ಮುಂಡಗೋಡ: ‘ದಲೈಲಾಮಾ ಅವರು ಕೇವಲ ಟಿಬೇಟಿಯನ್ ಧಾರ್ಮಿಕ ನಾಯಕರಾಗಿ ಗುರುತಿಸಿಕೊಂಡಿಲ್ಲ. ಜಗತ್ತಿನ ಶಾಂತಿದೂತರಾಗಿ ಹೆಚ್ಚು ಪ್ರಭಾವಿತರಾಗಿದ್ದಾರೆ. ಅಹಿಂಸೆ, ಕರುಣೆಯ ಸಾಕಾರಮೂರ್ತಿಯಾಗಿ, ಜಗತ್ತಿನಾದ್ಯಂತ ಕೋಟ್ಯಾಂತರ ಅನುಯಾಯಿಗಳನ್ನು ಹೊಂದಿದ್ದಾರೆ. ಇನ್ನಷ್ಟು ವರ್ಷ ದಲೈಲಾಮಾ ಆರೋಗ್ಯದಿಂದ ಜೀವನ ನಡೆಸಲಿ’ ಎಂದು ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ಹೇಳಿದರು.
ತಾಲ್ಲೂಕಿನ ಟಿಬೆಟಿಯನ್ ಕ್ಯಾಂಪ್ ನಂ.3ರ ಕಮ್ಯುನಿಟಿ ಹಾಲ್‌ನಲ್ಲಿ ಭಾನುವಾರ ನಡೆದ ದಲೈಲಾಮಾ ಅವರ 90ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಮಾನವೀಯ ಮೌಲ್ಯಗಳ ಕುರಿತು ಹೆಚ್ಚು ಒತ್ತು ನೀಡುತ್ತಿರುವ ದಲೈಲಾಮಾ ಅವರ ವಿಚಾರಗಳನ್ನು, ಜಗತ್ತು ಒಪ್ಪಿಕೊಳ್ಳುತ್ತಿರುವುದು ಸಂತಸದ ವಿಚಾರ. ಅಹಿಂಸೆ ಹಾಗೂ ಶಾಂತಿಯುತ ಹೋರಾಟದ ಮೂಲಕ ಜಗತ್ತಿನ ಗಮನ ಸೆಳೆದಿರುವ ದಲೈಲಾಮಾ ಅವರು, ಮಾನವೀಯತೆಗೆ ಜೀವಂತ ಸಾಕ್ಷಿಯಾಗಿದ್ದಾರೆ. ಉತ್ತರ ಕನ್ನಡ ಜಿಲ್ಲೆಯು ವಿಶಿಷ್ಟ ಭೌಗೋಳಿಕ ಪ್ರದೇಶವನ್ನು ಹೊಂದಿದ್ದು, ಅತಿ ದೊಡ್ಡ ಕದಂಬ ನೌಕಾನೆಲೆ, ಕೈಗಾ ಅಣುಸ್ಥಾವರ, ಕರಾವಳಿ ತೀರ ಹೊಂದಿ ಕಲೆ ಮತ್ತು ಸಂಸ್ಕೃತಿಯಿಂದ ಸಂಪದ್ಭರಿತವಾಗಿದೆ. ಟಿಬೇಟಿಯನ್ ಕ್ಯಾಂಪ್‌ನಲ್ಲಿ ಮೂಲಸೌಕರ್ಯಗಳು ಸೇರಿದಂತೆ ಇನ್ನಿತರ ಕೆಲಸ ಕಾರ್ಯಗಳನ್ನು ಜಿಲ್ಲಾಡಳಿತವು ಮಾಡಲು ಉತ್ಸುಕವಾಗಿದೆ’ ಎಂದರು.
ಶಾಸಕ ಶಿವರಾಮ ಹೆಬ್ಬಾರ ಮಾತನಾಡಿ, ‘ದಲೈಲಾಮಾ ಅವರ ಸಂದೇಶಗಳನ್ನು ಅಳವಡಿಸಿಕೊಳ್ಳಬೇಕು. ದಲೈಲಾಮಾ ಆಶೀರ್ವಾದದಿಂದ ನಾಲ್ಕು ಬಾರಿ ಶಾಸಕ, ಮಂತ್ರಿಯಾಗಿದ್ದೇನೆ. ಜಗತ್ತಿನ ಶಾಂತಿದೂತನ ಆಶೀರ್ವಾದವು ಎಲ್ಲರಿಗೂ ಸಿಗಬೇಕು. ತಾಲ್ಲೂಕಿನ ಟಿಬೇಟಿಯನ್ ಕ್ಯಾಂಪ್‌ಗಳಿಗೆ ದಲೈಲಾಮಾ ಭೇಟಿ ನೀಡಿದಾಗ, ಅವರ ಆಶೀರ್ವಾದ ಪಡೆಯುತ್ತಿದ್ದೆ. ಟಿಬೇಟಿಯನ್ ಜನರು ಎಲ್ಲರೊಳಗೆ ಒಂದಾಗಿ ಜೀವನ ನಡೆಸುತ್ತಿದ್ದು, ಅವರ ಬೇಡಿಕೆಗಳನ್ನು ಶಾಸಕನಾಗಿ ಈಡೇರಿಸಲು ಪ್ರಯತ್ನಿಸುತ್ತೇನೆ’ ಎಂದು ತಿಳಿಸಿದರು.
ಡೊಗುಲಿಂಗ್ ಸೆಟ್ಲಮೆಂಟ್ ಸೊಸೈಟಿಯ ಚೇರ್‌ಮನ್ ವಾಂಗ್ಮೋ ಮಾತನಾಡಿ, ಟಿಬೇಟಿಯನ್ ಧಾರ್ಮಿಕ ನಾಯಕ ಹಾಗೂ ಮಾರ್ಗದರ್ಶಕ ದಲೈಲಾಮಾ ಅವರ ಧೀರ್ಘಾಯುಷ್ಯಕ್ಕಾಗಿ ಬೌದ್ಧ ಮಂದಿರಗಳಲ್ಲಿ ವಿಶೇಷ ಪ್ರಾರ್ಥನೆ, ಪೂಜೆ ನಿರಂತರವಾಗಿ ನಡೆಯುತ್ತಿದೆ. ದಲೈಲಾಮಾ ಅವರ ಜನ್ಮದಿನಾಚರಣೆ ಅಂಗವಾಗಿ ವರ್ಷಪೂರ್ತಿ ‘ಸಹಾನುಭೂತಿಯ ವರ್ಷ’ ಎಂದು ಆಚರಿಸಲು ಟಿಬೇಟಿಯನ್ ಕೇಂದ್ರೀಯ ಆಡಳಿತ ನಿರ್ಧರಿಸಿದೆ ಎಂದರು.
ಟಿಬೇಟಿಯನ್ ಜನರಿಂದ, ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ತಹಶೀಲ್ದಾರ್ ಶಂಕರ ಗೌಡಿ, ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಎಸ್.ಫಕ್ಕೀರಪ್ಪ, ಜಂಪಾ ಲೋಬ್ಸಂಗ್, ಇಂಡೋ ಟಿಬೇಟಿಯನ್ ಪದಾಧಿಕಾರಿಗಳು, ಬೌದ್ಧ ಮುಖಂಡರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.