ADVERTISEMENT

ಅರಣ್ಯ ಪ್ರದೇಶದಲ್ಲಿ ಬತ್ತುತ್ತಿರುವ ಜಲಮೂಲ: ನೀರಿಲ್ಲದೆ ಪರಿತಪಿಸುವ ವನ್ಯಜೀವಿಗಳು

ಆಹಾರಕ್ಕೆ ನಾಡಿನತ್ತ ವಲಸೆ..

​ಶಾಂತೇಶ ಬೆನಕನಕೊಪ್ಪ
Published 4 ಫೆಬ್ರುವರಿ 2024, 5:20 IST
Last Updated 4 ಫೆಬ್ರುವರಿ 2024, 5:20 IST
ಮುಂಡಗೋಡ-ವಡಗಟ್ಟಾ ರಾಜ್ಯ ಹೆದ್ದಾರಿ ಪಕ್ಕ ಗುಂಪಾಗಿ ಕುಳಿತುಕೊಳ್ಳುವ ಮಂಗಗಳಿಗೆ ಪ್ರಯಾಣಿಕರೊಬ್ಬರು ಬಾಳೆಹಣ್ಣು ನೀಡುತ್ತಿರುವುದು
ಮುಂಡಗೋಡ-ವಡಗಟ್ಟಾ ರಾಜ್ಯ ಹೆದ್ದಾರಿ ಪಕ್ಕ ಗುಂಪಾಗಿ ಕುಳಿತುಕೊಳ್ಳುವ ಮಂಗಗಳಿಗೆ ಪ್ರಯಾಣಿಕರೊಬ್ಬರು ಬಾಳೆಹಣ್ಣು ನೀಡುತ್ತಿರುವುದು   

ಮುಂಡಗೋಡ: ಬಿಸಿಲಿಗೆ ಬಾಯ್ದೆರೆದ ಸ್ಥಿತಿಯಲ್ಲಿ ಇರುವ ಜಲಮೂಲಗಳು. ಆಹಾರ, ನೀರು ಅರಸಿ ರಾಜ್ಯ ಹೆದ್ದಾರಿ, ಗ್ರಾಮದಂಚಿಗೆ ಬರುವ ವನ್ಯ ಪ್ರಾಣಿ, ಪಕ್ಷಿಗಳು. ಹೊಟ್ಟೆ ತುಂಬಿಸಿಕೊಳ್ಳಲು, ಬಾಯಾರಿಕೆ ತಣಿಸಿಕೊಳ್ಳಲು ಅಲೆದಾಡುವಾಗ ಆಕಸ್ಮಿಕವಾಗಿ ನಾಯಿ ದಾಳಿ ಇಲ್ಲವೇ ರಸ್ತೆ ಅಪಘಾತಕ್ಕೆ ಬಲಿಯಾಗುತ್ತಿರುವ ಜಿಂಕೆಗಳು. ಬತ್ತಿರುವ ಕೆರೆಕಟ್ಟೆಗಳಿಂದ ತೊಂದರೆ ಅನುಭವಿಸುತ್ತಿರುವ ವನ್ಯಪ್ರಾಣಿ, ಪಕ್ಷಿಗಳು.

ತಾಲ್ಲೂಕಿನಲ್ಲಿ ಕೆಲವು ದಿನಗಳಿಂದ ಬರದ ಸ್ಥಿತಿ ಆವರಿಸಿದ ಪರಿಣಾಮ ಇಂತಹ ದೃಶ್ಯಗಳು ಕಾಣಸಿಗುತ್ತಿವೆ. ಕಾಡಿನ ಪ್ರಾಣಿಗಳು ಆಹಾರ, ನೀರು ಅರಸಿ ಗ್ರಾಮದತ್ತ ಬರುತ್ತಿವೆ. ಅರಣ್ಯ ಪ್ರದೇಶದಲ್ಲಿ ಬಹುತೇಕ ಕೆರೆಕಟ್ಟೆಗಳು ಬತ್ತಿರುವುದರಿಂದ ಸೂಕ್ಷ್ಮ ಪ್ರಾಣಿಗಳಾದ ಜಿಂಕೆಗಳು ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮದಂಚಿನಲ್ಲಿ ನಿತ್ಯವೂ ಕಾಣುತ್ತಿವೆ.

ರಾಜ್ಯ ಹೆದ್ದಾರಿ ಪಕ್ಕ ಗುಂಪು ಗುಂಪಾಗಿ ಕುಳಿತುಕೊಳ್ಳುವ ಮಂಗಗಳು, ಪ್ರಯಾಣಿಕರು ನೀಡುವ ಹಣ್ಣುಗಳನ್ನು ತಿನ್ನುತ್ತ ಹೊಟ್ಟೆ ತುಂಬಿಸಿಕೊಳ್ಳುತ್ತಿವೆ. ಬಾಟಲಿಯಲ್ಲಿ ನೀರು ನೀಡಿದರೂ, ಸರಾಗವಾಗಿ ಕುಡಿಯುತ್ತ ಬಾಯಾರಿಕೆಯನ್ನು ಇಂಗಿಸಿಕೊಳ್ಳುತ್ತಿರುವ ದೃಶ್ಯವನ್ನು ಮುಂಡಗೋಡ-ವಡಗಟ್ಟಾ ರಾಜ್ಯ ಹೆದ್ದಾರಿಯಲ್ಲಿ ಕಾಣಬಹುದಾಗಿದೆ.

ADVERTISEMENT

‘ನಾಲ್ಕು ವರ್ಷಗಳ ಹಿಂದೆ ನೀರಿನ ಕೊರತೆ ಉಂಟಾಗಿ ಸನವಳ್ಳಿ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇರುವ ಜಿಂಕೆಗಳು ಆಹಾರ, ನೀರು ಅರಸಿ ನಾಡಿಗೆ ನಿತ್ಯವೂ ಬರುತ್ತಿದ್ದವು. ಹೆಚ್ಚಿನ ಪ್ರಮಾಣದಲ್ಲಿ ಜಿಂಕೆಗಳು ನಾಯಿ ದಾಳಿಯಿಂದ ಗಾಯಗೊಂಡಿದ್ದವು. ಇನ್ನೂ ಕೆಲವು ಮೃತಪಟ್ಟಿದ್ದವು. ಈಗ ಅಂತಹದ್ದೇ ಸ್ಥಿತಿ ಮರುಕಳಿಸುತ್ತಿದೆ’ ಎಂದು ಸಾಮಾಜಿಕ ಕಾರ್ಯಕರ್ತ ಕೆ.ರಾಜು ವಡಗಟ್ಟಾ ಹೇಳಿದರು.

‘ಕಾಡಿನಲ್ಲಿ ಆಹಾರ, ನೀರಿನ ಸಮಸ್ಯೆಯಾಗಿದೆ. ವನ್ಯಪ್ರಾಣಿಗಳು ರೈತರ ಗದ್ದೆಗಳಿಗೆ ದಾಳಿ ಮಾಡುತ್ತಿವೆ. ಬೇಸಿಗೆ ಬೆಳೆಯನ್ನು ತಿಂದು ಹಾನಿ ಮಾಡುತ್ತಿವೆ. ಕಾಡು ಹಂದಿ, ಜಿಂಕೆಗಳು ಗದ್ದೆಗಳಿಗೆ ದಾಳಿ ಮಾಡುತ್ತಿವೆ. ಪ್ರಾಣಿ, ಪಕ್ಷಿಗಳಿಗೆ ನೀರಿನ ಸಮಸ್ಯೆ ಆದಾಗ, ಕೃತಕ ನೀರಿನ ತೊಟ್ಟಿಗಳನ್ನು ನಿರ್ಮಿಸಿ, ಟ್ಯಾಂಕರ್‌ನಿಂದ ನೀರು ತುಂಬಿಸುವ ಕೆಲಸವನ್ನು ಅರಣ್ಯ ಇಲಾಖೆ ಈ ಹಿಂದೆ ಮಾಡಿದೆ. ಆದರೆ, ಈ ವರ್ಷ ಇನ್ನೂ ಕಾರ್ಯಪ್ರವೃತ್ತರಾಗಿಲ್ಲ. ಸನವಳ್ಳಿ ಗ್ರಾಮದಂಚಿನಲ್ಲಿ ಜಿಂಕೆಗಳು ನಿತ್ಯವೂ ಸಂಜೆಯ ವೇಳೆಗೆ ಆಹಾರ, ನೀರಿಗಾಗಿ ಬರುತ್ತಿವೆ’ ಎಂದು ಸನವಳ್ಳಿಯ ರೈತ ಮುಖಂಡ ರಾಜು ಗುಬ್ಬಕ್ಕನವರ ಆಗ್ರಹಿಸಿದರು.

‘ಮಳೆಯ ಅಭಾವದಿಂದ ಈ ವರ್ಷ ನೀರಿನ ಸಮಸ್ಯೆಯಾಗಿದೆ. ಅರಣ್ಯ ಪ್ರದೇಶದಲ್ಲಿನ ಕೆರೆಕಟ್ಟೆಗಳನ್ನು ಹೂಳೆತ್ತಲು ಕ್ರಿಯಾಯೋಜನೆ ಕಳಿಸಲಾಗಿದೆ. ಇಂದೂರ, ನಂದಿಕಟ್ಟಾ, ವಡಗಟ್ಟಾ, ಬಸಾಪುರ, ಚವಡಳ್ಳಿ, ಕ್ಯಾತನಳ್ಳಿ, ಬಪ್ಪಲಗುಂಡಿ ಪ್ರದೇಶಗಳಲ್ಲಿ ಸಿಮೆಂಟ್‌ ತೊಟ್ಟಿಗಳನ್ನು ನಿರ್ಮಿಸಿ, ಟ್ಯಾಂಕರ್‌ ಮೂಲಕ ನೀರು ತುಂಬಿಸಿ ವನ್ಯಪ್ರಾಣಿ, ಪಕ್ಷಿಗಳಿಗೆ ನೀರಿನ ವ್ಯವಸ್ಥೆ ಕೈಗೊಳ್ಳಲು ವರದಿ ಕಳಿಸಲಾಗಿದೆ’ ಎಂದು ಆರ್.ಎಫ್.ಒ ವಾಗೀಶ ಬಿ.ಜೆ ಪ್ರತಿಕ್ರಿಯಿಸಿದರು.

ವನ್ಯಜೀವಿಗಳಿಗೆ ನೀರಿನ ಕೊರತೆ ಉಂಟಾಗುವುದನ್ನು ತಡೆಯಲು ಅರಣ್ಯದಂಚಿನಲ್ಲಿ ಕಾಂಕ್ರೀಟ್ ತೊಟ್ಟಿ ಇಟ್ಟು ನೀರು ತುಂಬಿಸುವ ಕೆಲಸ ಮಾಡಲಾಗುವುದು
-ವಾಗೀಶ ಬಿ.ಜೆ ಮುಂಡಗೋಡ ಆರ್.ಎಫ್.ಒ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.