
ಯಲ್ಲಾಪುರ: ಪಟ್ಟಣ ಪಂಚಾಯಿತಿಯಲ್ಲೇ ಸರಿಯಾದ ಕಾಮಗಾರಿ ಆಗುತ್ತಿಲ್ಲ. ಪಂಚಾಯಿತಿಯನ್ನು ವ್ಯವಸ್ಥಿತವಾಗಿ ಇಟ್ಟುಕೊಳ್ಳಲಾಗುತ್ತಿಲ್ಲ. ಹೀಗಿರುವಾಗ ಪಟ್ಟಣವನ್ನೇನು ಸರಿಯಾಗಿ ಇಟ್ಟುಕೊಳ್ಳುವುದು? ಎಂದು ರಾಧಾಕೃಷ್ಣ ನಾಯ್ಕ ಪ್ರಶ್ನಿಸಿದರು.
ಬುಧವಾರ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು,`ಪಟ್ಟಣ ಪಂಚಾಯಿತಿಯ ಲಿಫ್ಟ್ ಸದಾ ಹಾಳಾಗಿರುತ್ತದೆ. ಶುದ್ಧ ಕುಡಿಯುವ ನೀರಿನ ಘಟಕದಲ್ಲಿ ನೀರು ಕುಡಿಯುವುದು ಹಾಗಿರಲಿ ಕೈ ತೊಳೆಯಲು ಆಗುವುದಿಲ್ಲ. ಗೋದಾಮಿನಲ್ಲಿ ಅನೇಕ ವಸ್ತುಗಳು ತುಕ್ಕುಹಿಡಿದು ಹಾಳಾಗುತ್ತಿವೆ. ನಮ್ಮದೇ ಶುದ್ಧ ಕುಡಿಯುವ ನೀರಿನ ಘಟಕ ಇಟ್ಟುಕೊಂಡು ಪ್ಲಾಸ್ಟಿಕ್ ಬಾಟಲಿಯ ನೀರನ್ನು ಕುಡಿಯುವ ಕರ್ಮ ಬಂದಿದೆ' ಎಂದರು.
ಕಾಮಗಾರಿ ಸರಿಯಾಗಿ ನಿರ್ವಹಿಸಿ ಎಂದು ಗುತ್ತಿಗೆದಾರರಿಗೆ ಸಲಹೆ ಮಾಡಿದರೆ ಅವರು ಸದಸ್ಯರಿಗೆ ಅವಾಚ್ಯ ಪದಗಳಲ್ಲಿ ನಿಂದಿಸುತ್ತಾರೆ ಎಂದು ನಾಗರಾಜ ಅಂಕೋಲೆಕರ ದೂರಿದರು.
ಯಾವ ಸದಸ್ಯರಿಗೆ ಅವಾಚ್ಯವಾಗಿ ನಿಂದಿಸಿದರೂ ಅದು ಎಲ್ಲರಿಗೂ ತಾಗುತ್ತದೆ. ಈ ಕುರಿತು ವಿಚಾರಿಸೋಣ ಎಂದು ರವಿ ಪಾಟಣಕರ ಹೇಳಿದರು.
ಗ್ರಾಮದೇವಿ ಜಾತ್ರೆಯ ತಯಾರಿ ಎಲ್ಲಿಗೆ ಬಂತು? ದೇವಿ ದೇವಸ್ಥಾನದಿಂದ ಹೆದ್ದಾರಿ ವರೆಗಿನ ರಸ್ತೆ ಸುಧಾರಿಸಬೇಕಿದೆ ಎಂದು ಸತೀಶ್ ನಾಯ್ಕ ಹೇಳಿದರು.
₹5 ಕೋಟಿ ಅನುದಾನಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ಅಧ್ಯಕ್ಷೆ ನರ್ಮಾದಾ ನಾಯ್ಕ ತಿಳಿಸಿದರು.
`ನಾವು ಹೇಳಿದ ಯಾವ ಕಾಮಗಾರಿಯೂ ಆಗುತ್ತಿಲ್ಲ. ಹೇಳುವುದೇ ಒಂದು. ಮಾಡುವುದೇ ಒಂದು. ನಾವು ಹೇಳಿದ ಸ್ಥಳ ಬಿಟ್ಟು ಉಪಯೋಗಕ್ಕೆ ಬಾರದ ಬೇರೆ ಸ್ಥಳದಲ್ಲಿ ಬೀದಿ ದೀಪ ಅಳವಡಿಸಲಾಗುತ್ತಿದೆ. ಸುಮ್ಮನೆ ಇರುತ್ತಾರೆ. ನಡೆಯುತ್ತದೆ ಎಂಬ ಲಘು ಧೋರಣೆ ಪಟ್ಟಣ ಪಂಚಾಯಿತಿಯದೇ ಎಂದು ಪುಷ್ಪಾ ನಾಯ್ಕ ತಮ್ಮ ಕೋಪ ಹೊರಹಾಕಿದರು.
ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಕುಮಾರ ನಾಯ್ಕ ಮಾತನಾಡಿ,`ಸದಸ್ಯರ ಎಲ್ಲ ಸಲಹೆಗಳನ್ನು ಪರಿಗಣಿಸಿ ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಉಪಾಧ್ಯಕ್ಷ ಅಮಿತ್ ಅಂಗಡಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.