ಕಾರವಾರ: ಕಳೆದ ಎರಡು ತಿಂಗಳಿಂದ ಬೇಸಿಗೆ ರಜೆಯ ಕಾರಣಕ್ಕೆ ಮುಚ್ಚಿದ್ದ ಪ್ರಾಥಮಿಕ ಶಾಲೆ, ಪ್ರೌಢಶಾಲೆಗಳು ಗುರುವಾರ ಪುನರಾರಂಭಗೊಳ್ಳುವುದರೊಂದಿಗೆ 2025–26ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಚಾಲನೆ ದೊರೆಯಲಿದೆ. ಇದಕ್ಕಾಗಿ ಸಿದ್ಧತೆ ಭರದಿಂದ ಸಾಗಿದ್ದು, ಶಾಲೆಗಳಿಗೆ ಪಠ್ಯಪುಸ್ತಕಗಳು ರವಾನೆಯಾಗುತ್ತಿವೆ.
ಉತ್ತರ ಕನ್ನಡ ಮತ್ತು ಶಿರಸಿ ಶೈಕ್ಷಣಿಕ ಜಿಲ್ಲೆಯನ್ನು ಒಳಗೊಂಡ ಜಿಲ್ಲೆಯಲ್ಲಿ ಕ್ರಮವಾಗಿ ಶೇ 79.09 ಮತ್ತು ಶೇ 71.68ರಷ್ಟು ಪಠ್ಯಪುಸ್ತಕಗಳು ಪೂರೈಕೆ ಆಗಿವೆ. ಆಯಾ ತಾಲ್ಲೂಕುವಾರು ಪೂರೈಕೆ ಮಾಡಲಾಗಿದ್ದು, ಬಿಇಒ ಕಚೇರಿಗಳಿಗೆ ಬಂದ ಪುಸ್ತಕ ದಾಸ್ತಾನನ್ನು ವಲಯ ಸಂಪನ್ಮೂಲ ವ್ಯಕ್ತಿಗಳ (ಸಿಆರ್‌ಪಿ) ಮುಖಾಂತರ ಶಾಲೆಗಳಿಗೆ ರವಾನೆ ಮಾಡುವ ಕೆಲಸ ಪ್ರಗತಿಯಲ್ಲಿದೆ. ಕಳೆದ ಬಾರಿ ಶಾಲೆ ಆರಮಭಕ್ಕೆ ಮುನ್ನವೇ ಸಮವಸ್ತ್ರ ಪೂರೈಕೆ ಆಗಿತ್ತು. ಈ ಬಾರಿ ಇದುವರೆಗೆ ಪೂರೈಕೆ ಆಗಿಲ್ಲ ಎಂಬುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ನಿಗದಿತ ಅವಧಿಗೆ ಮುನ್ನವೇ ಬಿರುಸಿನ ಮಳೆ ಆರಂಭಗೊಂಡಿರುವುದು ಪುಸ್ತಕಗಳ ರವಾನೆಗೆ ಅಡ್ಡಿಯಾಗುತ್ತಿದೆ. ಮಳೆಗೆ ಸೋರಿಕೆಯಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಶಾಲೆಗಳಲ್ಲಿ ಅವುಗಳನ್ನು ದಾಸ್ತಾನಿಡಲು ಸಮಸ್ಯೆ ಆಗುತ್ತಿದೆ ಎಂದು ತಾಲ್ಲೂಕಿನ ಗ್ರಾಮೀಣ ಭಾಗದ ಶಾಲೆಯ ಶಿಕ್ಷಕರೊಬ್ಬರು ಸಮಸ್ಯೆ ಹೇಳಿಕೊಂಡರು.
ಏ.9ರಂದು ಆರಂಭಗೊಂಡಿದ್ದ ಬೇಸಿಗೆ ರಜೆ ಬಳಿಕ ಶಾಲೆಗಳು ತೆರೆಯಲು ಸಜ್ಜುಗೊಳಿಸುವ ಕೆಲಸ ಗುರುವಾರ ನಡೆಯಲಿದೆ. ಮೊದಲ ದಿನ ಕೇವಲ ವಿದ್ಯಾರ್ಥಿಗಳನ್ನು ಸ್ವಾಗತಿಸಿಕೊಂಡು ಬಳಿಕ ಸ್ವಚ್ಛತೆ ಕೆಲಸ ನಡೆಯಲಿದೆ. ವಿದ್ಯಾರ್ಥಿಗಳಿಗೆ ಸಿಹಿಯೂಟ, ಹಾಲು ವಿತರಣೆ ನಡೆಯಲಿರುವ ಕಾರಣದಿಂದ ಅಕ್ಷರ ದಾಸೋಹ ಸಿಬ್ಬಂದಿ ಬುಧವಾರವೇ ಶಾಲೆಯ ಬಿಸಿಯೂಟದ ಕೊಠಡಿಗಳನ್ನು ಸ್ವಚ್ಛಗೊಳಿಸುವ ಕೆಲಸ ಮಾಡಿದ್ದಾರೆ ಎಂಬುದಾಗಿ ಶಿಕ್ಷಣ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
‘ಮೇ 30 ರಂದು ಶಾಲಾ ಪ್ರಾರಂಭೋತ್ಸವ ನಡೆಯಲಿದ್ದು, ಅದೇ ದಿನ ಪಠ್ಯಪುಸ್ತಕಗಳ ಪೂರೈಕೆ ಮಾಡಲಾಗುತ್ತಿದೆ. ಈ ಬಾರಿ ಪೂರ್ಣ ಪ್ರಮಾಣದಲ್ಲಿ ಪುಸ್ತಕ ಪೂರೈಕೆ ಆಗಿಲ್ಲ. ಆದರೆ, ಬಹುಪಾಲು ಪುಸ್ತಕಗಳು ಬಂದಿವೆ. ಅವುಗಳನ್ನು ವಿದ್ಯಾರ್ಥಿಗಳಿಗೆ ನೀಡಲಾಗುವುದು. ಉಳಿದ ಪುಸ್ತಕಗಳು ಒಂದೆರಡು ವಾರದೊಳಗೆ ಬರಲಿದೆ’ ಎಂದು ಕಾರವಾರ ಡಿಡಿಪಿಐ ಲತಾ ನಾಯಕ ತಿಳಿಸಿದ್ದಾರೆ.
ಶಾಲೆಗಳ ಪ್ರಾರಂಭೋತ್ಸವ ಅದ್ದೂರಿಯಾಗಿ ನಡೆಸಲು ಸೂಚಿಸಲಾಗಿದೆ. ತೋರಣ ಅಲಂಕಾರ ಮಾಡಿ ವಿದ್ಯಾರ್ಥಿಗಳನ್ನು ಸ್ವಾಗತಿಸಿಕೊಳ್ಳಲಾಗುತ್ತದೆಪಿ.ಬಸವರಾಜ್ ಶಿರಸಿ ಡಿಡಿಪಿಐ
ಪ್ರಾರಂಭೋತ್ಸವದ ವೇಳೆಯಲ್ಲೇ ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ವಿತರಿಸಲಾಗುತ್ತದೆ. ಸಮವಸ್ತ್ರ ಪೂರೈಕೆಯಾಗಲು ಇನ್ನಷ್ಟು ಸಮಯಾವಕಾಶ ಆಗಬಹುದುಲತಾ ನಾಯಕ ಕಾರವಾರ ಡಿಡಿಪಿಐ
ಸರ್ಕಾರಿ ಅನುದಾನಿತ ಶಾಲೆಗಳಿಗೆ ಉಚಿತವಾಗಿ ಸರ್ಕಾರ ಪಠ್ಯಪುಸ್ತಕ ಪೂರೈಕೆ ಮಾಡುತ್ತಿದೆ. ಆದರೆ ಅನುದಾನ ರಹಿತ (ಖಾಸಗಿ) ಶಾಲೆಗಳಿಗೆ ನಿಗದಿತ ದರಕ್ಕೆ ಪುಸ್ತಕಗಳು ಮಾರಾಟವಾಗಲಿವೆ. ಖಾಸಗಿ ಶಾಲೆಗಳು ತಮಗೆ ಅಗತ್ಯವಿರುವ ಪುಸ್ತಕಗಳ ಬೇಡಿಕೆ ಪಟ್ಟಿಯನ್ನು ಮುಂಚಿತವಾಗಿ ಸಲ್ಲಿಸಿ ಶೇ 10ರಷ್ಟು ಮೊತ್ತ ಮುಂಗಡ ಮೊತ್ತ ಪಾವತಿಸಿದ ಬಳಿಕವೇ ಪುಸ್ತಕಗಳ ಪೂರೈಕೆ ಆಗುತ್ತಿವೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ತಳಿಸಿದ್ದಾರೆ. ‘ಪಠ್ಯಪುಸ್ತಕಗಳ ಪೂರೈಕೆಯ ಜವಾಬ್ದಾರಿಯನ್ನು ಟೆಂಡರ್ ಮೂಲಕ ಖಾಸಗಿ ಸಂಸ್ಥೆಗಳಿಗೆ ವಹಿಸಲಾಗಿದೆ. ಅವರೇ ಬೇಡಿಕೆ ಪಟ್ಟಿ ಆಧರಿಸಿ ಪುಸ್ತಕಗಳನ್ನು ಪೂರೈಸುತ್ತಿದ್ದಾರೆ. ಸರ್ಕಾರಿ ಅನುದಾನಿತ ಶಾಲೆಗಳಿಗಿಂತ ಖಾಸಗಿ ಶಾಲೆಗಳಿಗೆ ಬೇಡಿಕೆಯಷ್ಟು ಪುಸ್ತಕ ಪೂರೈಸಲು ಆದ್ಯತೆ ನೀಡಲಾಗುತ್ತಿದೆ’ ಎಂದು ಶಿಕ್ಷಕರೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.