ಕಾರವಾರ: ಹರಿವೆ ಸೊಪ್ಪಿನ ಗಿಡಗಳಿಗೆ ಎಲೆಚುಕ್ಕಿ ರೋಗ ಕಾಣಿಸಿಕೊಂಡಿದ್ದು, ಕೃಷಿಕರು ಕಂಗಾಲಾಗಿದ್ದಾರೆ. ಹೊನ್ನಾವರ ತಾಲ್ಲೂಕಿನ ವಿವಿಧೆಡೆ ಈ ಸಮಸ್ಯೆ ಹೆಚ್ಚಿದ್ದು, ಗಿಡಗಳನ್ನು ಕಟಾವು ಮಾಡಲಾಗದೇ ನಷ್ಟ ಅನುಭವಿಸುತ್ತಿದ್ದಾರೆ.
ಕೆಂಪು ಹರಿವೆ ಸೊಪ್ಪಿನ ಎಲೆಗಳಲ್ಲಿ ಈ ಸಮಸ್ಯೆ ವ್ಯಾಪಕವಾಗಿ ಕಂಡುಬರುತ್ತಿದೆ. ಎಲೆಗಳ ತುಂಬ ಬಿಳಿ ಚುಕ್ಕಿಗಳಂತಾಗಿದ್ದು, ಮಾರುಕಟ್ಟೆಗೆ ರವಾನೆ ಮಾಡಲು ಸಾಧ್ಯವಿಲ್ಲದಂತಾಗಿದೆ.
‘ಇದಕ್ಕೆ ಔಷಧಿ ಹೊಡೆಯುವಂತೆಯೂ ಇಲ್ಲ. ರೋಗ ಬಾಧಿಸದೇ ಉಳಿದ ಗಿಡಗಳನ್ನು ಮಾತ್ರ ಕಟಾವು ಮಾಡಿ ಮಾರುಕಟ್ಟೆಗೆ ಸಾಗಿಸುತ್ತಿದ್ದೇವೆ. ಒಂದಷ್ಟು ನಷ್ಟವಂತೂ ಆಗಿದೆ’ ಎನ್ನುತ್ತಾರೆ ಹೊನ್ನಾವರ ತಾಲ್ಲೂಕಿನ ಕಾಸರಕೋಡಿನ ಕೃಷಿಕ ಮಂಜು ಗೌಡ.
ಇದರ ನಿಯಂತ್ರಣದ ಬಗ್ಗೆ ಮಾಹಿತಿ ನೀಡಿದ ಹೊನ್ನಾವರತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಸೂರ್ಯಕಾಂತ, ‘ಹಸಿರು ಸೊಪ್ಪು ಗಿಡಗಳಿಗೆ ಬಾಧಿಸುವ ಎಲೆಚುಕ್ಕಿ ರೋಗ ನಿಯಂತ್ರಣಕ್ಕೆ ಬೇವಿನೆಣ್ಣೆಅಥವಾ ಗೋಮೂತ್ರ ಬಳಸಬಹುದು. ಹರಿವೆ ಸೊಪ್ಪಿನಂತಹ ಗಿಡಗಳ ಇಡೀ ಭಾಗವನ್ನು ಆಹಾರವಾಗಿ ಬಳಸುವ ಕಾರಣ ಅವುಗಳಿಗೆ ಯಾವುದೇ ಕ್ರಿಮಿನಾಶಕ ರಾಸಾಯನಿಕ ಔಷಧಗಳನ್ನು ಸಿಂಪಡಿಸಬಾರದು’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.