ADVERTISEMENT

ಕಾಡುಹಂದಿ ದಾಳಿಯಿಂದ ಬೆಳೆ ನಾಶ; ರೈತರು ಕಂಗಾಲು

ಸದಾಶಿವ ಎಂ.ಎಸ್‌.
Published 12 ಅಕ್ಟೋಬರ್ 2019, 19:30 IST
Last Updated 12 ಅಕ್ಟೋಬರ್ 2019, 19:30 IST
ಕಾರವಾರ ತಾಲ್ಲೂಕಿನ ಕಡವಾಡದಲ್ಲಿ ಕಾಡುಹಂದಿಗಳ ದಾಳಿಯಿಂದ ಭತ್ತದ ಬೆಳೆಗೆ ಹಾನಿಯಾಗಿರುವುದು.
ಕಾರವಾರ ತಾಲ್ಲೂಕಿನ ಕಡವಾಡದಲ್ಲಿ ಕಾಡುಹಂದಿಗಳ ದಾಳಿಯಿಂದ ಭತ್ತದ ಬೆಳೆಗೆ ಹಾನಿಯಾಗಿರುವುದು.   

ಕಾರವಾರ: ತಾಲ್ಲೂಕಿನ ಕಡವಾಡದಲ್ಲಿ ಭತ್ತದ ಗದ್ದೆಗಳು, ತರಕಾರಿ ಬೆಳೆಗಳ ಮೇಲೆ ಕಾಡುಹಂದಿಗಳ ದಾಳಿಯಿಂದ ರೈತರು ಕಂಗೆಟ್ಟಿದ್ದಾರೆ. ಬೆಳೆದು ನಿಂತ ಪೈರನ್ನು ನಾಶ ಮಾಡಿ ನಷ್ಟ ಉಂಟು ಮಾಡುತ್ತಿವೆ.

ಸಮೀಪದ ಕಾಡಿನಿಂದ ದಾಂಗುಡಿ ಇಡುವ ಹಂದಿಗಳು, ರಾತ್ರಿ ವೇಳೆ ಗದ್ದೆಯಲ್ಲಿ ದಾಂಧಲೆ ಮಾಡುತ್ತಿವೆ. ಪೈರನ್ನು ತಿಂದು, ಭತ್ತದ ಸಸಿಗಳ ಮೇಲೆ ಉರುಳಾಡಿ ತೊಂದರೆ ಕೊಡುತ್ತಿವೆ.ಅವುಗಳನ್ನು ಓಡಿಸಲು ರೈತರು ಪಟಾಕಿ ಸಿಡಿಸಿ ಸುಸ್ತಾಗಿದ್ದಾರೆ.ಗದ್ದೆಯ ಸುತ್ತ ಕಬ್ಬಿಣದ ತಂತಿ ಬೇಲಿ, ಮುಳ್ಳಿನ ಗಿಡಗಳನ್ನುಅಳವಡಿಸಿದ್ದಾರೆ.ಅವುಗಳ ಬಳಿ ಬಿಳಿಯ ಬಟ್ಟೆಗಳನ್ನು ಕಟ್ಟಿ ಹಂದಿಗಳನ್ನು ಬೆದರಿಸಲುಪ್ರಯತ್ನಿಸುತ್ತಿದ್ದಾರೆ.

ರೈತರ ಹರಸಾಹಸದಿಂದ ಅವು ಒಮ್ಮೆ ದೂರ ಓಡಿದರೂ ಮತ್ತೆ ಬರುತ್ತಿವೆ. ಅವುಗಳನ್ನು ನಿಯಂತ್ರಿಸುವುದೇ ದೊಡ್ಡ ಸವಾಲಾಗಿದೆ ಎನ್ನುತ್ತಾರೆ ಸ್ಥಳೀಯರಾದ ಸುಭಾಷ್ ಗುನಗಿ.

ADVERTISEMENT

‘ಈ ಬಾರಿ ಮಳೆ ಹೆಚ್ಚಾಗಿ ಭತ್ತ, ತರಕಾರಿ ಸಸಿಗಳನ್ನು ಉಳಿಸಿಕೊಳ್ಳುವುದೇ ಕಷ್ಟವಾಗಿತ್ತು. ಅಂತೂ ಇಂತು ಕಷ್ಟಪಟ್ಟು ಬೆಳೆಸಿದರೆ ಅದಕ್ಕೆ ಹಂದಿಗಳ ಕಾಟ ಶುರುವಾಗಿದೆ.ಅರಣ್ಯ ಇಲಾಖೆಯವರು ಅರಣ್ಯ ಪ್ರದೇಶಕ್ಕೆ ಪೂರ್ಣ ಪ್ರಮಾಣದಲ್ಲಿ ಬೇಲಿ ಅಳವಡಿಸಿದ್ದರೆ ಈ ಸಮಸ್ಯೆಯನ್ನು ನಿಯಂತ್ರಿಸಬಹುದಿತ್ತು. ರಸ್ತೆಯ ಭಾಗಕ್ಕೆ ಮಾತ್ರ ತಂತಿ ಬೇಲಿ ಹಾಕಲಾಗಿದ್ದು, ಒಳಭಾಗದಲ್ಲಿ ಖಾಲಿ ಬಿಡಲಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಈ ಭಾಗದ ಕಾಡಂಚಿನ ಗದ್ದೆಗಳಿಗೆ ನವಿಲುಗಳ ಹಾವಳಿಯೂ ಹೆಚ್ಚಿದೆ. ತರಕಾರಿ ಬೆಳೆಗಳಿಗೆ ಕೋತಿಗಳು ದಾಳಿ ಮಾಡುತ್ತಿವೆ. ಹೀಗೆ ಕಾಡುಪ್ರಾಣಿಗಳು ತಿಂದು ಉಳಿದಿದ್ದನ್ನು ನಾವು ನೆಚ್ಚಿಕೊಳ್ಳುವಂತಾಗಿದೆ’ ಎಂದು ಸಮಸ್ಯೆಯನ್ನು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.