ADVERTISEMENT

ಬೇಡ್ತಿ ಹಳ್ಳದ ನೀರಿನ ಮಟ್ಟ ವೀಕ್ಷಿಸಿದ ತಹಶೀಲ್ದಾರ್‌

​ಪ್ರಜಾವಾಣಿ ವಾರ್ತೆ
Published 31 ಜುಲೈ 2024, 5:25 IST
Last Updated 31 ಜುಲೈ 2024, 5:25 IST
ಮುಂಡಗೋಡ ತಾಲ್ಲೂಕಿನ ಯರೇಬೈಲ್‌ ಸಮೀಪ‍ದ ಬೇಡ್ತಿ ಹಳ್ಳದ ನೀರಿನ ಮಟ್ಟವನ್ನು ತಹಶೀಲ್ದಾರ್‌ ಶಂಕರ ಗೌಡಿ ವೀಕ್ಷಿಸಿದರು
ಮುಂಡಗೋಡ ತಾಲ್ಲೂಕಿನ ಯರೇಬೈಲ್‌ ಸಮೀಪ‍ದ ಬೇಡ್ತಿ ಹಳ್ಳದ ನೀರಿನ ಮಟ್ಟವನ್ನು ತಹಶೀಲ್ದಾರ್‌ ಶಂಕರ ಗೌಡಿ ವೀಕ್ಷಿಸಿದರು   

ಮುಂಡಗೋಡ: ತಾಲ್ಲೂಕಿನ ಯರೇಬೈಲ್‌ ಸಮೀಪದ ಬೇಡ್ತಿ ಹಳ್ಳದ ನೀರಿನ ಪ್ರಮಾಣ ಹೆಚ್ಚಿದ್ದು, ತಹಶೀಲ್ದಾರ್‌ ಶಂಕರ ಗೌಡಿ ಮಂಗಳವಾರ ಭೇಟಿ ನೀಡಿ ಪರಿಶೀಲಿಸಿದರು.

2019ರಲ್ಲಿ ಮಹಾಮಳೆಯಿಂದ ಬೇಡ್ತಿ ಹಳ್ಳ ಉಕ್ಕಿ ಹರಿದು ದಡಪಾತ್ರದ ಮನೆಗಳು ಕೊಚ್ಚಿಕೊಂಡು ಹೋಗಿದ್ದವು. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಭೇಟಿ ನೀಡಿ ವಸ್ತುಸ್ಥಿತಿಯನ್ನು ವೀಕ್ಷಿಸಿದರು.

ತಾಲ್ಲೂಕಿನಲ್ಲಿ ಬೀಳುವ ಮಳೆಯ ನೀರು ಅಷ್ಟೇ ಅಲ್ಲದೇ, ಹುಬ್ಬಳ್ಳಿ-ಧಾರವಾಡ ಪ್ರದೇಶಗಳ ಮಳೆಯ ನೀರು ಈ ಹಳ್ಳದ ಮೂಲಕ ಹರಿಯುತ್ತದೆ. ಕೆಲವು ದಿನಗಳಿಂದ ನಿರಂತರ ಮಳೆ ಆಗುತ್ತಿರುವುದರಿಂದ, ಬೇಡ್ತಿ ಹಳ್ಳದಲ್ಲಿ ಹರಿಯುವ ನೀರಿನ ಪ್ರಮಾಣ ಹೆಚ್ಚಳವಾಗಿದೆ. ಸದ್ಯದ ಮಟ್ಟಿಗೆ ದಡದವರೆಗೆ ನೀರು ಹರಿಯುತ್ತಿದ್ದು, ಮಳೆಯು ಇದೇ ರೀತಿ ಮುಂದುವರಿದರೆ ಹಳ್ಳದಲ್ಲಿ ಹರಿಯುವ ನೀರು ವಿಸ್ತರಿಸಲಿದೆ. ಆಗ, ದಡದಲ್ಲಿರುವ ಜನವಸತಿ ಪ್ರದೇಶಕ್ಕೆ ನೀರು ಬರುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.

ADVERTISEMENT

‘ಹಳ್ಳದಲ್ಲಿ ನೀರಿನ ಪ್ರಮಾಣ ಹೆಚ್ಚಳವಾಗಿ, ಜನವಸತಿ ಪ್ರದೇಶಗಳಿಗೆ ನೀರು ಹರಿಯುವ ಸಾಧ್ಯತೆಯಿದೆ ಎಂದು ಅನಿಸಿದ ಕೂಡಲೇ, ಜನ–ಜಾನವಾರುಗಳ ರಕ್ಷಣೆಗೆ ಮುಂದಾಗಬೇಕು. ಪ್ರತಿ ದಿನವೂ ಹಳ್ಳದಲ್ಲಿ ಹರಿಯುವ ನೀರಿನ ಮಟ್ಟವನ್ನು ವೀಕ್ಷಿಸಬೇಕು’ ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ತಹಶೀಲ್ದಾರ್‌ ಸೂಚಿಸಿದರು.‌

ಪಂಚಾಯತ ರಾಜ್‌ ಎಂಜಿನಿಯರ್‌ ಪ್ರದೀಪ ಭಟ್ಟ, ಪಿಡಿಒ ಮಾನ್ವಿತಾ ನಾಯ್ಕ, ಕಂದಾಯ ಸಿಬ್ಬಂದಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.