
ಕಾರವಾರ: ಕೆಲವೇ ತಿಂಗಳುಗಳಲ್ಲಿ ಪಶ್ಚಿಮ ಪದವೀಧರ ಕ್ಷೇತ್ರದಿಂದ ವಿಧಾನ ಪರಿಷತ್ ಸದಸ್ಯರ ಆಯ್ಕೆಗೆ ಚುನಾವಣೆ ನಡೆಯಲಿದ್ದು, ಹೊಸದಾಗಿ ಮತದಾರರ ಪಟ್ಟಿ ಸಿದ್ಧಪಡಿಸಲಾಗುತ್ತಿದೆ. ಲಕ್ಷಾಂತರ ಪದವೀಧರರಿದ್ದರೂ ಕೇವಲ 15,374 ಮಂದಿ ಮತದಾರರಾಗಿದ್ದಾಗಿ ಈಚೆಗೆ ಪ್ರಕಟಗೊಂಡ ಮತದಾರರ ಪಟ್ಟಿ ದೃಢಪಡಿಸಿದೆ.
2020ರಲ್ಲಿ ನಡೆದಿದ್ದ ಈ ಹಿಂದಿನ ಚುನಾವಣೆ ವೇಳೆ ಜಿಲ್ಲೆಯಲ್ಲಿ 13,148 ಮತದಾರರು ಮತದಾನದ ಅರ್ಹತೆ ಹೊಂದಿದ್ದರು. ಆರು ವರ್ಷಗಳ ಬಳಿಕ ಮತದಾರರ ಪಟ್ಟಿ ಹೊಸದಾಗಿ ಸಿದ್ಧಗೊಂಡಿದ್ದರೂ ಕೇವಲ 2 ಸಾವಿರದಷ್ಟು ಮಾತ್ರ ಮತದಾರರ ಏರಿಕೆಯಾಗಿದೆ. ಅ.1 ರಿಂದ ನ.6ವರೆಗೆ ಮತದಾರರ ಪಟ್ಟಿಗೆ ಹೆಸರು ಸೇರ್ಪಡಗೆ ಅವಕಾಶ ಕಲ್ಪಿಸಲಾಗಿತ್ತು. ನ.25ರಂದು ಕರಡು ಮತದಾರರ ಪಟ್ಟಿ, ಡಿ.30ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಗೊಂಡಿತ್ತು.
‘ಪದವೀಧರ ಮತದಾರರಾಗಲು ಯುವ ಜನತೆಯಲ್ಲೇ ನಿರುತ್ಸಾಹ ಹೆಚ್ಚಿದೆ ಎಂಬುದು ಮತದಾರರ ಪಟ್ಟಿ ಗಮನಿಸಿದರೆ ಗೊತ್ತಾಗುತ್ತಿದೆ. ಈ ಹಿಂದಿನ ಚುನಾವಣೆಯಲ್ಲಿ ಮತದಾರರಾಗಿದ್ದವರು, ಸರ್ಕಾರಿ ನೌಕರರು ಹೆಸರು ನೋಂದಾಯಿಸಿಕೊಂಡಿದ್ದಾರೆ. ಮೂರು ವರ್ಷದ ಹಿಂದೆ ಪದವಿ ಪೂರೈಸಿದವರು, ಅದಕ್ಕಿಂತ ಒಂದೆರಡು ವರ್ಷದ ಮುಂಚೆ ಪದವಿ ಶಿಕ್ಷಣ ಪಡೆದವರ ಸಂಖ್ಯೆ ಕಡಿಮೆ ಇದೆ’ ಎಂದು ಜಿಲ್ಲಾಡಳಿತದ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.
‘ಮತದಾರರ ನೋಂದಣಿಗೆ ಸಾಕಷ್ಟು ಪ್ರಚಾರ ನೀಡಲಾಯಿತು. ನಿರಂತರ ಪ್ರಕಟಣೆ ಮೂಲಕ ಜನರಿಗೆ ತಿಳಿವಳಿಕೆ ನೀಡಲಾಗಿದೆ. ಆದರೂ, ನೋಂದಣಿಗೆ ನೀರಸ ಪ್ರತಿಕ್ರಿಯೆ ಸಿಕ್ಕಿದೆ. ಈ ಹಿಂದಿನ ಚುನಾವಣೆಗಿಂತ 2 ಸಾವಿರ ಮತದಾರರು ಹೆಚ್ಚಳವಾಗಿದ್ದೇ ಸಮಾಧಾನದ ಸಂಗತಿ’ ಎಂದೂ ಹೇಳಿದರು.
‘ಪದವೀಧರ ಮತಕ್ಷೇತ್ರಕ್ಕೆ ಪ್ರತಿ ಐದು ವರ್ಷಕ್ಕೊಮ್ಮೆ ಮತದಾರರ ಪಟ್ಟಿ ಸಿದ್ಧಪಡಿಸುವ ಪದ್ಧತಿಯನ್ನೇ ಕೈಬಿಡಬೇಕು. ಒಮ್ಮೆ ಮತದಾರರಾದವರು ಮತದಾನದ ಅರ್ಹತೆ ಕಳೆದುಕೊಳ್ಳಲು ಸಾಧ್ಯವಿಲ್ಲ. ಆದರೆ, ಪದೇ ಪದೇ ಮತದಾರರ ನೋಂದಣಿ ಪ್ರಕ್ರಿಯೆ ಮಾಡುವ ಕಾರಣದಿಂದಲೇ ಪದವೀಧರರ ಮತದಾರರ ಸಂಖ್ಯೆ ಹೆಚ್ಚುತ್ತಿಲ್ಲ’ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ಅನಮೋಲ್ ರೇವಣಕರ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.