ADVERTISEMENT

ಉತ್ತರ ಕನ್ನಡ | 508 ವೃದ್ಧರಿಗೆ ಪಿಂಚಣಿ ಸ್ಥಗಿತ

ಸರ್ಕಾರದ ನಿಯಮಾವಳಿ ಮೀರಿ ಸೌಲಭ್ಯ ಪಡೆದ ಆರೋಪ: ಪರಿಶೀಲನೆಯಲ್ಲಿ ದೃಢ

ಗಣಪತಿ ಹೆಗಡೆ
Published 27 ಫೆಬ್ರುವರಿ 2026, 7:47 IST
Last Updated 27 ಫೆಬ್ರುವರಿ 2026, 7:47 IST
   

ಕಾರವಾರ: ಗ್ಯಾರಂಟಿ ಯೋಜನೆ ಫಲಾನುಭವಿಗಳ ಪೈಕಿ ಯೋಜನೆ ಸೌಲಭ್ಯ ಪಡೆಯಲು ಅರ್ಹರಲ್ಲದವರನ್ನು ಹುಡುಕಾಡುತ್ತಿರುವ ಸರ್ಕಾರ, ಸದ್ಯ ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಯಲ್ಲೂ ಅಂತದ್ದೇ ಅನ್ವೇಷಣೆ ನಡೆಸಿದೆ. ಯೋಜನೆಗೆ ಅರ್ಹರಲ್ಲದ 508 ಮಂದಿ ವೃದ್ಧರಿಗೆ ಪಿಂಚಣಿ ಸ್ಥಗಿತಗೊಳಿಸಲಾಗಿದೆ.

ವೃದ್ಧಾಪ್ಯ ಯೋಜನೆ ಪಡೆಯುತ್ತಿದ್ದ 236 ಮಂದಿ, ಸಂಧ್ಯಾ ಸುರಕ್ಷಾ ಯೋಜನೆ ಲಾಭ ಪಡೆಯುತ್ತಿದ್ದ 272 ಮಂದಿಯನ್ನು ಪಟ್ಟಿಯಿಂದ ಹೊರಗಿಡಲಾಗಿದೆ. ಅವರಿಗೆ ಮಾಸಿಕವಾಗಿ ಸಂದಾಯವಾಗುತ್ತಿದ್ದ ಪಿಂಚಣಿ ಮೊತ್ತ ಸ್ಥಗಿತಗೊಳಿಸಲಾಗಿದೆ ಎನ್ನುತ್ತಾರೆ ಸಾಮಾಜಿಕ ಭದ್ರತೆ ಮತ್ತು ಪಿಂಚಣಿ ಯೋಜನೆ ವಿಭಾಗದ ಅಧಿಕಾರಿಗಳು.

ಇಂದಿರಾ ಗಾಂಧಿ ರಾಷ್ಟ್ರೀಯ ಪಿಂಚಣಿ ಯೋಜನೆಯಡಿ 60 ವರ್ಷ ಮೇಲ್ಪಟ್ಟ ಹಾಗೂ 64 ವರ್ಷದವರೆಗಿನ ವೃದ್ಧರಿಗೆ ಮಾಸಿಕ ₹800 ನೇರವಾಗಿ ಬ್ಯಾಂಕ್ ಖಾತೆಗೆ ಪಾವತಿಸಲಾಗುತ್ತಿದೆ. 65 ವರ್ಷ ಮೇಲ್ಪಟ್ಟವರಿಗೆ ಮಾಸಿಕ ₹1,200 ಖಾತೆಗೆ ಸಂದಾಯವಾಗುತ್ತಿದೆ.

ADVERTISEMENT

‘ಈ ಯೋಜನೆಗಳ ಸೌಲಭ್ಯ ಪಡೆಯುವವರು ಬಡತನ ರೇಖೆಗಿಂತ ಕೆಳಗೆ ವಾಸಿಸುವ ಕುಟುಂಬದವರಾಗಿರಬೇಕು ಹಾಗೂ ವಾರ್ಷಿಕ ₹32 ಸಾವಿರಕ್ಕಿಂತ ಕಡಿಮೆ ಆದಾಯ ಹೊಂದಿರಬೇಕು ಎಂಬುದಾಗಿ ನಿಯಮವಿದೆ. ಈ ನಿಯಮಗಳ ಹೊರತಾಗಿರುವವರನ್ನು ಯೋಜನೆ ವ್ಯಾಪ್ತಿಗೆ ಸೇರಿಸಲು ಆಗದು’ ಎಂದು ಅಧಿಕಾರಿಗಳು ಹೇಳಿದ್ದಾರೆ.

‘ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿ ಪಿಂಚಣಿ ಸೌಲಭ್ಯ ಪಡೆಯುತ್ತಿರುವವರ ಬಗ್ಗೆ ತಂತ್ರಾಂಶದ ಮೂಲಕ ಮಾಹಿತಿ ಪಡೆದು ಕೇಂದ್ರದ ಸಾಮಾಜಿಕ ಭದ್ರತಾ ಮತ್ತು ಪಿಂಚಣಿ ಯೋಜನೆಯ ತಾಂತ್ರಿಕ ವಿಭಾಗದಿಂದ ಮಾಹಿತಿ ರವಾನೆಯಾಗುತ್ತಿದೆ. ಹೀಗೆ ಬಂದ ಮಾಹಿತಿ ಆಧರಿಸಿ, ಫಲಾನುಭವಿಗಳ ಸ್ಥಿತಿಗತಿ ಬಗ್ಗೆ ಗ್ರಾಮ ಆಡಳಿತಾಧಿಕಾರಿಗಳಿಂದ ಪರಿಶೀಲನೆ ನಡೆಸಿದ ಬಳಿಕ ಸೌಲಭ್ಯ ರದ್ಧತಿಗೆ ಶಿಫಾರಸ್ಸು ಮಾಡಲಾಗುತ್ತಿದೆ’ ಎನ್ನುತ್ತಾರೆ ಸಾಮಾಜಿಕ ಭದ್ರತೆ ಮತ್ತು ಪಿಂಚಣಿ ಯೋಜನೆ ವಿಭಾಗದ ಸಹಾಯಕ ನಿರ್ದೇಶಕ ಎಸ್.ಎಚ್.ಪ್ರಶಾಂತ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.