ADVERTISEMENT

ಹೊನ್ನಾವರ: ಮದ್ದಲೆ ಮಾಂತ್ರಿಕ ಪ್ರಭಾಕರ ಭಂಡಾರಿ

ಎಂ.ಜಿ.ಹೆಗಡೆ
Published 4 ಜನವರಿ 2026, 8:06 IST
Last Updated 4 ಜನವರಿ 2026, 8:06 IST
ಪ್ರಭಾಕರ ಭಂಡಾರಿ
ಪ್ರಭಾಕರ ಭಂಡಾರಿ   

ಹೊನ್ನಾವರ: ಯಕ್ಷಗಾನದ ಹಿಮ್ಮೇಳದ ಕಲಾವಿದರಿಗೆ ತಾರಾ ಮೌಲ್ಯ ತಂದು ಕೊಟ್ಟ ಕಲಾವಿದರಲ್ಲೊಬ್ಬರಾದ ಪ್ರಭಾಕರ ಭಂಡಾರಿ, ಮದ್ದಲೆಗೆ ಮಾತಿನ ಶಕ್ತಿಯನ್ನು ತಂದು ಕೊಟ್ಟ ಅಪರೂಪದ ಮದ್ದಲೆ ವಾದಕ. ವಾದನವನ್ನು ವಂಶಪಾರಂಪರ್ಯ ವೃತ್ತಿಯಾಗಿ ಪಡೆದ ಭಂಡಾರಿ ಕುಟುಂಬದಲ್ಲಿ ಪಾಂಡುರಂಗ ಹಾಗೂ ಹೊನ್ನಮ್ಮ ಭಂಡಾರಿ ದಂಪತಿ ಪುತ್ರನಾಗಿ 1940ರಲ್ಲಿ ಜನಿಸಿದರು. 5ನೇ ತರಗತಿಯವರೆಗೆ ಮಾತ್ರ ಔಪಚಾರಿಕ ಶಿಕ್ಷಣ ಪಡೆದಿದ್ದರಾದರೂ ಯಕ್ಷಗಾನ ರಂಗದ ಮೇಲಿನ ಅವರ ಶ್ರದ್ಧೆ, ತಾಲೀಮು ಮದ್ದಲೆ ಕಲಾವಿದರಾಗಿ ಅವರನ್ನು ಯಕ್ಷಗಾನದಲ್ಲಿ ಉನ್ನತ ಸ್ಥಾನಕ್ಕೇರಿಸಿತು.

ತಮ್ಮ ಮನೆತನದ ವಾದನ ಕೌಶಲ ಪಡೆದಿದ್ದ ಅವರು ತಾಸಮಾರು, ಡೋಳು, ಶಹನಾಯಿ ಹಾಗೂ ಶೃತಿಯನ್ನು ಉತ್ತಮವಾಗಿ ನುಡಿಸಬಲ್ಲವರಾಗಿದ್ದರು. ಮನೆಯಲ್ಲಿ ತನ್ನ ತಂದೆ ಹಾಗೂ ಅಣ್ಣ ನುಡಿಸುತ್ತಿದ್ದ ಮದ್ದಲೆವಾದನಕ್ಕೆ ಮನಸೋತು ಮುಂದೆ ಯಕ್ಷಗಾನದತ್ತ ಹೆಜ್ಜೆ ಹಾಕಿದರು. ಮದ್ದಲೆಯ ಆರಂಭಿಕ ಶಿಕ್ಷಣವನ್ನು ಮನೆಯಲ್ಲೇ ಪಡೆದು ಗುಂಡಬಾಳ ಬಯಲಾಟದ ಮೇಳದಲ್ಲಿ ಮೊದಲ್ಗೊಂಡು ಮದ್ದಲೆಯೊಟ್ಟಿಗಿನ ತಮ್ಮ ಸಹಯಾನ ಮುಂದುವರಿಸಿದರು.

ಅಮೃತೇಶ್ವರಿ, ಸಾಲಿಗ್ರಾಮ, ಇಡಗುಂಜಿ ಮೊದಲಾದ ವೃತ್ತಿ ಮೇಳಗಳಲ್ಲಿ ಮುಖ್ಯ ಮದ್ದಲೆವಾದಕಾರಾಗಿ ನಾಡಿನ ವಿವಿಧೆಡೆಗಳಲ್ಲಿ ಹಲವಾರು ನಾಮಾಂಕಿತ ಮುಮ್ಮೇಳದ ಕಲಾವಿದರ ಯಶಸ್ವಿ ಕಲಾ ಪ್ರದರ್ಶನದಲ್ಲಿ ತಮ್ಮ ಅಮೂಲ್ಯ ಕೊಡುಗೆ ನೀಡಿದರು. ಇಡಗುಂಜಿ ಮೇಳದ ಜೊತೆಯಾಗಿ ಬೆಹರಿನ್, ಇಂಗ್ಲೆಂಡ್, ನೇಪಾಳ ಮತ್ತಿತರ ವಿದೇಶಗಳಲ್ಲಿನ ಪ್ರದರ್ಶನಗಳಲ್ಲೂ ತಮ್ಮ ವಾದನದ ನವಿರು ಕೌಶಲ ತೋರಿಸಿದರು.

ADVERTISEMENT

ಪ್ರಭಾಕರ ಭಂಡಾರಿ ಗಣಪತಿ ಮೂರ್ತಿ ತಯಾರಿಕೆಯಲ್ಲೂ ಸಿದ್ಧಹಸ್ತರಾಗಿದ್ದರು. ಗಣಪತಿಗೆ ಅವರು ತೊಡಿಸುತ್ತಿದ್ದ ಮಣ್ಣಿನ ಕಿರೀಟ ಪ್ರತಿ ಗಣೇಶ ಚತುರ್ಥಿಯ ಸಂದರ್ಭದಲ್ಲೂ ಹೆಚ್ಚಿನ ಪ್ರಶಂಸೆಗೆ ಪಾತ್ರವಾಗುತ್ತಿತ್ತು.

ಕರ್ನಾಟಕ ರಾಜ್ಯೋತ್ಸವ, ನಾರಣಪ್ಪ ಉಪ್ಪೂರು, ನಾವುಡ, ಕೆರೆಮನೆ ಮಹಾಬಲ ಹೆಗಡೆ, ಗಜಾನನ ಹೆಗಡೆ ಪ್ರಶಸ್ತಿಗಳು ಸೇರಿದಂತೆ ಹಲವು ಪ್ರಶಸ್ತಿಗಳು ಪ್ರಭಾಕರ ಭಂಡಾರಿ ಅವರಿಗೆ ಸಂದಿವೆ. ಅವರ ನಿಧನದೊಂದಿಗೆ ಯಕ್ಷಗಾನ ಹಿಮ್ಮೇಳ ಕಲಾವಿದರ ಮಹತ್ವದ ಕೊಂಡಿಯೊಂದು ಕಳಚಿದಂತಾಗಿದೆ.

ಪ್ರಭಾಕರ ಭಂಡಾರಿ ರಂಗದಲ್ಲಿ ಹೆಳವನ್ನೂ ಕುಣಿಸಬಲ್ಲ ಪ್ರತಿಭಾನ್ವಿತ ಮದ್ದಲೆವಾದಕರಾಗಿದ್ದರು
ಕೃಷ್ಣ ಯಾಜಿ ಬಳ್ಕೂರು ಯಕ್ಷಗಾನ ಕಲಾವಿದ
ಪ್ರಭಾಕರ ಭಂಡಾರಿ ನಾಡು ಕಂಡ ಶ್ರೇಷ್ಠ ಮದ್ದಲೆವಾದಕರು ಅವರ ಮದ್ದಲೆ ವಾದನ ಯುವ ಕಲಾವಿದರಿಗೆ ಮಾದರಿಯಾಗಿದೆ
ಯಮುನಾ ಗಾಂವ್ಕರ ಸಂಘಟಕರುಸಹಯಾನ ಸಾಂಸ್ಕೃತಿಕ ಸಂಸ್ಥೆ