ADVERTISEMENT

ಕುಡಿದ ನಶೆಯಲ್ಲಿ ದೋಣಿ ಚಲಾಯಿಸಿದವನ ಪರದಾಟ: ಸಮುದ್ರ ಮಧ್ಯದಿಂದ ರಕ್ಷಣೆ

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2021, 14:29 IST
Last Updated 27 ಆಗಸ್ಟ್ 2021, 14:29 IST
   

ಕಾರವಾರ: ಕಡಲತೀರದಲ್ಲಿ ನಿಲ್ಲಿಸಿದ್ದ ದೋಣಿಯನ್ನು, ಕುಡಿದ ನಶೆಯಲ್ಲಿ ಸಮುದ್ರದ ಮಧ್ಯಕ್ಕೆ ಚಲಾಯಿಸಿಕೊಂಡು ಹೋಗಿ, ವಾಪಸ್ ಬರಲು ಸಾಧ್ಯವಾಗದೇ ಒದ್ದಾಡಿದ್ದ ಯುವಕನನ್ನು ಕರಾವಳಿ ಕಾವಲು ಪಡೆಯ ಸಿಬ್ಬಂದಿ ಗುರುವಾರ ರಕ್ಷಿಸಿದ್ದಾರೆ.

ಮಹಾರಾಷ್ಟ್ರ ಪನ್ವೇಲ್‌ನ ಸ್ವಪ್ನಿಲ್ ಸುರೇಶ ಯಾದವ್ (21) ರಕ್ಷಣೆಯಾದ ಯುವಕ. ಈತ ಎಂಟು ದಿನಗಳ ಹಿಂದೆ ಕೆಲಸ ಹುಡುಕಿಕೊಂಡು ಕಾರವಾರಕ್ಕೆ ಬಂದಿದ್ದ. ಬುಧವಾರ ಮದ್ಯ ಸೇವಿಸಿ ಕಡಲತೀರಕ್ಕೆ ಹೋಗಿದ್ದವನು, ಕೋಣೆ ಕಡಲತೀರದಲ್ಲಿ ನಿಲ್ಲಿಸಿದ್ದ ‘ಓಂ ಯತಾಳ’ ಎಂಬ ನಾಡದೋಣಿಯನ್ನು ಯಾರಿಗೂ ತಿಳಿಸದೇ ಚಲಾಯಿಸಿಕೊಂಡು ಹೋಗಿದ್ದ. ಸಮುದ್ರ ಮಧ್ಯದಲ್ಲಿರುವ ಲೈಟ್‌ಹೌಸ್ ನೋಡಲೆಂದು ನಡುಗಡ್ಡೆಯ ಸಮೀಪಕ್ಕೆ ಸಾಗಿದ್ದ. ಅಲ್ಲಿ ದೋಣಿಗೆ ಕಲ್ಲು ತಾಗಿದ್ದರಿಂದ ಮುಂದೆ ಸಾಗಲು ಅಥವಾ ತಿರುಗಿಸಲೂ ಆಗದೇ ಒದ್ದಾಡುತ್ತಿದ್ದ.

ಈ ಕುರಿತು ಮಾಹಿತಿ ಪಡೆದ ಕರಾವಳಿ ಕಾವಲುಪಡೆಯ ಇನ್‌ಸ್ಪೆಕ್ಟರ್ ನಿಶ್ಚಲ್ ಕುಮಾರ್ ಹಾಗೂ ತಂಡದವರು ಕಾರ್ಯಾಚರಣೆಗೆ ಇಳಿದರು. ಆತನನ್ನು ಇಂಟರ್‌ಸೆಪ್ಟರ್ ದೋಣಿಯ ಮೂಲಕ ಸುರಕ್ಷಿತವಾಗಿ ದಡಕ್ಕೆ ಕರೆದುಕೊಂಡು ಬಂದು ಆಸ್ಪತ್ರೆಗೆ ದಾಖಲಿಸಿದರು.

ADVERTISEMENT

ಎ.ಎಸ್.ಐ ಶ್ರೀಧರ ಹರಿಕಂತ್ರ, ಸಿಬ್ಬಂದಿ ಮನೋಜ ದುರ್ಗೇಕರ್, ರಾಘವೇಂದ್ರ ನಾಯಕ, ಸೂರಜ್ ತಾಂಡೇಲ, ಪ್ರಕಾಶ ಅಂಬಿಗ, ಪ್ರಕಾಶ ಹರಿಕಂತ್ರ, ಅನಿಲ್ ಬೋಳೇಕರ್, ಅಶೋಕ ದುರ್ಗೇಕರ್, ಗಿರಿಧರ ಹರಿಕಂತ್ರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.