿ ಸುರಿದ ಮಳೆ ತಪ್ಪಿಸಿದೆ.
ಅರಣ್ಯ ಇಲಾಖೆಯು ಸಾರ್ವಜನಿಕರು ಕಾಡನ್ನು ಸಂಪರ್ಕಿಸುವ ರಸ್ತೆ ಮಾರ್ಗದಲ್ಲಿ ಬಿದ್ದಿರುವ ತರಗೆಲೆಗಳನ್ನು ಗುಡಿಸಿ ಬೆಂಕಿ ತಡೆಗಟ್ಟಲು ಅಗ್ನಿ ನಂದಕ ಗೆರೆಗಳನ್ನು (ಫೈರ್ ಲೈನ್) ಆಯಕಟ್ಟಿನ ಪ್ರಮುಖ ಸ್ಥಳಗಳಲ್ಲಿ ನಿರ್ಮಿಸಿತ್ತು. ಕಾಡಿಗೆ ಬೆಂಕಿ ತಗುಲದಂತೆ ಎಚ್ಚರಿಕೆ ಕ್ರಮದ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನವನ್ನೂ ಮಾಡಿತ್ತು. ಆದಾಗ್ಯೂ ಫೆಬ್ರುವರಿ ತಿಂಗಳಲ್ಲಿ ಶಿರಸಿ, ಸಿದ್ದಾಪುರ, ಯಲ್ಲಾಪುರ ತಾಲ್ಲೂಕುಗಳ ಹಲವು ಭಾಗದ ಅರಣ್ಯ ಪ್ರದೇಶದಲ್ಲಿ ಕಾಡ್ಗಿಚ್ಚಿಗೆ ಹಲವು ಸಸ್ಯ ವೈವಿಧ್ಯ ನಾಶವಾಗಿತ್ತು. ಆದರೆ ಮಾರ್ಚ್ ಅಂತ್ಯದಲ್ಲಿ ಸುರಿದ ಮಳೆ, ಏಪ್ರಿಲ್ ತಿಂಗಳಲ್ಲಿನ ಮೋಡ ಕವಿದ ವಾತಾವರಣ ಕಾಡ್ಗಿಚ್ಚನ್ನು ತಡೆಯುವ ಅರಣ್ಯ ಇಲಾಖೆ ಕೆಲಸಕ್ಕೆ ಸ್ವಲ್ಪ ವಿರಾಮ ಹೇಳಿದೆ.
ಕಾಡಿಗೆ ಬೆಂಕಿ ಬೀಳದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಈಗಾಗಲೇ ಅಗ್ನಿ ನಂದಕ ರೇಖೆಗಳನ್ನು ಮಾಡಲಾಗಿದೆ. ಅಕಾಲಿಕ ಮಳೆಯಿಂದಲೂ ಅನುಕೂಲ ಆಗಿದೆಜಿ.ಆರ್.ಅಜ್ಜಯ್ಯ, ಡಿಎಫ್ಒ ಶಿರಸಿ
‘ಮಳೆಗಾಲ ಆರಂಭಕ್ಕೆ ಇನ್ನು ಎರಡು ತಿಂಗಳು ಬಾಕಿ ಇದ್ದು, ಅಲ್ಲಿವರೆಗೆ ಕಾಡಿಗೆ ಬೆಂಕಿ ತಗುಲದಂತೆ ಎಚ್ಚರವಹಿಸುವ ಅಗತ್ಯವಿದೆ. ಈಗಾಗಲೇ ಮಳೆ ಬಿದ್ದ ಪರಿಣಾಮ ಮಲೆನಾಡಿನ ಕಾಡಿನಲ್ಲಿ ಸ್ವಲ್ಪ ತೇವಾಂಶ ಉಳಿದಿದೆ. ಆಗೊಮ್ಮೆ ಈಗೊಮ್ಮೆ ಮಳೆ ಸುರಿಯುತ್ತಿದ್ದರೆ ಕಾಡ್ಗಿಚ್ಚಿಗೆ ಅವಕಾಶ ಇರುವುದಿಲ್ಲ. ಆದರೆ ಮುಂಬರುವ ದಿನಗಳಲ್ಲಿ ಬೇಸಿಗೆ ಬೇಗೆ ಹೇಗಿರಲಿದೆ ಎಂಬುದರ ಮೇಲೆ ಇದು ಅವಲಂಬಿತವಾಗಿದೆ. ಮಳೆ ಬಂದಿದೆ ಎಂಬ ಕಾರಣಕ್ಕೆ ಮೈಮರೆಯುವ ಹಾಗಿಲ್ಲ. ಅರಣ್ಯ ಇಲಾಖೆ ಸದಾ ಜಾಗೃತ ಸ್ಥಿತಿಯಲ್ಲಿಯೇ ಇರಲಿದೆ’ ಎಂದು ಅರಣ್ಯ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದರು.
‘ಕಳೆದ ವರ್ಷ ಬರ ಪರಿಸ್ಥಿತಿಯಿದ್ದ ಕಾರಣ ಕಾಡಿಗೆ ಬೆಂಕಿ ಬೀಳುವ ಪ್ರಕರಣ ಹೆಚ್ಚಿತ್ತು. ಹಲವೆಡೆ ಅಡಿಕೆ ತೋಟ, ಕೊಟ್ಟಿಗೆಗಳು ಬೆಂಕಿಗೆ ಆಹುತಿಯಾಗಿದ್ದವು. ಅರಣ್ಯ ಸಿಬ್ಬಂದಿ, ಅಗ್ನಿಶಾಮಕ ದಳದ ಸಿಬ್ಬಂದಿ ಜತೆ ಸಾರ್ವಜನಿಕರೂ ಬೆಂಕಿ ಆರಿಸಲು ಶ್ರಮಿಸುತ್ತಿದ್ದರು. ಈ ಬಾರಿ ಎರಡು, ಮೂರು ದಿನ ಮಳೆಯಾದ ಕಾರಣ ವಾತಾವರಣದ ಉಷ್ಣಾಂಶವೂ ಕಡಿಮೆಯಾಗಿದೆ. ಇದರಿಂದ ಒಂದೊಮ್ಮೆ ಬೆಂಕಿ ಅವಘಡ ಸಂಭವಿಸಿದರೂ ಕಾಡ್ಗಿಚ್ಚು ಹಬ್ಬುವ ಪ್ರಮಾಣ ತೀವ್ರ ಇಳಿಯುವ ಸಾಧ್ಯತೆಯಿದೆ’ ಎನ್ನುತ್ತಾರೆ ಅವರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.