ADVERTISEMENT

ಮಲೆನಾಡಲ್ಲಿ ಪತ್ರೊಡೆ ಘಮಲು: ಔಷಧೀಯ ಗುಣವನ್ನೂ ಹೊಂದಿದೆ

ಮಳೆಗಾಲದ ಪ್ರಸಿದ್ಧ ಖಾದ್ಯ

​ಪ್ರಜಾವಾಣಿ ವಾರ್ತೆ
Published 16 ಜುಲೈ 2019, 9:14 IST
Last Updated 16 ಜುಲೈ 2019, 9:14 IST
ಮಸಾಲಕ್ಕೆ ಬೆರೆಸುವ ಮೊದಲು ಬೇಯಿಸಿದ ಹಿಟ್ಟು ಹಾಗೂ ಪತ್ರೊಡೆ ಖಾದ್ಯ
ಮಸಾಲಕ್ಕೆ ಬೆರೆಸುವ ಮೊದಲು ಬೇಯಿಸಿದ ಹಿಟ್ಟು ಹಾಗೂ ಪತ್ರೊಡೆ ಖಾದ್ಯ    

ಕೊಟ್ಟಿಗೆಹಾರ: ಮಳೆಗಾಲ ಬಂತೆಂದರೆ ಮಲೆನಾಡಿನಲ್ಲಿ ನೆನಪಾಗುವುದು ಆಟಿ (ಆಷಾಢ) ತಿಂಗಳ ವಿಶೇಷ ಆಚರಣೆ, ಬಗೆಬಗೆಯ ಖಾದ್ಯಗಳು. ಮಳೆಗಾಲದಲ್ಲಿ ವಾತಾವರಣ ಶೀತಗೊಳ್ಳುವುದರಿಂದ ದೇಹವನ್ನು ಬೆಚ್ಚಗಿರಿಸಲು ಬಹುತೇಕರ ಮನೆಗಳಲ್ಲಿ ಪತ್ರೊಡೆ ಘಮ ಘಮಿಸುತ್ತದೆ.

ಮಲೆನಾಡಿನ ಕಾಫಿ ತೋಟ ಮತ್ತಿತರ ಕಡೆಯ ಮರಗಳಲ್ಲಿ ಮರ ಕೆಸ ಹುಟ್ಟುತ್ತದೆ. ಅದರ ಎಲೆಯು ನಾಟಿ ಕೆಸವಿನ ಎಲೆಗಿಂತ ಸ್ವಲ್ಪ ದಪ್ಪವಾಗಿದ್ದು, ಪತ್ರೊಡೆಗಾಗಿಯೇ ಈ ಎಲೆಯನ್ನು ಬಳಸುತ್ತಾರೆ.

ಇನ್ನು ಕರಾವಳಿ ಭಾಗದ ಜನರಿಗೆ ಈ ಸಮಯದಲ್ಲಿ ಮಲೆನಾಡಿನಿಂದ ಮರಕೆಸುವಿನ ಎಲೆಗಳನ್ನು ಲೋಡ್‌ಗಟ್ಟಲೇ ವಾಹನದಲ್ಲಿ ಸಾಗಿಸಿ ಅಂಗಡಿಗಳಲ್ಲಿಮಾರಾಟ ಮಾಡುತ್ತಾರೆ. ಕರಾವಳಿಯಲ್ಲಿ ಪತ್ರೊಡೆ ತಿನ್ನುವ ಪದ್ಧತಿಯಿದೆ. ಮಲೆನಾಡು ಕೂಡ ಕರಾವಳಿಯ ಗಡಿ ಭಾಗವಾಗಿರುವುದರಿಂದ ಪತ್ರೊಡೆ ಖಾದ್ಯ ಇಲ್ಲೂ ವರ್ಷಕ್ಕೊಮ್ಮೆ ಸವಿಯಲಾಗುತ್ತದೆ.

ADVERTISEMENT

ಪತ್ರೊಡೆ ತಿಂಡಿಯನ್ನು ಮನೆಯಲ್ಲೇ ಮಾಡಿ ತಿನ್ನಬಹುದು. ಏಕೆಂದರೆ ಮಲೆನಾಡಿನಲ್ಲಿ ಹೇರಳವಾಗಿ ಮರಕೆಸವು ಎಲೆ ಸಿಗುತ್ತದೆ. ಮಾಡುವ ಕ್ರಮ ಗೊತ್ತಿದ್ದರೆ ಪತ್ರೊಡೆ ತಿಂಡಿ ಮನೆಯಲ್ಲೇ ಮಾಡಿ ಕುಟುಂಬದೊಂದಿಗೆ ಬೆಳಗ್ಗಿನ ಉಪಾಹಾರಕ್ಕೂ ಅಥವಾ ಸಂಜೆಯ ಕಾಫಿ, ಟೀಯೊಂದಿಗೂ ಸೇವಿಸುತ್ತಾರೆ.

ಈ ಪತ್ರೊಡೆಯಲ್ಲಿ ಔಷಧೀಯ ಗುಣವೂ ಅಡಗಿದೆ.

ಹೊಟ್ಟೆಯಲ್ಲಿ ಕೂದಲಿನಂತಹ ವಸ್ತುಗಳಿದ್ದರೂ ದೇಹದಿಂದ ಹೊರಕ್ಕೆ ಹಾಕುವ ಶಕ್ತಿ ಮರಕೆಸವಿಗೆ ಇದೆ. ಮಳೆಗಾಲದಲ್ಲಿ ತಂಪು ವಾತಾವರಣದಲ್ಲಿ ಮೈ ಬೆಚ್ಚಗೆ ಮಾಡುವ ಶಕ್ತಿ ಈ ಪತ್ರೊಡೆಗೆ ಇದೆ.

ಮರ ಕೆಸುವಿನ ಎಲೆ ಹಾಗೂ ಮರ ಕೆಸುವಿನ ಎಲೆಯನ್ನು ಕತ್ತರಿಸಿರುವುದು

ಪತ್ರೊಡೆ ಮಾಡುವ ವಿಧಾನ: ಮರಕೆಸವಿನ ಎಲೆಗಳನ್ನು ತೊಳೆದು ಸಣ್ಣಕ್ಕೆ ಕೊಯ್ದು ಇಟ್ಟುಕೊಳ್ಳಬೇಕು. ಅದಕ್ಕೆ ಬೇಕಾಗುವಷ್ಟು ಬೆಳ್ತಕ್ಕಿ ಹಾಗೂ ಕುಸಲು ಅಕ್ಕಿಯನ್ನು ಕನಿಷ್ಠ ಮೂರು ಗಂಟೆಯಾದರೂ ನೀರಿನಲ್ಲಿ ನೆನೆಸಬೇಕು. ಬಳಿಕ ಅಕ್ಕಿಯ ಜತೆಗೆ ಉದ್ದಿನ ಬೇಳೆ, ಮೆಂತೆ, ಕೊತ್ತಂಬರಿ, ಸ್ವಲ್ಪ ಜೀರಿಗೆ, ಸ್ವಲ್ಪ ಹುಣಸೆಹುಳಿ, ಅರಶಿಣ ಪುಡಿ, ಬೇಕಾದರೆ ಸ್ವಲ್ಪ ಇಂಗು, ಒಣಮೆಣಸು, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ರುಬ್ಬಬೇಕು. ನಂತರ ಆ ಹಿಟ್ಟಿಗೆ ಕೆಸವಿನ ಎಲೆಯನ್ನು ಮಿಶ್ರಣ ಮಾಡಿ, ಬಾಳೆ ಎಲೆಯಲ್ಲಿ ಹಾಕಿ ಇಡ್ಲಿ ಮಾಡುವ ಪಾತ್ರೆಯಲ್ಲಿ ಬೇಯಲು ಬಿಡಬೇಕು. ನಂತರ ಒಣಮೆಣಸು, ಕೊತ್ತಂಬರಿ, ಜೀರಿಗೆ, ಕಾಯಿ ತುರಿ, ಹುಣಸೆಹುಳಿ, ಈರುಳ್ಳಿ, ಬೆಳ್ಳುಳ್ಳಿ, ಚಿಟಿಕೆಯಷ್ಟು ಸಾಸಿವೆ ಸೇರಿಸಿ ಸ್ವಲ್ಪ ಕರಿದು, ರುಬ್ಬಿ ಮಸಾಲೆ ತಯಾರಿಸಬೇಕು. ಅದನ್ನು ಬಿಸಿ ಮಾಡಿದ ಮೇಲೆ, ಬೆಂದ ಹಿಟ್ಟನ್ನು ಚಿಕ್ಕದಾಗಿ ಕತ್ತರಿಸಿ ಹಾಕಬೇಕು. ಸ್ವಲ್ಪ ಹೊತ್ತು ಹಬೆಯಲ್ಲಿ ಬೇಯಿಸಿದರೆ ಪತ್ರೊಡೆ ಸಿದ್ಧ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.