ADVERTISEMENT

ಹರೂರು ಬಳಿ ರಸ್ತೆಯಲ್ಲಿ ಬಿರುಕು: ಯಲ್ಲಾಪುರ ಈಗ ಮತ್ತಷ್ಟು ದೂರ!

ಪ್ರಯಾಣಿಸಲು ಗಡಿ ಗ್ರಾಮಸ್ಥರ ಪರದಾಟ

ಸದಾಶಿವ ಎಂ.ಎಸ್‌.
Published 6 ಅಕ್ಟೋಬರ್ 2020, 19:30 IST
Last Updated 6 ಅಕ್ಟೋಬರ್ 2020, 19:30 IST
ಮಲ್ಲಾಪುರ ಗ್ರಾಮದ ಹರೂರು ಬಳಿ ರಸ್ತೆಯ ಅಂಚಿಗೆ ರಿಬ್ಬನ್ ಕಟ್ಟಿ ವಾಹನ ಚಾಲಕರಿಗೆ ಅಪಾಯದ ಸೂಚನೆ ನೀಡಲಾಗಿದೆ.
ಮಲ್ಲಾಪುರ ಗ್ರಾಮದ ಹರೂರು ಬಳಿ ರಸ್ತೆಯ ಅಂಚಿಗೆ ರಿಬ್ಬನ್ ಕಟ್ಟಿ ವಾಹನ ಚಾಲಕರಿಗೆ ಅಪಾಯದ ಸೂಚನೆ ನೀಡಲಾಗಿದೆ.   

ಕಾರವಾರ: ಮಲ್ಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹರೂರು ಸಮೀಪ ಕಳೆದ ತಿಂಗಳು ಗುಡ್ಡ ಬಿರುಕು ಬಿಟ್ಟ ಪರಿಣಾಮ ಸ್ಥಳೀಯರಿಗೆ ಭಾರಿ ಸಮಸ್ಯೆಯಾಗಿದೆ. ಯಲ್ಲಾಪುರದೊಂದಿಗೆ ಹೆಚ್ಚು ನಂಟು ಹೊಂದಿರುವ ಹರೂರು, ಬೆಳಸೆ, ಕುಚೆಗಾರ ಭಾಗದ ಗ್ರಾಮಸ್ಥರು ನೂರಾರು ಕಿ.ಮೀ ಸುತ್ತಿ ಬಳಸಿ ಸಂಚರಿಸುವಂತಾಗಿದೆ.

ಹರೂರು ಬಳಿ ಗುಡ್ಡದಲ್ಲಿ ಹಾಗೂ ಡಾಂಬರು ರಸ್ತೆಯಲ್ಲಿ ಸೆ.22ರಂದು ಆರು ಇಂಚುಗಳಷ್ಟು ಅಗಲದ ಬಿರುಕುಗಳು ಕಾಣಿಸಿಕೊಂಡಿದ್ದವು. ಹೀಗಾಗಿ ಸುರಕ್ಷತೆಯ ದೃಷ್ಟಿಯಿಂದ ರಸ್ತೆಯಲ್ಲಿ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ. ಈ ಭಾಗದವರು ಅಡಿಕೆ, ತೆಂಗು, ಭತ್ತದ ಮಾರುಕಟ್ಟೆಗೆ, ಆಕಳಿಗೆ ಹಿಂಡಿ ಖರೀದಿಗೆ, ಜಾನುವಾರು ಕೃತಕ ಗರ್ಭಧಾರಣೆ ಮುಂತಾದ ಕೃಷಿ ಸಂಬಂಧಿತ ಹಲವು ಕಾರ್ಯಗಳಿಗೆ ಯಲ್ಲಾಪುರವನ್ನೇ ನೆಚ್ಚಿಕೊಂಡಿದ್ದಾರೆ.

‘ಹರೂರು ಮೂಲಕ ಸಾಗಿದರೆ ಯಲ್ಲಾಪುರಕ್ಕೆ 55 ಕಿ.ಮೀ ದೂರವಾಗುತ್ತದೆ. ಕಾರವಾರ, ಮಲ್ಲಾಪುರದಲ್ಲಿ ಆಕಳಿನ ಹಿಂಡಿ ಸಿಗುವುದಿಲ್ಲ. ಹಾಗಾಗಿ ನಾವು ಕಾರವಾರ ತಾಲ್ಲೂಕಿನಲ್ಲಿದ್ದರೂ ಯಲ್ಲಾಪುರದ ಮೇಲೆ ಅವಲಂಬನೆ ಅನಿವಾರ್ಯವಾಗಿದೆ. ನಾಲ್ಕು ಚಕ್ರದ ವಾಹನಗಳ ಸಂಚಾರ ಈ ರಸ್ತೆಯಲ್ಲಿ ಇನ್ನೂ ಆರಂಭವಾಗಿಲ್ಲ. ಹಾಗಾಗಿ, ಅಣಶಿ– ಭಗವತಿ– ಹಳಿಯಾಳ ಕ್ರಾಸ್ ಮೂಲಕ ಯಲ್ಲಾಪುರಕ್ಕೆ ಪ್ರಯಾಣಿಸುತ್ತಿದ್ದೇವೆ. ಈ ಮಾರ್ಗದಲ್ಲಿ 135 ಕಿ.ಮೀ ದೂರವಾಗುತ್ತದೆ’ ಎನ್ನುತ್ತಾರೆ ಕುಚೆಗಾರದ ಹೈನುಗಾರ ಮಹಾಬಲೇಶ್ವರ ಭಟ್.

ADVERTISEMENT

‘ಹರೂರು ರಸ್ತೆಗೆ ಮತ್ತೊಂದು ಪರ್ಯಾಯ ರಸ್ತೆಯಾಗಿ ಕಾರವಾರ– ಅಂಕೋಲಾ– ಯಲ್ಲಾಪುರಕ್ಕೆ ಹೋಗಬಹುದು. ಆದರೆ, ಇದರಲ್ಲಿ 170 ಕಿ.ಮೀ ದೂರವಾಗುತ್ತದೆ. ಒಟ್ಟಿನಲ್ಲಿ ನಾವು ಯಲ್ಲಾಪುರದಲ್ಲಿ ವ್ಯವಹಾರಕ್ಕೆ ಮಾಡಿದ ಖರ್ಚಿಗಿಂತ ಹೆಚ್ಚು ವಾಹನದ ಇಂಧನಕ್ಕೇ ವ್ಯಯಿಸಬೇಕಿದೆ’ ಎಂದು ಬೇಸರಿಸುತ್ತಾರೆ.

ಫಸಲು ಸಾಗಣೆಗೆ ಅಡಚಣೆ: ‘ಕುಚೆಗಾರ, ಶಿರ್ವೆ, ನಗೆ, ಕೋವೆ, ಕೈಗಾ ಭಾಗದಲ್ಲಿ ಅಡಿಕೆ ಹಾಗೂ ಭತ್ತದ ಬೆಳೆಗಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಭತ್ತ ಕಟಾವಿಗೆ ಬರುತ್ತಿದೆ. ನವರಾತ್ರಿ ಬಳಿಕ ಅಡಿಕೆ ಕೊಯ್ಲು ಶುರುವಾಗಿ ಮಾರಾಟ ಮಾಡಲಾಗುತ್ತದೆ. ಇತ್ತ ಹರೂರು, ಬೆಳಸೆ ಭಾಗದ ಗ್ರಾಮಸ್ಥರು ಮಲ್ಲಾಪುರಕ್ಕೆ ವಿವಿಧ ಕಚೇರಿ ಕೆಲಸಗಳಿಗೆ ಭೇಟಿ ನೀಡುತ್ತಾರೆ. ಸುಮಾರು 1,000ಕ್ಕೂ ಅಧಿಕ ಜನರು ಈ ಭಾಗದಲ್ಲಿದ್ದಾರೆ. ಎಲ್ಲರೂ ರಸ್ತೆ ದುರಸ್ತಿಯಾಗಲು ಕಾಯುತ್ತಿದ್ದಾರೆ’ ಎಂದು ವಿವರಿಸುತ್ತಾರೆ.

ಕೈಗಾ ಅಣುವಿದ್ಯುತ್ ಸ್ಥಾವರದ ಗುತ್ತಿಗೆ ನೌಕರರು, ಸ್ಥಾವರದ ಭದ್ರತಾ ಸಿಬ್ಬಂದಿಯ ಸಂಚಾರಕ್ಕೆ, ವಿದ್ಯುತ್ ಗ್ರಿಡ್‌ ನಿರ್ವಹಣೆಯವರಿಗೆ ಕೂಡ ತೊಂದರೆಯಾಗಿದೆ. ಬಾರೆ, ಕಳಚೆ, ವಜ್ರಳ್ಳಿ ಭಾಗದಲ್ಲಿ ಅಣು ವಿದ್ಯುತ್ ಸ್ಥಾವರದ ಸಾಮಾಜಿಕ ಜವಾಬ್ದಾರಿ ನಿಧಿಯಡಿ ಹಲವು ಕಾಮಗಾರಿಗಳು ಜಾರಿಯಲ್ಲಿವೆ. ಅವುಗಳ ಪ್ರಗತಿಗೂ ರಸ್ತೆಯ ಸಮಸ್ಯೆ ಅಡ್ಡಿಯಾಗಿದೆ.

ದ್ವಿಚಕ್ರ ವಾಹನ ಸಂಚಾರ:‘ಬಾರೆ ಚೆಕ್‌ಪೋಸ್ಟ್‌ನಿಂದ ಸುಮಾರು ಆರು ಕಿ.ಮೀ ದೂರದಲ್ಲಿ ನಾಲ್ಕೈದು ಕಡೆಗಳಲ್ಲಿ ರಸ್ತೆಯಂಚು ಕುಸಿದಿದೆ. ಅಲ್ಲಿ ದೊಡ್ಡ ವಾಹನಗಳ ಸಂಚಾರ ಅಪಾಯಕಾರಿಯಾಗಿದೆ. ಹಾಗಾಗಿ ನಾಲ್ಕು ಚಕ್ರಗಳ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ. ದ್ವಿಚಕ್ರ ವಾಹನಗಳ ಸಂಚಾರಕ್ಕೆ ಮುನ್ನೆಚ್ಚರಿಕೆ ನೀಡಿ ಅನುವು ಮಾಡಿಕೊಡಲಾಗಿದೆ’ ಎಂದು ಮಲ್ಲಾಪುರ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಮಹಾಂತೇಶ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.