ADVERTISEMENT

ಮುಂಡಗೋಡ: ಕೋಡಿ ಬಿದ್ದು ಹರಿಯುತ್ತಿರುವ ‘ಧರ್ಮಾ‌’

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2020, 14:51 IST
Last Updated 9 ಆಗಸ್ಟ್ 2020, 14:51 IST
ಮುಂಡಗೋಡ ತಾಲ್ಲೂಕಿನ ಧರ್ಮಾ ಜಲಾಶಯ ಭರ್ತಿಯಾಗಿ ಕೋಡಿ ಮೂಲಕ ನೀರು ಹರಿಯುತ್ತಿದೆ
ಮುಂಡಗೋಡ ತಾಲ್ಲೂಕಿನ ಧರ್ಮಾ ಜಲಾಶಯ ಭರ್ತಿಯಾಗಿ ಕೋಡಿ ಮೂಲಕ ನೀರು ಹರಿಯುತ್ತಿದೆ   

ಮುಂಡಗೋಡ: ತಾಲ್ಲೂಕಿನ ಮಳಗಿ ಸಮೀಪದ ಧರ್ಮಾ ಜಲಾಶಯ ಭಾನುವಾರ ಮಧ್ಯಾಹ್ನ ಕೋಡಿ ಬಿದ್ದಿದೆ. ಸತತವಾಗಿ ನಾಲ್ಕು ವರ್ಷಗಳಿಂದ ಆಗಸ್ಟ್ ತಿಂಗಳಲ್ಲಿಯೇ ಭರ್ತಿಯಾಗುತ್ತಿದೆ. ಕೋಡಿ ಬಿದ್ದಿರುವ ದೃಶ್ಯವನ್ನು ಕಣ್ತುಂಬಿಕೊಳ್ಳಲು ಸ್ಥಳೀಯ ರೈತರು ಹಾಗೂ ಸುತ್ತಲಿನ ಗ್ರಾಮಸ್ಥರು ಜಲಾಶಯಕ್ಕೆ ಭೇಟಿ ನೀಡುತ್ತಿದ್ದಾರೆ.

ಈ ಜಲಾಶಯಯದ ಬಹುಪಾಲು ನೀರು ಹಾನಗಲ್ ತಾಲ್ಲೂಕಿನ ರೈತರಿಗೆ ಉಪಯೋಗವಾಗುತ್ತದೆ. ಎಡಭಾಗದಲ್ಲಿ ಕೋಡಿ ಬೀಳುವ ನೀರು, ಕಾಲುವೆ ಮೂಲಕ ಹರಿದು ಪಕ್ಕದ ತಾಲ್ಲೂಕಿನ ಕೆರೆಕಟ್ಟೆಗಳನ್ನು ತುಂಬಿಸುತ್ತಿದೆ. ಮುಂಡಗೋಡ ತಾಲ್ಲೂಕಿನ ಐದಾರು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಶಾಶ್ವತ ಕುಡಿಯುವ ನೀರಿನ ಯೋಜನೆಗೂ ಇದೇ ಜಲಾಶಯದ ನೀರು ಬಳಕೆಯಾಗುತ್ತಿದೆ.

‘ಧರ್ಮಾ ಜಲಾಶಯ ಕೋಡಿ ಬೀಳುವುದನ್ನು ಕಣ್ತುಂಬಿಕೊಳ್ಳುವ ರೈತರು, ಟ್ರ್ಯಾಕ್ಟರ್ ಇನ್ನಿತರ ವಾಹನಗಳಲ್ಲಿ ಬಂದು ದಡದಲ್ಲಿ ನಿಂತು ಪೂಜೆ ಸಲ್ಲಿಸುತ್ತಾರೆ. ರಜಾದಿನಗಳಲ್ಲಿ ಪ್ರವಾಸಿಗರು ಜಲಾಶಯದ ಕೋಡಿ ಬೀಳುವು ದೃಶ್ಯವನ್ನು ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಉಬ್ಬು ಹರಿದು ಹೋಗುವ ಸ್ಥಳದಲ್ಲಿ ಯುವಕರು ಈಜಾಡುತ್ತ ಸಂತಸ ಪಡುತ್ತಾರೆ’ ಎನ್ನುತ್ತಾರೆ ಸ್ಥಳೀಯ ರೈತ ಹನಮಂತಪ್ಪ.

ADVERTISEMENT

‘ಎರಡು ದಿನಗಳ ಹಿಂದೆ ನೋಡಿದಾಗ ಕೋಡಿ ಹರಿಯಲು ಎರಡೂವರೆ ಅಡಿಗಳಷ್ಟು ನೀರು ಬೇಕಾಗಿತ್ತು. ಭಾನುವಾರ ಮಧ್ಯಾಹ್ನದ ನಂತರ ಸಣ್ಣ ಪ್ರಮಾಣದಲ್ಲಿ ಕೋಡಿ ಬೀಳುತ್ತ, ಸಂಜೆಯ ವೇಳೆಗೆ ಹೆಚ್ಚಾಗಿದೆ’ ಎಂದು ಸ್ಥಳೀಯ ನಿವಾಸಿ ರಾಜೇಂದ್ರ ನಾಯ್ಕ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.