ADVERTISEMENT

ಹದಗೆಟ್ಟ ಹೆಬಳೆ–ಶೇಡಬರಿ ರಸ್ತೆ: ಶಾಲೆ, ದೇವಸ್ಥಾನಕ್ಕೆ ಸಾಗುವ ಮಾರ್ಗದಲ್ಲಿ ಅಡಚಣೆ

ಮೋಹನ ನಾಯ್ಕ
Published 27 ಆಗಸ್ಟ್ 2023, 6:53 IST
Last Updated 27 ಆಗಸ್ಟ್ 2023, 6:53 IST
ಸಂಪೂರ್ಣ ಡಾಂಬರು ಕಿತ್ತು ಹೋಗಿ ಹೊಂಡಮಯವಾದ ಹೆಬಳೆ– ಶೇಡಬರಿ ರಸ್ತೆಯ ದೃಶ್ಯ
ಸಂಪೂರ್ಣ ಡಾಂಬರು ಕಿತ್ತು ಹೋಗಿ ಹೊಂಡಮಯವಾದ ಹೆಬಳೆ– ಶೇಡಬರಿ ರಸ್ತೆಯ ದೃಶ್ಯ   

ಭಟ್ಕಳ: ತಾಲ್ಲೂಕಿನ ಹೆಬಳೆಯಿಂದ ಶೇಡಬರಿಗೆ ಸಂಪರ್ಕಿಸುವ ರಸ್ತೆ ಕಳೆದ ಹಲವು ತಿಂಗಳಗಳಿಂದ ಸಂಪೂರ್ಣ ಹದಗೆಟ್ಟು ಹೋಗಿದ್ದು, ಜನರು ಸಂಚಾರಕ್ಕೆ ಪರದಾಡುವ ಸ್ಥಿತಿ ಉಂಟಾಗಿದೆ. ರಸ್ತೆ ಹದಗೆಟ್ಟಿದ್ದರೂ ದುರಸ್ತಿಗೆ ಮುಂದಾಗದ್ದಕ್ಕೆ ಜನರು ಅಸಮಾಧಾನ ವ್ಯಕ್ತಪಡಿಸತೊಡಗಿದ್ದಾರೆ.

ಹೆಬಳೆ ಕ್ರಾಸ್‍ನಿಂದ ಪುರಾಣ ಪ್ರಸಿದ್ಧ ಶೇಡಬರಿ ದೇವಸ್ಥಾನದವರೆಗಿನ ಸುಮಾರು ಒಂದೂವರೆ ಕಿ.ಮೀ. ಉದ್ದದ ರಸ್ತೆಯ ಡಾಂಬರು ಸಂಪೂರ್ಣ ಕಿತ್ತುಹೋಗಿದ್ದು, ಹೊಂಡಮಯವಾಗಿ ಮಾರ್ಪಟ್ಟಿದೆ. ಕಿತ್ತೂರ ರಾಣಿ ಚನ್ನಮ್ಮ ಹಾಗೂ ಮೊರಾರ್ಜಿ ವಸತಿ ಶಾಲೆ ಕೂಡ ಇದೇ ಮಾರ್ಗದಲ್ಲಿದೆ.

‘ಪ್ರತಿನಿತ್ಯವೂ ನೂರಾರು ಜನರು ಸಂಚರಿಸುವ ರಸ್ತೆಯಲ್ಲಿ ಹೊಂಡಗಳೆ ತುಂಬಿವೆ. ಹೊಂಡಗಳನ್ನು ತಪ್ಪಿಸಿ ಸಾಗಲು ವಾಹನ ಸವಾರರು ಹರಸಾಹಸ ಮಾಡುವ ದೃಶ್ಯ ಈ ಮಾರ್ಗದಲ್ಲಿ ಸಾಗವವರಿಗೆ ಕಾಣಿಸುತ್ತದೆ. ಹೊಂಡ ತಪ್ಪಿಸಲು ಹೋಗಿ ಸವಾರರು ಬಿದ್ದು ಗಾಯಗೊಂಡ ಘಟನೆಯೂ ನಡೆದಿದೆ’ ಎನ್ನುತ್ತಾರೆ ಹೆಬಳೆಯ ಗ್ರಾಮಸ್ಥರೊಬ್ಬರು.

ADVERTISEMENT

‘ವಸತಿ ಶಾಲೆಗಳಲ್ಲಿ ಜಿಲ್ಲೆಯ ಬೇರೆ ಬೇರೆ ತಾಲ್ಲೂಕಿನ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಮಕ್ಕಳನ್ನು ಭೇಟಿ ಮಾಡಲು ಬಸ್ಸಿನಲ್ಲಿ ಬರುವ ಪಾಲಕರು ವಸತಿ ಶಾಲೆಗೆ ಸಾಗಲು ರಿಕ್ಷಾದವರನ್ನು ಕೇಳಿದರೆ ರಸ್ತೆ ದುಸ್ಥಿತಿಯಿಂದಾಗಿ ರಿಕ್ಷಾ ಚಾಲಕರು ಬರಲು ಮನಸ್ಸು ಮಾಡುತ್ತಿಲ್ಲ. ಹೀಗಾಗಿ ಕೆ ಪಾಲಕರು ಕಾಲ್ನಡಿಗೆಯಲ್ಲಿಯೇ ಸಾಗುತ್ತಾರೆ’ ಎಂದು ಸ್ಥಳೀಯ ವಿನಾಯಕ ನಾಯ್ಕ ದೂರಿದರು.

‘ವಸತಿ ಶಾಲೆ ನಿರ್ಮಾಣದ ವೇಳೆ ದೊಡ್ಡ ವಾಹನಗಳು ತಿರುಗಾಡಿ ರಸ್ತೆಯ ಡಾಂಬರು ಕಿತ್ತು ಹೋಗಿ ರಸ್ತೆ ಸಂಪೂರ್ಣ ಹಾಳಾಗಿ ಹೋಗಿದೆ. ಈ ಬಗ್ಗೆ ಹಲವು ಬಾರಿ  ಪಂಚಾಯತರಾಜ್ ಎಂಜಿನಿಯರಿಂಗ್ ಇಲಾಖೆಗೆ ದೂರಿದರೂ ಸ್ಪಂದಿಸಿಲ್ಲ’ ಎಂದೂ ಅವರು ಆರೋಪಿಸಿದರು.

ಸಂಪೂರ್ಣ ಡಾಂಬರು ಕಿತ್ತು ಹೋಗಿ ಹೊಂಡಮಯವಾದ ಹೆಬಳೆ ಶೇಡಬರಿ ರಸ್ತೆಯ ದೃಶ್ಯ
ಹೆಬಳೆ–ಶೇಡಬರಿ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ವಿಶೇಷ ಅನುದಾಡಿ ರಸ್ತೆ ಡಾಂಬರೀಕರಣಕ್ಕೆ ಕ್ರಿಯಾ ಯೋಜನೆ ಸಿದ್ದಪಡಿಸಲಾಗುವುದು.
ಬಸವರಾಜ್ ಬಳ್ಳಾರಿ ಪಿ.ಆರ್.ಇ.ಡಿ ಎಂಜಿನಿಯರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.