
ಯಲ್ಲಾಪುರ: ಪಟ್ಟಣದಲ್ಲಿ ಬೆಳಗಿನ ಜಾವ ವಾಕಿಂಗ್ ಮಾಡಲು ಸರಿಯಾದ ಸ್ಥಳ ಇಲ್ಲ ಎಂಬ ಆರೋಪ ಸಾರ್ವಜನಿಕರಿಂದ ಕೇಳಿ ಬಂದಿದೆ.
ಕಾಳಮ್ಮನಗರದ ತಾಲ್ಲೂಕು ಕ್ರೀಡಾಂಗಣ, ವೈಟಿಎಸ್‌ಎಸ್ ಮೈದಾನ, ಐಬಿ ರಸ್ತೆಯ ಮಕ್ಕಳ ಉದ್ಯಾನದಲ್ಲಿ ಕೆಲವರು ವಾಕಿಂಗ್ ಮಾಡುತ್ತರಾದರೂ ಅಲ್ಲೆಲ್ಲಿಯೂ ವಾಕಿಂಗ್ ಟ್ರ್ಯಾಕ್ ಇಲ್ಲ. ಶಿರಸಿ ರಸ್ತೆಯಲ್ಲಿರುವ ಅರಣ್ಯ ಇಲಾಖೆಯ ಸಸ್ಯೋದ್ಯಾನದಲ್ಲಿ ವಾಕಿಂಗ್ ಟ್ರ್ಯಾಕ್ ನಿರ್ಮಿಸಿದ್ದರೂ ಅದು ಸಾರ್ವಜನಿಕರ ಬಳಕೆಗೆ ದೊರೆಯುತ್ತಿಲ್ಲ. ಗಾರ್ಡನ್ ತೆರೆಯುವ ಸಮಯ ಬೆಳಿಗ್ಗೆ 6ರಿಂದ 8ರವರೆಗೆ, ಸಂಜೆ 4ರಿಂದ 6ರವರೆಗೆ ಎಂದು ಪ್ರವೇಶ ದ್ವಾರದಲ್ಲಿ ಬೋರ್ಡ್ ಇದೆಯಾದರೂ ಈಚೆಗೆ ಅದರ ಬಾಗಿಲು ಮಾತ್ರ ತೆರೆದಿಲ್ಲ.
ʻಪಟ್ಟಣದಲ್ಲಿ ವಾಕಿಂಗ್ ಟ್ರ್ಯಾಕ್ ಸೌಲಭ್ಯ ಹೊಂದಿದ ನಿರ್ದಿಷ್ಟ ಸ್ಥಳ ಇಲ್ಲದ ಕಾರಣ ರಸ್ತೆ ನಡುವೆಯೇ ವಾಕಿಂಗ್ ಮಾಡಬೇಕಿದೆ. ರಸ್ತೆಯ ಅಂಚಿನಲ್ಲಿ ನಡೆದು ಸಾಗೋಣ ಎಂದರೆ ಅಲ್ಲಿ ನಿರ್ಮಿಸಲಾಗಿದ್ದ ಕಾಲುದಾರಿಯನ್ನು ಗೂಡಂಗಡಿಕಾರರು ಒತ್ತುವರಿ ಮಾಡಿದ್ದಾರೆ. ಇನ್ನು ರಸ್ತೆ ಬದಿಯಲ್ಲಿ ವಾಹನಗಳನ್ನು ನಿಲ್ಲಿಸಲಾಗಿರುತ್ತದೆ. ಹೀಗಾಗಿ ಅಪಘಾತದ ಭೀತಿಯಲ್ಲಿಯೇ ಅನಿವಾರ್ಯವಾಗಿ ರಸ್ತೆಯ ಮಧ್ಯದಲ್ಲಿಯೇ ನಡೆಯಬೇಕಿದೆ. ಇದೆಲ್ಲಕ್ಕಿಂತ ಹೆಚ್ಚಾಗಿ ನಸುಕಿನ ಅವಧಿಯಲ್ಲಿ ನಾಯಿಗಳ ಕಾಟವೂ ಜಾಸ್ತಿ. ಹೀಗೆ ಬೆಳಗಿನ ಜಾವ ಭಯದಲ್ಲಿಯೇ ವಾಕಿಂಗ್ ಮಾಡುವಂತಾಗಿದೆ’ ಎನ್ನುತ್ತಾರೆ ರಾಜು ಶೆಟ್ಟಿ.
ಬೆಳಿಗ್ಗೆ 6ಕ್ಕೆ ಶಿರಸಿ ರಸ್ತೆಯಲ್ಲಿ ವಾಕಿಂಗ್ ಮಾಡುತ್ತಿದ್ದ ಮಹಿಳೆಯೊಬ್ಬರ ಮೇಲೆ ಈಚೆಗೆ ಕಾರು ಹರಿದಿದ್ದು, ಅಪಘಾತದಲ್ಲಿ ಅವರ ಹಲ್ಲುಗಳು ಮುರಿದು ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಇಂಥ ಘಟನೆಗೆ ಪಟ್ಟಣದಲ್ಲಿ ಸೂಕ್ತ ವಾಕಿಂಗ್ ಟ್ರ್ಯಾಕ್ ಇಲ್ಲದಿರುವುದೇ ಕಾರಣ ಎಂಬುದು ಜನರ ಅಭಿಪ್ರಾಯ.
ಅರಣ್ಯ ಇಲಾಖೆಯ ಸುಪರ್ದಿಯಲ್ಲಿರುವ ಸಸ್ಯೋದ್ಯಾನವನ್ನು ಬೆಳಗಿನ ಅವಧಿಯಲ್ಲಿ ಸಾರ್ವಜನಿಕರ ಉಪಯೋಗಕ್ಕೆ ತೆರೆಯುವಂತೆ ವ್ಯವಸ್ಥೆ ಕಲ್ಪಿಸಬೇಕು. ಕಾಳಮ್ಮ ನಗರದ ತಾಲ್ಲೂಕು ಕ್ರೀಡಾಂಗಣ, ವೈಟಿಎಸ್‌ಎಸ್ ಮೈದಾನದ ಸುತ್ತ ವಾಕಿಂಗ್ ಟ್ರ್ಯಾಕ್ ನಿರ್ಮಿಸಬೇಕು. ಪಟ್ಟಣ ಪಂಚಾಯಿತಿ ಐಬಿ ರಸ್ತೆಯಲ್ಲಿರುವ ಪಾಳುಬಿದ್ದ ಮಕ್ಕಳ ಉದ್ಯಾನವನ್ನು ಅಭಿವೃದ್ಧಿಪಡಿಸಿ ಅಲ್ಲಿ ವಾಕಿಂಗ್ ಟ್ರ್ಯಾಕ್ ಸೇರಿದಂತೆ ಬೆಳಗಿನ ವ್ಯಾಯಾಮಕ್ಕೆ ಅಗತ್ಯ ಸೌಲಭ್ಯ ಕಲ್ಪಿಸಬೇಕು. ರಸ್ತೆಯ ಅಂಚಿನ ಕಾಲುದಾರಿಯಲ್ಲಿನ ಒತ್ತುವರಿ ತೆರವುಗೊಳಿಸಿ ಸಾರ್ವಜನಿಕರ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು. ವಾಹನ ನಿಲುಗಡೆಗೆ ಸೂಕ್ತ ಸ್ಥಳ ಗುರುತಿಸಿ ರಸ್ತೆಯ ಪಕ್ಕ ವಾಹನಗಳನ್ನು ನಿಲ್ಲಿಸುವವರ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳಬೇಕು. ಆಡಳಿತಕ್ಕೆ ಇಷ್ಟೂ ಮಾಡಲಾಗದೇ’ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.
ಕಾಳಮ್ಮನಗರದ ತಾಲ್ಲೂಕು ಕ್ರೀಡಾಂಗಣ ಹಾಗೂ ಜೋಡುಕೆರೆಯ ಸುತ್ತ ವಾಕಿಂಗ್ ಪಥ ನಿರ್ಮಿಸಿದರೆ ಸಾರ್ವಜನಿಕರಿಗೆ ಅನುಕೂಲವಾಗುತ್ತದೆಜಿ.ಎನ್. ತಾಂಡುರಾಯನ್ ಕ್ರೀಡಾಪಟು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.