ADVERTISEMENT

ಸಂಪೂರ್ಣ ಒಣಗಿದ ಬಾವಿಗಳು; ಕಣಸಗೇರಿಗೆ ಹರಿಯದ ಶುದ್ಧ ನೀರು!

ಚಿತ್ತಾಕುಲಾ ಗ್ರಾ.ಪಂ ವ್ಯಾಪ್ತಿಯ ಕೆಲವೆಡೆ ಜೀವಜಲಕ್ಕೆ ಪರದಾಟ

ಸದಾಶಿವ ಎಂ.ಎಸ್‌.
Published 11 ಮೇ 2019, 19:45 IST
Last Updated 11 ಮೇ 2019, 19:45 IST
ಕಾರವಾರ ತಾಲ್ಲೂಕಿನ ಚಿತ್ತಾಕುಲಾ ಗ್ರಾಮದ ಮೇಲಿನ ಕಣಸಗೇರಿಯಲ್ಲಿ ಗ್ರಾಮ ಪಂಚಾಯ್ತಿಯ ತೆರೆದ ಬಾವಿಯಲ್ಲಿ ನೀರು ಸಂಪೂರ್ಣ ಒಣಗಿದೆ.
ಕಾರವಾರ ತಾಲ್ಲೂಕಿನ ಚಿತ್ತಾಕುಲಾ ಗ್ರಾಮದ ಮೇಲಿನ ಕಣಸಗೇರಿಯಲ್ಲಿ ಗ್ರಾಮ ಪಂಚಾಯ್ತಿಯ ತೆರೆದ ಬಾವಿಯಲ್ಲಿ ನೀರು ಸಂಪೂರ್ಣ ಒಣಗಿದೆ.   

ಕಾರವಾರ:ತಾಲ್ಲೂಕಿನ ಚಿತ್ತಾಕುಲಾ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕಣಸಗೇರಿಯಲ್ಲಿ ಮೇಲಿನವಾಡ ಮತ್ತು ಸುತ್ತಮುತ್ತ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಿದೆ. ಇಲ್ಲಿ ಕುಡಿಯುವ ನೀರು ಪೂರೈಕೆ ಮಾಡದೇ ಒಂದು ತಿಂಗಳೇ ಆಯಿತು ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಗ್ರಾಮದ ಬಹುತೇಕತೆರೆದ ಬಾವಿಗಳು ಕೂಡ ಸಂಪೂರ್ಣ ಒಣಗಿವೆ.

ಖಾಸಗಿ ಜಮೀನಿನಲ್ಲಿರುವ ಬಾವಿಗಳ ಸ್ಥಿತಿಯೂ ಭಿನ್ನವಾಗಿಲ್ಲ. ತಳದಲ್ಲಿ ದೊಡ್ಡಕಲ್ಲುಗಳಿವೆ. ಹಾಗಾಗಿ ಮತ್ತಷ್ಟು ಆಳ ಮಾಡಿಸಲೂ ಸಾಧ್ಯವಾಗುತ್ತಿಲ್ಲ. ಕೆಲವರು ಕೊಳವೆ ಬಾವಿಗಳನ್ನು ಕೊರೆಸಿದ್ದು, ಉಪ್ಪು ನೀರು ಬರುತ್ತಿದೆ. ಇದು ಬಳಕೆಗೆ ಸಿಗುತ್ತಿಲ್ಲ.

‘ಗೋಟೆಗಾಳಿ ಬಹುಗ್ರಾಮ ಕುಡಿಯುವ ನೀರು ಯೋಜನೆಯಡಿ ಗ್ರಾಮದಲ್ಲಿ ಪೈಪ್‌ಲೈನ್ ಅಳವಡಿಸಲಾಗಿದೆ. ಆದರೆ, ಅದರಲ್ಲಿ ಚುನಾವಣೆಯ ತನಕ ಮಾತ್ರನೀರು ಬಂತು. ನಂತರ ನೀಡಿಲ್ಲ. ಟ್ಯಾಂಕರ್‌ನಲ್ಲೂ ಕಳುಹಿಸಿಕೊಡುವ ವ್ಯವಸ್ಥೆ ಮಾಡಿಲ್ಲ’ ಎಂದು ಗ್ರಾಮಸ್ಥರೂ ಆಗಿರುವ ನಿವೃತ್ತ ಸೈನಿಕ ಪುಂಡಲೀಕ ಮಹಾದೇವ ಸಾವಂತ್ ಅಸಮಾಧಾನ ವ್ಯಕ್ತಪಡಿಸುತ್ತಾರೆ.

ADVERTISEMENT

‘ಗ್ರಾಮ ಪಂಚಾಯ್ತಿಯವರುಇವತ್ತು, ನಾಳೆ ಎಂದು ಹೇಳ್ತಾರೆ. ಇಲ್ಲಿರುವ ಸುಮಾರು 60 ಮನೆಗಳಿಗೆ ತೊಂದರೆಯಾಗಿದೆ. ಅಕ್ಕಪಕ್ಕದವರ ಬಾವಿಗಳಲ್ಲೂ ನೀರು ಖಾಲಿಯಾಗಿರುವಾಗ ಅವರಾದರೂ ಹೇಗೆ ಕೊಡುತ್ತಾರೆ?’ ಎಂದು ಪ್ರಶ್ನಿಸಿದರು.

ಕೆಲವರು440 ಅಡಿಗಳವರೆಗೂ ಕೊಳವೆಬಾವಿ ಕೊರೆಸಿದ್ದಾರೆ. ಅದರಲ್ಲಿ ಮಳೆಗಾಲದಲ್ಲಿ ನೀರು ಭರ್ತಿಯಾಗುತ್ತದೆ. ಆದರೆ, ಏಪ್ರಿಲ್, ಮೇ ತಿಂಗಳಲ್ಲಿ ಭಾರಿ ಸಮಸ್ಯೆಯಾಗುತ್ತಿದೆ. ಮೋಟಾರ್ ಪಂಪ್ ಚಾಲನೆ ಮಾಡಿದರೆ ಪೈಪ್‌ನಲ್ಲಿ ಉಪ್ಪು ನೀರು ಬರುತ್ತದೆ ಎನ್ನುತ್ತಾರೆ ಸ್ಥಳೀಯರು.

ಅಂಗನವಾಡಿಗೂ ನೀರಿಲ್ಲ

ಕಣಸಗೇರಿ ಮೇಲಿನವಾಡದ ಅಂಗನವಾಡಿಗೂ ನೀರಿನ ಸಮಸ್ಯೆ ಎದುರಾಗಿದೆ. ಅಂಗನವಾಡಿ ಕಾರ್ಯಕರ್ತೆಯರು ಊರಿನವರ ಬಾವಿಗಳಿಂದ ದಿನಕ್ಕೆ ಅರ್ಧ ಕೊಡ ನೀರು ತರುತ್ತಿದ್ದಾರೆ. ಅಂಗನವಾಡಿಯ ಅಂಗಳದಲ್ಲೇ ಟ್ಯಾಂಕ್ ಇದ್ದು, ನೀರಿಲ್ಲದೇ ಒಣಗಿದೆ.

ಸದ್ಯ ಮೂವರು ಮಕ್ಕಳಷ್ಟೇ ಬರುತ್ತಿದ್ದಾರೆ. ಬೇಸಿಗೆ ರಜಾ ದಿನಗಳು ಮುಗಿದ ಬಳಿಕ ಮಕ್ಕಳ ಸಂಖ್ಯೆ ಹೆಚ್ಚುತ್ತದೆ. ಆಗ ಕುಡಿಯುವ ನೀರಿನಕೊರತೆಅಂಗನವಾಡಿಯನ್ನು ಮತ್ತಷ್ಟುಕಾಡಬಹುದು ಎಂದು ಪೋಷಕರು ಆತಂಕ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಗ್ರಾಮ ಪಂಚಾಯ್ತಿ ರಾಜೇಶ್ ನಾಯ್ಕ, ‘ಗ್ರಾಮದಲ್ಲಿ ಕುಡಿಯುವ ನೀರಿನ ದೊಡ್ಡ ಪ್ರಮಾಣದ ಸಮಸ್ಯೆಯಿಲ್ಲ. ಗೋಟೆಗಾಳಿಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಪೈಪ್ ಹಾಳಾಗಿರಬಹುದು. ಅದನ್ನು ದುರಸ್ತಿ ಮಾಡಿ ನೀರು ಹರಿಸುತ್ತಾರೆ. ಅಲ್ಲಿ ಒಂದು ಮನೆಗೆ ನೀರು ಹೋಗದ್ದಕ್ಕೆ ಅವರು ದೂರುತ್ತಿದ್ದಾರೆ’ ಎಂದರು.

‘ಬುಧವಾರ, ಗುರುವಾರ ವಿದ್ಯುತ್ ಇರಲಿಲ್ಲ. ಇದರಿಂದಲೂ ಸಮಸ್ಯೆಯಾಗಿದೆ. ಸಮೀಪದ ಬಂದರುವಾಡದಲ್ಲಿ ಕೊಳವೆಬಾವಿ ಕೊರೆಯಲಾಗಿದೆ. ಅಲ್ಲಿಂದಲೂ ನೀರು ಪೂರೈಕೆಯಾಗುತ್ತಿದೆ. ಸುಟ್ಟು ಹೋದ ಒಂದು ಪಂಪ್ ಅನ್ನು ಬದಲಿಸಲಾಗುತ್ತಿದೆ. ಜನರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದು ಹೇಳಿದರು.

ಕುಡಿಯುವ ನೀರು ಬಾವಿಗೆ ಭರ್ತಿ!

‘ಗ್ರಾಮ ಪಂಚಾಯ್ತಿ ನೀಡುವ ನೀರನ್ನು ಕೆಲವರು ತಮ್ಮಸ್ವಂತ ಬಾವಿಗೇ ಪೈಪ್ ಮೂಲಕ ತುಂಬಿಸುತ್ತಾರೆ. ಮತ್ತೆ ಕೆಲವರುತೆಂಗಿನಮರದ ಬುಡಕ್ಕೆ ಹರಿಸುತ್ತಾರೆ. ಅಂಥವರ ವಿರುದ್ಧ ಈ ಹಿಂದೆ ಕ್ರಮ ಕೈಗೊಳ್ಳಲಾಗಿತ್ತು. ತಮ್ಮ ತಪ್ಪನ್ನು ಅವರುಹೇಳುವುದಿಲ್ಲ. ಲಭ್ಯವಿರುವ ನೀರನ್ನು ಸರಿಯಾಗಿ ಬಳಕೆ ಮಾಡಿಕೊಂಡರೆ ಗ್ರಾಮದಲ್ಲಿ ಸಮಸ್ಯೆ ಎದುರಾಗುವುದಿಲ್ಲ’ ಎಂದು ರಾಜೇಶ್ ನಾಯ್ಕ ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.