ಯಲ್ಲಾಪುರ: ಪಟ್ಟಣದ ಹಲವು ಪ್ರದೇಶಗಳಿಗೆ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಿಸುವುದು ಈಗಲೂ ಮುಂದುವರಿದಿದೆ. ಶಾಶ್ವತ ಕುಡಿಯುವ ನೀರಿನ ಯೋಜನೆ ಕಲ್ಪಿಸಬೇಕು ಎಂಬ ಬೇಡಿಕೆ ಇಂದಿಗೂ ಈಡೇರಿಲ್ಲ ಎಂಬುದು ಜನರ ದೂರು.
ಸಾಕಷ್ಟು ಜಲಮೂಲಗಳನ್ನು ಹೊಂದಿದ್ದರೂ ಪಟ್ಟಣದಲ್ಲಿ ಇಂದಿಗೂ ಶಾಶ್ವತ ಕುಡಿಯುವ ನೀರಿನ ಯೋಜನೆ ಕಾರ್ಯಗತಗೊಂಡಿಲ್ಲ. ಪಟ್ಟಣ ಪಂಚಾಯಿತಿ 82 ಕೊಳವೆ ಬಾವಿಗಳ ನೆರವಿನಿಂದ ವಸತಿ ಬಡಾವಣೆಗೆ ನೀರು ಪೂರೈಸುತ್ತಿದೆ. ₹25 ಕೋಟಿ ವೆಚ್ಚದ ಬೇಡ್ತಿ ನದಿ ನೀರಿನ ಶಾಶ್ವತ ಕುಡಿಯುವ ನೀರಿನ ಯೋಜನೆ ತಾಂತ್ರಿಕ ಕಾರಣದಿಂದ ವಿಫಲವಾಗಿದೆ.
ಸದ್ಯ ಬೊಮ್ಮನಹಳ್ಳಿ ಮೂಲಕ ಪಟ್ಟಣಕ್ಕೆ ಶಾಶ್ವತ ಕುಡಿಯುವ ನೀರು ಪೂರೈಸಲು ₹100 ಕೋಟಿ ವೆಚ್ಚದ ಯೋಜನೆ ಮಂಜೂರಾಗಿದ್ದು ಕಾಮಗಾರಿ ಇನ್ನಷ್ಟೆ ಆರಂಭವಾಗಬೇಕಿದೆ. ಪಟ್ಟಣದ ವಿವಿಧ ಭಾಗದಲ್ಲಿರುವ ಶಾಶ್ವತ ಕುಡಿಯುವ ನೀರಿನ ಘಟಕಗಳು ಸದಾ ಕೆಟ್ಟು ನಿಂತಿರುತ್ತವೆ ಎಂಬ ಆರೋಪವಿದೆ.
‘ಪಟ್ಟಣಕ್ಕೆ ನೀರು ಪೂರೈಸಲು ಒಂದೇ ಜಲಮೂಲವನ್ನು ಆಶ್ರಯಿಸುವುದು ಸರಿಯಲ್ಲ. ನದಿ, ಕೆರೆ ಮೊದಲಾದ 2-3 ಜಲಮೂಲಗಳಿಂದ ಪಟ್ಟಣದ ಬೇರೆ ಬೇರೆ ಭಾಗಗಳಿಗೆ ನೀರು ಪೂರೈಸಬಹುದಾಗಿದೆ. ಪಟ್ಟಣ ವ್ಯಾಪ್ತಿಯಲ್ಲಿ ಅಂತರ್ಜಲಮಟ್ಟ ಕುಸಿಯುತ್ತಿದೆ. ಮೊದಲು 10 ತಾಸು ಪಂಪ್ ಮಾಡಬಹುದಾಗಿದ್ದ ಕೊಳವೆ ಬಾವಿಗಳು ಈಗ 3-4 ತಾಸಿಗೆ ಖಾಲಿಯಾಗುತ್ತಿವೆ’ ಎನ್ನುತ್ತಾರೆ ಪಟ್ಟಣ ಪಂಚಾಯಿತಿ ಸದಸ್ಯ ರಾಧಾಕೃಷ್ಣ ನಾಯ್ಕ.
‘ಕಿರವತ್ತಿಯ ಜಯಂತಿ ನಗರಕ್ಕೆ ಕಳೆದ ವರ್ಷ ಫೆಬ್ರುವರಿಯಿಂದಲೇ ಟ್ಯಾಂಕರ್ ಮೂಲಕ ನೀರು ಪೂರೈಕೆ ಆರಂಭಿಸಲಾಗಿತ್ತು. ಈ ವರ್ಷ ಇದುವರೆಗೂ ಕುಡಿಯುವ ನೀರಿನ ಸಮಸ್ಯೆ ಕಂಡುಬಂದಿಲ್ಲ’ ಎನ್ನುತ್ತಾರೆ ಕಿರವತ್ತಿಯ ವಿನಾಯಕ ಮರಾಠೆ.
‘ಕುಂದರಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಜೇವಾಡ, ರಾಮನಗರ ಹಾಗೂ ವಜ್ರೇಶ್ವರಿ ಕಾಲೊನಿಯಲ್ಲಿ ಜಲಜೀವನ ಮಿಷನ್ ಕಾಮಗಾರಿ ಮುಕ್ತಾಯದ ಹಂತದಲ್ಲಿದ್ದು ಅದು ಮುಕ್ತಾಯವಾದಾಗ ನೀರಿನ ಸಮಸ್ಯೆ ಬಗೆಯರಿಯಲಿದೆ. ಈ ಭಾಗದಲ್ಲಿ ಪದೇ ಪದೇ ವಿದ್ಯುತ್ ವ್ಯತ್ಯಯ ಉಂಟಾಗುತ್ತಿದ್ದು ಅದು ನೀರಿನ ಸಮಸ್ಯೆ ಕಂಡುಬರಲು ಕಾರಣವಾಗಿದೆ’ ಎಂದು ಪಿಡಿಒ ರವಿ ಪಟಗಾರ ಹೇಳಿದರು.
‘ಪಟ್ಟಣದ ನಾಯಕನಕೆರೆ, ಜೋಡುಕೆರೆ, ಅಜ್ಜಪ್ಪನಕೆರೆ, ಕಾಳಮ್ಮನಕೆರೆ, ಚಮಗಾರಕೆರೆಗಳ ಹೂಳೆತ್ತುವ ಮೂಲಕ ಮಳೆನೀರು ಸಂಗ್ರಹಿಸಿ ಅಂತರ್ಜಲವನ್ನು ಹೆಚ್ಚಿಸಬೇಕಿದೆ. ಇಲ್ಲದಿದ್ದರೆ ಬರುವ ದಿನಗಳಲ್ಲಿ ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆ ಕಾಣಿಸಿಕೊಳ್ಳಲಿದೆ’ ಎಂದು ಪಟ್ಟಣ ಪಂಚಾಯಿತಿ ಸದಸ್ಯ ರವಿ ಪಾಟಣಕರ ಹೇಳಿದರು.
ತಾಲ್ಲೂಕಿನಲ್ಲಿ ಸದ್ಯ ನೀರಿನ ಕೊರತೆ ಸಮಸ್ಯೆ ತಲೆದೋರಿಲ್ಲ. ಸಮಸ್ಯೆ ಎದುರಾಗಬಹುದಾದ ಸ್ಥಳಗಳಿಗೆ ಖಾಸಗಿ ಕೊಳವೆಬಾವಿಗಳನ್ನು ಬಾಡಿಗೆ ಪಡೆದು ಇಲ್ಲವೇ ಟ್ಯಾಂಕರ್ ಮೂಲಕ ನೀರು ಪೂರೈಸಲು ಸಿದ್ಧತೆ ಮಾಡಿಕೊಳ್ಳಲಾಗಿದೆರಾಜೇಶ ಡಿ.ದನವಾಡಕರ ತಾಲ್ಲೂಕು ಪಂಚಾಯಿತಿ ಇಒ
ಹಲವೆಡೆ ಕೊರತೆಯ ದೂರು
ಕಿರವತ್ತಿಯ ಪೇಟೆ ಹೊಸಳ್ಳಿ ಖಾರೇವಾಡ ಹಾಗೂ ಜಯಂತಿ ನಗರ ಮದನೂರಿನ ಅಲ್ಕೇರಿ ಗೌಳಿವಾಡ ಚಂದಗುಳಿಯ ಗೌಡ್ರಕೇರಿ ಮಂಚಿಕೇರಿ ಪಟ್ಟಣ ಹಾಸಣಗಿಯ ಶಿರ್ನಾಲಾ ಹಿತ್ಲಳ್ಳಿಯ ಇಳೇಗುಂಡಿ ದಾವಸಗದ್ದೆ ಉಮ್ಮಚಗಿಯ ಸೂರಬೈಲ್ ವಾವಿನಕಟ್ಟಾ ವಜ್ರಳ್ಳಿಯ ಸರಳೇಗುಡ್ಡೆ ಈರಾಪುರ ಮತ್ತು ತೆರಸೆ ಮಲವಳ್ಳಿಯ ಕುಂಬಾರಕುಳಿ ಬಾಸಲ ಮತ್ತು ಜೋಗಾಳಕೇರಿ ದೇಹಳ್ಳಿ ಪಂಚಾಯ್ತಿಯ ತಾನ್ಯಾನಕುಂಬ್ರಿಯಲ್ಲಿ ನೀರಿನ ಕೊರತೆಯ ದೂರುಗಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.